ಪುಲ್ವಾಮ ಉಗ್ರ ದಾಳಿಯ ಬಗ್ಗೆ ಮಹೇಂದ್ರ ಕುಮಾರ್ ಎತ್ತಿದ ಪ್ರಶ್ನೆಯ ಬಗ್ಗೆ ವ್ಯಾಪಕ ಚರ್ಚೆ

Update: 2019-02-14 17:27 GMT

ಮಂಗಳೂರು, ಫೆ.14: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಇಂದು 2 ದಶಕಗಳಲ್ಲೇ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ನಡೆದಿದ್ದು, 40ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದಾರೆ. ಸಿಆರ್ ಪಿಎಫ್ ಸೈನಿಕರಿದ್ದ ಬಸ್ ಮೇಲೆ ಜೈಶ್ ಸಂಘಟನೆಯ ಉಗ್ರನೋರ್ವ 350 ಕೆ.ಜಿ ಸ್ಫೋಟಕವಿದ್ದ ಕಾರನ್ನು ಢಿಕ್ಕಿ ಹೊಡೆಸಿದ್ದ ಪರಿಣಾಮ ದೇಶದಲ್ಲೇ ಅತೀ ಭೀಕರ ದಾಳಿಗೆ ಪುಲ್ವಾಮ ಸಾಕ್ಷಿಯಾಯಿತು.

ಈ ಭಯೋತ್ಪಾದಕ ದಾಳಿಯನ್ನು ರಾಜಕೀಯ ನಾಯಕರು ಖಂಡಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಉಗ್ರರ ಕೃತ್ಯದ ಬಗ್ಗೆ ತೀವ್ರ ಆಕ್ರೋಶದ ಜೊತೆಗೆ ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಈ ಬಗ್ಗೆ ಇಂದು ಫೇಸ್ಬುಕ್ ಪೋಸ್ಟ್ ಹಾಕಿರುವ ಬಜರಂಗದಳದ ಮಾಜಿ ಮುಖಂಡ, ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಕುಮಾರ್, “ಇದುವರೆಗೆ ಎಂದೂ ನಡೆಯದ ದಾಳಿ ಈ ಸಮಯದಲ್ಲಿ ಯಾಕೆ ನಡೆದಿದೆ ..?... ಏನಿದೆ, ಇದರ ಹಿಂದೆ ಏನು ನಡೆಯುತ್ತಿದೆ?, ದೇಶದಲ್ಲಿ ಒಟ್ಟಾರೆಯಾಗಿ ಗೊಂದಲ ಗೊಂದಲ…. ಒಂದೊಮ್ಮೆ ಇದು ಚುನಾವಣೆಯ ತಂತ್ರವಾಗಿ ಯೋಧರ ಬಲಿ ನಡೆದಿದ್ದೇ ಆದಲ್ಲಿ ಸಂಬಂಧಪಟ್ಟವರು ಯಾರೇ ಆಗಿರಲಿ ಈ ದೇಶ ಎಂದಿಗೂ ಕ್ಷಮಿಸುವುದಿಲ್ಲ. ಪಾಕಿಸ್ತಾನದೊಂದಿಗೆ ಯುದ್ಧ ನಡೆಯಬಹುದು ಚುನಾವಣೆಯ ಸಮಯದಲ್ಲಿ ಎಂಬ ಊಹಾಪೋಹ ತುಂಬಾ ದಿನಗಳಿಂದ ಇತ್ತು. ಆದರೆ ಇದೀಗ ಯುದ್ಧ ನಡೆಯಲಿ, ಬಿಡಲಿ ಏನೇ ಇರಲಿ...  ಎಂದೂ ನಡೆಯದ ಚಟುವಟಿಕೆ ಈ ಸಮಯದಲ್ಲಿ ನಡೆದಿದೆ, ಯೋಧರು ಬಲಿಯಾಗಿದ್ದಾರೆ. ಆದರೆ, ದೇಶದ ಜನರನ್ನು ಭಾವನಾತ್ಮಕವಾಗಿ ಕಟ್ಟಿ ಹಾಕುವ ಪ್ರಯತ್ನವಾಗಿ ಈ ರೀತಿಯ ಒಂದು ಷಡ್ಯಂತ್ರಕ್ಕೆ ಯೋಧರನ್ನು ಬಲಿ ತೆಗೆದುಕೊಂಡಿದ್ದೇ ಆದಲ್ಲಿ ಇತಿಹಾಸ ಕ್ಷಮಿಸುವುದಿಲ್ಲ…” ಎಂದಿದ್ದಾರೆ.

ಮಹೇಂದ್ರ ಕುಮಾರ್ ರ ಈ ಪೋಸ್ಟ್ ಚರ್ಚೆಯನ್ನು ಹುಟ್ಟುಹಾಕಿದೆ. ಚುನಾವಣೆ ತಂತ್ರವಾಗಿ ಯೋಧರ ಬಲಿ ನಡೆದಿದೆ ಎಂದು ಅವರು ಹೇಳಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣ ಬಳಕೆದಾರರು ಪರ, ವಿರೋಧ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News