ಮಣಿಪಾಲ ಮ್ಯಾರಥಾನ್‌ಗೆ ಶ್ರೀಲಂಕಾ, ಕೆನ್ಯಾದ ಅಥ್ಲೀಟ್ಸ್

Update: 2019-02-14 16:57 GMT

ಉಡುಪಿ, ಫೆ.14: ಇದೇ ಫೆ.17ರ ರವಿವಾರ ಮುಂಜಾನೆ ನಡೆಯುವ ಮಣಿಪಾಲ ಮ್ಯಾರಥಾನ್‌ನ 2019ನೇ ಆವೃತ್ತಿಯಲ್ಲಿ ಹಲವು ಮಂದಿ ವಿದೇಶಿ ಅಥ್ಲೀಟ್‌ಗಳು ಸೇರಿದಂತೆ 7000ಕ್ಕೂ ಅಧಿಕ ಓಟಗಾರರು ಈಗಾಗಲೇ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದಾರೆ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್(ಮಾಹೆ)ನ ಕ್ರೀಡಾ ಕಾರ್ಯದರ್ಶಿ ಡಾ.ವಿನೋದ್ ನಾಯಕ್ ತಿಳಿಸಿದ್ದಾರೆ.

ಮಾಹೆ ಹಾಗೂ ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್‌ಗಳು ಹಲವು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸುವ ಈ ಪ್ರತಿಷ್ಠಿತ ಹಾಫ್ ಮ್ಯಾರಥಾನ್ ಕೂಟದಲ್ಲಿ ಅಂತಿಮವಾಗಿ ಹತ್ತು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

‘ಮಾನಸಿಕ ಕಾಯಿಲೆ ಕುರಿತು ಜಾಗೃತಿ’ ಈ ಬಾರಿಯ ಮ್ಯಾರಥಾನ್‌ನ ಧ್ಯೇಯವಾಕ್ಯ. ಈಗಾಗಲೇ ಶ್ರೀಲಂಕಾದಿಂದ ಆರು ಮಂದಿ ಹಾಗೂ ಕೆನ್ಯಾದ ಎಂಟು ಮಂದಿ ಮ್ಯಾರಥಾನ್ ಓಟಗಾರರು ಈ ಬಾರಿ 21ಕಿ.ಮೀ. ದೂರದ ಹಾಫ್ ಮ್ಯಾರಥಾನ್‌ನಲ್ಲಿ ಸ್ಪರ್ಧಿಸಲು ಹೆಸರು ನೊಂದಾಯಿಸಿಕೊಂಡಿದ್ದಾರೆ. ಹಾಫ್ ಮ್ಯಾರಥಾನ್‌ನಲ್ಲಿ ಮೊದಲ ಮೂರು ಸ್ಥಾನ ಪಡೆಯುವ ಕ್ರೀಡಾಪಟು ಗಳು ಪ್ರಶಸ್ತಿಯೊಂದಿಗೆ ಕ್ರಮವಾಗಿ 50,000ರೂ., 30,000ರೂ. ಹಾಗೂ 15,000ರೂ. ನಗದು ಬಹುಮಾನ ಪಡೆಯಲಿದ್ದಾರೆ ಎಂದು ಡಾ.ನಾಯಕ್ ತಿಳಿಸಿದರು.

ಮ್ಯಾರಥಾನ್ ಓಟಗಾರರಿಗೆ ಪ್ರಸಿದ್ಧವಾದ ಆಫ್ರಿಕಾ ಖಂಡದ ಇನ್ನೊಂದು ರಾಷ್ಟ್ರವಾದ ಇಥಿಯೋಪಿಯಾದ ಕೆಲವು ಓಟಗಾರರು ಭಾಗವಹಿಸುವ ನಿರೀಕ್ಷೆ ಇದೆ. ದೇಶಾದ್ಯಂತದಿಂದ ಸಾವಿರಾರು ಮಂದಿ ಮಣಿಪಾಲ ಮ್ಯಾರಥಾನ್‌ನಲ್ಲಿ ಭಾಗವಹಿಸಲು ಈಗಾಗಲೇ ಹೆಸರು ನೊಂದಾಯಿಸಿಕೊಂಡಿದ್ದಾರೆ. ಇವರೊಂದಿಗೆ ಮಾಹೆಯ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳೂ ಪಾಲ್ಗೊಳ್ಳಲಿದ್ದಾರೆ ಎಂದರು.

ಮಣಿಪಾಲ ಮ್ಯಾರಥಾನ್ ಪ್ರಾರಂಭಕ್ಕೆ ಇನ್ನು ಕೇವಲ ಎರಡು ದಿನಗಳಷ್ಟೇ ಉಳಿದಿದ್ದು, ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಐಸಿಐಸಿಐ ಬ್ಯಾಂಕ್ ಈ ಬಾರಿಯ ಪ್ರಮುಖ ಪ್ರಾಯೋಜಕ ಸಂಸ್ಥೆಯಾಗಿದ್ದು, ಇದರೊಂದಿಗೆ ಸಿಂಡಿಕೇಟ್ ಬ್ಯಾಂಕ್,ಎಸ್‌ಬಿಐ ಹಾಗೂ ಭಾರತ್ ಪೆಟ್ರೋಲಿಯಂ ಇತರ ಪ್ರಾಯೋಜಕ ಸಂಸ್ಥೆಗಳಾಗಿವೆ. 2018ರ ಗೋಲ್ಡನ್ ಗ್ಲೋಬ್ ರೇಸ್‌ನಲ್ಲಿ ಭಾಗವಹಿಸಿದ ಏಷ್ಯದ ಏಕೈಕ ಸ್ಪರ್ಧಿ ಭಾರತೀಯ ನೌಕಾಪಡೆಯ ಕಮಾಂಡರ್ ಅಭಿಲಾಷ್ ಟಾಮಿ ಅವರು ಈ ಬಾರಿ ಉಪಸ್ಥಿತರಿರುವರು.

ಸ್ಪರ್ಧಿಗಳು 21ಕಿ.ಮೀ. ಕ್ರಮಿಸಬೇಕಾಗಿರುವ ಹಾಫ್ ಮೆರಥಾನ್‌ನ ಮಾರ್ಗವನ್ನು ಅಂತಿಮಗೊಳಿಸಲಾಗಿದೆ. ಮಣಿಪಾಲದಿಂದ ಹೊರಡುವ ಅಥ್ಲೀಟ್‌ಗಳು, ಪೆರಂಪಳ್ಳಿ ಮಾರ್ಗದಲ್ಲಿ ಸಾಗಿ, ಅಂಬಾಗಿಲಿಗೆ ಬಂದು ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಕರಾವಳಿ ಬೈಪಾಸ್‌ಗೆ ಬಂದು ಬನ್ನಂಜೆ ಮಾರ್ಗವಾಗಿ ಎಸ್ಪಿ ಕಚೇರಿ, ಕಿನ್ನಿಮೂಲ್ಕಿ, ಬಿಗ್‌ಬಜಾರ್‌ನಿಂದ ಕೆ.ವಿ.ಮಾರ್ಗದ ಮೂಲಕ ಸಾಗಿ ಹೊಟೇಲ್ ಕಿದಿಯೂರು ಎದುರಿನಿಂದ ಸಾಗಿ ಮಲ್ಪೆ-ಮಣಿಪಾಲ ಮಾರ್ಗದಲ್ಲಿ ಕಲ್ಸಂಕ, ಎಂಜಿಎಂ ಹಾದು ಮಣಿಪಾಲ ತಲುಪಬೇಕಾಗಿದೆ.

ಫೆ.17ರ ಮುಂಜಾನೆ ಆರು ಗಂಟೆಗೆ ಓಟಕ್ಕೆ ಐಸಿಐಸಿಐ ದಕ್ಷಿಣ ಮುಖ್ಯಸ್ಥ ವಿರಾಲ್ ರೂಪಾಣಿ ಹಸಿರುನಿಶಾನೆ ತೋರಿಸಲಿದ್ದಾರೆ. ಇದರೊಂದಿಗೆ ನಡೆಯುವ ಮೂರು ಇತರ ರೇಸ್‌ಗಳಿಗೂ- 10ಕಿ.ಮೀ, 5ಕಿ.ಮೀ., 3ಕಿ.ಮೀ.- 15 ನಿಮಿಷಗಳ ಅಂತರದಿಂದ ಹಸಿರು ನಿಶಾನೆ ತೋರಿಸಲಾಗುತ್ತದೆ ಎಂದು ಡಾ.ವಿನೋದ್ ನಾಯಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News