ಚಲಿಸುವ ರೈಲಿಗೆ ಕಲ್ಲೆಸೆತ ಶಿಕ್ಷಾರ್ಹ ಅಪರಾಧ: ಕೊಂಕಣ ರೈಲ್ವೆ ಆರ್‌ಪಿಎಫ್ ಇನ್‌ಸ್ಪೆಕ್ಟರ್

Update: 2019-02-14 16:54 GMT

ಉಡುಪಿ, ಫೆ.14: ಇತ್ತೀಚೆಗೆ ಬಾರಕೂರು ಮತ್ತು ಸೇನಾಪುರದ ನಡುವೆ ಕೊಂಕಣ ರೈಲ್ವೆ ಮಾರ್ಗದಲ್ಲಿ ಚಲಿಸುವ ರೈಲಿಗೆ ಕೆಲವು ಕಿಡಿಗೇಡಿಗಳು ಕಲ್ಲೆಸೆಯುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಇದರಿಂದ ರೈಲಿನ ಕಿಟಕಿ ಗಾಜುಗಳು ಒಡೆದು ಪ್ರಯಾಣಿಕರು ಹಾಗೂ ರೈಲ್ವೆ ಸಿಬ್ಬಂದಿಗಳು ಗಂಭೀರ ಗಾಯಗೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

ಚಲಿಸುವ ರೈಲಿಗೆ ಕಲ್ಲೆಸೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೊಂಕಣ ರೈಲ್ವೆಯ ಆರ್‌ಪಿಎಫ್ ಇನ್‌ಸ್ಪೆಕ್ಟರ್ ಅವರು ತಿಳಿಸಿದ್ದಾರೆ. ಪ್ರಕರಣಗಳ ಗಂಭೀರತೆ ಅರಿಯದೇ ಇಂತಹ ಕೃತ್ಯ ಎಸೆಗುತ್ತಿರುವುದು ಕಂಡುಬಂದಿದ್ದು, ಈ ಕುರಿತು ಪೋಷಕರು ತಮ್ಮ ಮಕ್ಕಳಿಗೆ ಅರಿವು ಮೂಡಿಸುವಂತೆ ಅವರು ಮನವಿ ಮಾಡಿದ್ದಾರೆ. ಅಪ್ರಾಪ್ತರು ಮಾಡುವ ಇಂತಹ ಅಪರಾಧಗಳಿಗೆ ಅವರ ಪೋಷಕರಿಗೂ ಕಾನೂನಿನ ರೀತಿ ಶಿಕ್ಷೆ ವಿಧಿಸಲಾಗುತ್ತದೆ ಎಂದವರು ಹೇಳಿದ್ದಾರೆ.

ರೈಲುಗಳ ಸುಗಮ ಸಂಚಾರ ಮತ್ತು ಪ್ರಯಾಣಿಕರ ಸುರಕ್ಷತೆ ಕುರಿತಂತೆ ರೈಲ್ವೆ ಇಲಾಖೆಯೊಂದಿಗೆ ಸಹಕರಿಸುವಂತೆ ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News