ದಿಲ್ಲಿಯಲ್ಲಿ ಎಲ್‌ ಜಿಗೆ ಭ್ರಷ್ಟಾಚಾರ ವಿರೋಧಿ ಬ್ಯೂರೊ ನಿಯಂತ್ರಣ ಅಧಿಕಾರ: ಸುಪ್ರೀಂ ಕೋರ್ಟ್

Update: 2019-02-14 17:35 GMT

ಹೊಸದಿಲ್ಲಿ, ಫೆ. 14: ಕೇಂದ್ರ ಹಾಗೂ ದಿಲ್ಲಿ ಮಧ್ಯೆ ಅಧಿಕಾರದ ತಿಕ್ಕಾಟದ ನಡುವೆ, ಕೇಜ್ರಿವಾಲ್ ಸರಕಾರದ ಹೊರಡಿಸಿದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾದ ಮನವಿಯ ಗುಚ್ಛದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರ ನಡೆಸಿ ತೀರ್ಪು ನೀಡಿದೆ. ನಿರ್ದಿಷ್ಟ ಅಂಶಗಳಿಗೆ ಸಂಬಂಧಿಸಿ ಇಬ್ಬರು ನ್ಯಾಯಮೂರ್ತಿಗಳ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಸಾಂವಿಧಾನಿಕ ಪೀಠದ ಇಬ್ಬರು ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಹೇಳಿದ್ದಾರೆ.

ಜಂಟಿ ಕಾರ್ಯದರ್ಶಿ ಹಾಗೂ ಅದಕ್ಕಿಂತ ಮೇಲಿನ ಅಧಿಕಾರಿಗಳನ್ನು ನಿಯೋಜನೆ ಹಾಗೂ ವರ್ಗಾಯಿಸುವ ಅಧಿಕಾರ ಲೆಫ್ಟಿನಂಟ್ ಅವರಿಗೆ ಇರುತ್ತದೆ. ಇತರ ಅಧಿಕಾರಿಗಳನ್ನು ನಿಯೋಜನೆ ಹಾಗೂ ವರ್ಗಾಯಿಸುವ ಅಧಿಕಾರ ದಿಲ್ಲಿ ಸರಕಾರಕ್ಕೆ ಇರುತ್ತದೆ. ಭಿನ್ನಾಭಿಪ್ರಾಯದ ಸಂದರ್ಭದಲ್ಲಿ ಲೆಫ್ಟಿನೆಂಟ್ ಗವರ್ನರ್ ಬೈಜಾಲ್ ಅವರ ನಿರ್ಧಾರವೇ ಅಂತಿಮವಾಗುತ್ತದೆ ಎಂದು ತೀರ್ಪು ಓದಿ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಹೇಳಿದರು. ಭ್ರಷ್ಟಾಚಾರ ವಿರೋಧಿ ಬ್ಯುರೋ ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಅವರ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಸಿಕ್ರಿ ಹೇಳಿದ್ದಾರೆ.

ದಿಲ್ಲಿಯಲ್ಲಿ ‘ಸೇವೆ’ಯ ಕುರಿತು ತೀರ್ಮಾನ ಯಾರ ವ್ಯಾಪ್ತಿಗೆ ಬರಬೇಕು. ದಿಲ್ಲಿ ಸರಕಾರ ಅಥವಾ ಲೆಫ್ಟಿನೆಂಟ್ ಗವರ್ನರ್‌ಗೆ ಎಂಬ ಬಗ್ಗೆ ನಿರ್ಧರಿಸಲು ಮನವಿಯ ಗುಚ್ಛವನ್ನು ಸುಪ್ರೀಂ ಕೋರ್ಟ್ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಿತ್ತು. ತನಿಖಾ ಆಯೋಗವನ್ನು ರಚಿಸುವ ಅಧಿಕಾರ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಇರಲಿದೆ ಎಂದು ಸುಪ್ರೀಂ ಕೋರ್ಟ್ ಸರ್ವಸಮ್ಮತವಾಗಿ ಹೇಳಿದೆ. ಸರಕಾರಿ ವಕೀಲರು ಅಥವಾ ಕಾನೂನು ಅಧಿಕಾರಿಗಳನ್ನು ನಿಯೋಜಿಸುವ ವಿಚಾರದಲ್ಲಿ ಲೆಫ್ಟಿನೆಂಟ್ ಗವರ್ನನರ್‌ಗಿಂತ ದಿಲ್ಲಿ ಸರಕಾರಕ್ಕೆ ಅಧಿಕಾರ ಇರಲಿದೆ ಎಂದು ನ್ಯಾಯಾಲಯ ಹೇಳಿದೆ.

ದಿಲ್ಲಿಯ ಆಡಳಿತಕ್ಕಿಂತ ಅಲ್ಲಿಯ ಲೆಫ್ಟಿನೆಂಟ್ ಗವರ್ನರ್ ಅವರಿಗೇ ಹೆಚ್ಚು ಅಧಿಕಾರ ಇದೆ. ಅತ್ಯಂತ ಮುಖ್ಯವಾದ ಭ್ರಷ್ಟಾಚಾರ ವಿರೋಧಿ ತನಿಖೆಗಳ ಅಧಿಕಾರವು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರ ಕೈಯಲ್ಲೇ ಇರಲಿದೆ. ಕ್ರೇಜಿವಾಲ್ ಸರಕಾರ ಆಗ್ರಹಿಸುತ್ತಿರುವ ಪೊಲೀಸ್ ಇಲಾಖೆಯ ಮೇಲಿನ ನಿಯಂತ್ರಣದ ಕೂಡ ಲೆಫ್ಟಿನೆಂಟ್ ಗವರ್ನರ್ ಅವರ ಕೈಯಲ್ಲಿ ಇರಲಿದೆ. ಇಬ್ಬರು ನ್ಯಾಯಮೂರ್ತಿಗಳು ಬಹುತೇಕ ವಿಚಾರದಲ್ಲೆ ಒಂದೇ ಅಭಿಪ್ರಾಯಕ್ಕೆ ಬಂದರೂ ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರು. ಇಂದು ಒಟ್ಟು 6 ತೀರ್ಪುಗಳನ್ನು ನೀಡಿದ್ದು, ಇದರಲ್ಲಿ ನಾಲ್ಕು ಲೆಫ್ಟಿನೆಂಟ್ ಗವರ್ನರ್ ಅವರ ಪರವಾಗಿದ್ದರೆ, ಇನ್ನೆರೆಡು ದಿಲ್ಲಿ ಸರಕಾರದ ಪರವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News