ಇರಾನ್ ವಿರುದ್ಧ ದಾಳಿಗೆ ಪ್ರತಿಭಟನೆಯ ಫೋಟೊ ಬಳಸಿದ ಟ್ರಂಪ್: ಛಾಯಾಗ್ರಾಹಕಿ ಹೇಳಿದ್ದೇನು ಗೊತ್ತಾ?

Update: 2019-02-14 17:16 GMT

ಟೆಹರಾನ್, ಫೆ. 14: ಆರ್ಥಿಕ ದಿಗ್ಬಂಧನಗಳ ಮೂಲಕ ಪ್ರಾಥಮಿಕ ಸ್ವಾತಂತ್ರ್ಯವನ್ನೇ ನಿರಾಕರಿಸುವ ಅಮೆರಿಕ ಸರಕಾರದ ಕೈಯಲ್ಲಿ ನಾನು ತೆಗೆದ ಚಿತ್ರವೊಂದು ದಾಳವಾಗುವುದು ನನಗಿಷ್ಟವಿಲ್ಲ ಎಂದು ಇರಾನ್‌ನ ಪತ್ರಿಕಾ ಛಾಯಾಗ್ರಾಹಕಿ ಯಾಲ್ಡಾ ಮೋಯೆರಿ ಹೇಳಿದ್ದಾರೆ.

ಇರಾನ್‌ನಲ್ಲಿ ಸರಕಾರ ಬದಲಾವಣೆಗೆ ಕರೆ ನೀಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾಲ್ಡಾ ತೆಗೆದ ಚಿತ್ರವನ್ನು ಬಳಸಿರುವುದನ್ನು ಸ್ಮರಿಸಬಹುದಾಗಿದೆ.

ಇರಾನ್ ಬಗ್ಗೆ ತನ್ನ ಸರಕಾರ ಹೊಂದಿರುವ ಕಠಿಣ ನಿಲುವನ್ನ ಸಮರ್ಥಿಸಿಕೊಳ್ಳಲು ಟ್ರಂಪ್ ನಾನು ತೆಗೆದ ಚಿತ್ರವನ್ನು ಬಳಸಿರುವುದನ್ನು ಖಂಡಿಸುತ್ತೇನೆ ಎಂದು 37 ವರ್ಷದ ಛಾಯಾಗ್ರಾಹಕಿ ಹೇಳಿದ್ದಾರೆ.

ಟ್ರಂಪ್‌ರ ನೀತಿಗಳಿಂದ ಇರಾನ್ ಜನತೆ ಹಾಗೂ ವೈಯಕ್ತಿಕವಾಗಿ ನಾನು ಕೂಡ ಹೆಚ್ಚಿನ ಸಂಕಷ್ಟವನ್ನು ಅನುಭವಿಸಿದ್ದೇವೆ ಎಂದು ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದರು. ಅಮೆರಿಕದಲ್ಲಿ ವಾಸಿಸುತ್ತಿರುವ ನನ್ನ ಕುಟುಂಬದ ಒಂದು ಭಾಗದಿಂದ ನಾನು ಪ್ರತ್ಯೇಕಗೊಂಡಿದ್ದೇನೆ ಎಂದರು.

‘‘ನನ್ನ ಕುಟುಂಬ ಅಮೆರಿಕದಲ್ಲಿದೆ. ಪ್ರಯಾಣ ನಿಷೇಧದಿಂದಾಗಿ ನಾಲ್ಕು ವರ್ಷಗಳಲ್ಲಿ ನಾವು ಪರಸ್ಪರರನ್ನು ನೋಡಿಲ್ಲ. ನನ್ನ ಕುಟುಂಬ ಜೈಲಿನಲ್ಲಿರುವಂತೆ ನನಗೆ ಅನಿಸುತ್ತಿದೆ. ಯಾಕೆಂದರೆ, ಇನ್ನೊಂದು ದೇಶದಲ್ಲಿ ನಾವು ಪರಸ್ಪರರನ್ನು ಭೇಟಿಯಾಗಲು ಸಾಧ್ಯವಿಲ್ಲ’’ ಎಂದರು.

2017ರ ಡಿಸೆಂಬರ್‌ನಲ್ಲಿ ಆರ್ಥಿಕ ಸಂಕಷ್ಟ ಮತ್ತು ಭ್ರಷ್ಟಾಚಾರವನ್ನು ಪ್ರತಿಭಟಿಸಿ ಇರಾನ್‌ನಲ್ಲಿ ಜನರು ಪ್ರತಿಭಟನೆ ನಡೆಸುತ್ತಿದ್ದ ದೃಶ್ಯವನ್ನು ಯಾಲ್ಡಾ ತೆಗೆದಿದ್ದರು. ಅದನ್ನು ಉಲ್ಲೇಖಿಸಿ ಟ್ರಂಪ್, ಸರಕಾರ ಬದಲಾವಣೆಗೆ ಕರೆ ನೀಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News