ಕ್ರೋಧ, ಕ್ರೌರ್ಯದ ಮುಂದೆ ಶಾಂತತೆಯಿಂದ ಪ್ರತಿಕ್ರಿಯಿಸಿ: ಎಂ.ವೀರಪ್ಪ ಮೊಯ್ಲಿ

Update: 2019-02-14 18:04 GMT

ಬೆಳ್ತಂಗಡಿ,ಫೆ.14: ಹಿಂಸೆಯಿಂದ ಹಿಂಸೆಯೇ ಮತ್ತಷ್ಟು ಅಧಿಕವಾಗುತ್ತದೆ. ಕ್ರೋಧ, ಕ್ರೌರ್ಯದ ಮುಂದೆ ಶಾಂತತೆಯಿಂದ ಪ್ರತಿಕ್ರಿಯಿಸುವ ಮೂಲಕ ನೆಮ್ಮದಿಯನ್ನು ಸ್ಥಾಪಿಸಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಹೇಳಿದರು.

ಅವರು, ಗುರುವಾರ ಧರ್ಮಸ್ಥಳ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಸಂದರ್ಭ ಅಮೃತವರ್ಷಿಣಿ ಸಭಾಭವನದಲ್ಲಿ ಗ್ರಂಥಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಐವತ್ತನೇ ವರ್ಷದ ಸುವರ್ಣ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು. 

ಈ ಮಹಾಕಾವ್ಯ ನನ್ನ ಬದುಕನ್ನೇ ಪರಿವರ್ತಿಸಿದೆ. ಆ ಬಳಿಕ ಜೀವನದುದ್ದಕ್ಕೂ ಶಾಂತಿಯ ಮನೋಭಾವನೆಯನ್ನು ಬೆಳೆಸಿಕೊಂಡಿದ್ದೇನೆ. ಸಿಟ್ಟು, ರೋಷವೆಲ್ಲವೂ ಮಾಯಾವಾಗಿದೆ ಎಂದರು.

ದುರ್ಬಲರಾದ ಜನರನ್ನು ಒಟ್ಟುಗೂಡಿಸಿ ಅವರಲ್ಲಿ ಶಕ್ತಿ ತುಂಬುವ ಮಹಾ ಕಾರ್ಯವನ್ನು ಡಾ.ಹೆಗ್ಗಡೆಯವರು ಮಾಡುತ್ತಿದ್ದಾರೆ. ಇದೊಂದು ವಿಸ್ಮಯ. ಕಾರ್ಕಳದಲ್ಲಿ ಬಾಹುಬಲಿಯ ಕೆತ್ತನೆಯಿಂದ ಆರಂಭಿಸಿ, ಅದರ ಸಾಗಾಟ, ಪ್ರತಿಷ್ಠೆ ಎಲ್ಲವೂ ಆಧುನಿಕ ಯುಗದ ವಿಸ್ಮಯವೇ ಆಗಿದೆ. ಜೈನ ಸಂಸ್ಕೃತಿಯಲ್ಲಿ ಬಂದಿರುವಷ್ಟು ಗ್ರಂಥಗಳು ಬೇರೆ ಯಾವ ಸಂಸ್ಕೃತಿಯಲ್ಲೂ ಬಂದಿಲ್ಲ. ಶ್ರವಣಬೆಳಗೊಳ ಭಟ್ಟಾರಕ ಸ್ವಾಮೀಜಿಯವರ ಅಪ್ಪಣೆಯಂತೆ ಬಾಹುಬಲಿಯ ಅಹಿಂಸಾ ದಿಗ್ವಿಜಯ ಮಹಾಕಾವ್ಯವನ್ನು ಬರೆಯಬೇಕಾದರೆ, ಜಗತ್ತಿನಾದ್ಯಂತ ಇರುವ ನೂರಾರು ಗ್ರಂಥಗಳನ್ನು ಅಧ್ಯಯನ ಮಾಡಿ ಬಾಹುಬಲಿಗೆ ಕಾವ್ಯನ್ಯಾಯವನ್ನು ಒದಗಿಸುವ ಪ್ರಯತ್ನ ಮಾಡಿದ್ದೇನೆ ಎಂದರು. 

ಎಂ.ವೀರಪ್ಪ ಮೊಯ್ಲಿಯವರು ಅನುವಾದಿಸಿದ ಬಾಹುಬಲಿ ಅಹಿಂಸಾ ದಿಗ್ವಿಜಯಂ ಗದ್ಯಾನುವಾದದ ಗ್ರಂಥದ ಬಿಡುಗಡೆಯನ್ನು ಶ್ರೀ ಪುಣ್ಯಸಾಗರ ಮಹಾರಾಜರು ನೆರವೇರಿಸಿದರು. ವಿಜಯಾ ಜಿ. ಜೈನ್ ಇರ್ವತ್ತೂರು ಬೀಡು ಅವರ ಧರ್ಮಸ್ಥಳದ ಶ್ರೀ ಗೋಮ್ಮಟೇಶ್ವರ ಚರಿತ್ರೆಯನ್ನು ಶ್ರೀ ವೀರಸಾಗರ ಮುನಿಮಹಾರಾಜರು ಬಿಡುಗಡೆಗೊಳಿಸಿದರು. ಎಸ್ ಎಸ್.ಉಕ್ಕಾಲಿ ಮುಧೋಳ ಬರೆದ ಕೃತಿ ಆದಿಪುರಾಣ ಗ್ರಂಥವನ್ನು ಶ್ರೀ ಸಿದ್ಧಸೇನಾಚಾರ್ಯ ಮುನಿಮಹಾರಾಜರು ನೆರವೇರಿಸಿದರು. ಶ್ರೀ ವರ್ಧಮಾನ ಸಾಗರ ಜೀ ಮಹಾರಾಜರು ಶ್ರೀ ವಿಶುದ್ಧ ಸಾಗರ ಮುನಿ ಮಹಾರಾಜರು ರಚಿಸಿದ ಸೈಂತಾಲೀಸ್ ಶಕ್ತಿಯೋಂಕ ವಿಶದ್ ವ್ಯಾಖ್ಯಾನವನ್ನು ಬಿಡುಗಡೆಗೊಳಿಸಿದರು. 

ಕಾರ್ಯಕ್ರಮಕ್ಕೆ ನಾಡೋಜ ಹಂಪ ನಾಗರಾಜಯ್ಯ ಶುಭ ಹಾರೈಸಿದರು. ವೇದಿಕೆಯಲ್ಲಿ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಮಾಜಿ ಸಚಿವ ಅಭಯಚಂದ್ರ ಜೈನ್, ಸುರೇಂದ್ರ ಕುಮಾರ್, ಕಮಲಾ ಹಂಪನಾ, ಜಿ.ಪಂ.ಮೀನಾಕ್ಷಿ ಶಾಂತಿಗೋಡು, ತಾ.ಪಂ. ಅಧ್ಯಕ್ಷೆ ದಿವ್ಯ ಜ್ಯೋತಿ, ಗ್ರಾ.ಪಂ. ಅಧ್ಯಕ್ಷ ಚಂದನ್ಕಾಮತ್, ಎಸ್. ಎಸ್.ಉಕ್ಕಾಲಿ ಬಾಗಲಕೋಟೆ, ಡಾ. ವಿ.ಎಸ್.ರಾಜಣ್ಣ, ಪುತ್ತೂರು ನರಸಿಂಹ ನಾಯಕ್ ಉಪಸ್ಥಿತರಿದ್ದರು. ಪ್ರೊ. ಬೈರಮಂಗಲ ರಾಮೇಗೌಡ ಮಹಾಕಾವ್ಯದ ವಿವರಣೆ ನೀಡಿದರು. 

ಜಿ.ಪಂ.ಮಾಜಿ ಉಪಾಧ್ಯಕ್ಷೆ ರಾಜಶ್ರೀ ಎಸ್.ಹೆಗ್ಡೆ ಸ್ವಾಗತಿಸಿದರು. ಶ್ರುತಿ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ವಿಜಯರಾಜ ಅತಿಕಾರಿ ವೇಣೂರು ವಂದಿಸಿದರು. 

ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು, ಇಂದು ಅಪರೂಪದ ಒಳ್ಳೆಯ ದಿನ. ಆಗಬೇಕಾದ ಭಾರೀ ಅನಾಹುತವನ್ನು ಶ್ರೀ ಮಂಜುನಾಥ ಸ್ವಾಮಿ ಅಣ್ಣಪ್ಪ ತಪ್ಪಿಸಿದ್ದಾರೆ. ಕಳೆದ ಕೆಲದಿನಗಳಿಂದ ನನ್ನ ಮನಸ್ಸು ಶಾಂತವಾಗಿರಲಿಲ್ಲ. ಗೊಂದಲದಲ್ಲಿತ್ತು. ಅದಕ್ಕೆ ಜ್ಯೋತಿಷಿಯವರ ಹತ್ತಿರ ಈ ವಿಷಯಗಳನ್ನು ತಿಳಿಸಿ ವಿಮರ್ಶೆಗೆ ಒಡ್ಡಿದ್ದೆ. ಅವರು ಒಂದು ಘಟನೆ ನಡೆಯುವ ಸಾಧ್ಯತೆ ಇದೆ. ಅದರ ತೀವ್ರತೆಯನ್ನು ಕಡಿಮೆ ಮಾಡಲು  ವಿಶೇಷ ಪೂಜೆಯನ್ನು ಸಲ್ಲಿಸುವಂತೆ ಸೂಚಿಸಿದರು. ಅದರಂತೆ ವಿಶೇಷ ಪೂಜೆ ಸಲ್ಲಿಸಿದೆ. ಇಂದು ಎಲ್ಲರೂ ಊಟಕ್ಕೆ ತೆರೆಳಿದ್ದ ವೇಳೆ ಅರಮನೆ ಮಂಟಪ ಕುಸಿಯಿತು. ಅಕಸ್ಮಾತ್ ಒಂದು ಗಂಟೆಯ ಮೊದಲು ಈ ಘಟನೆ ನಡೆದಿದ್ದರೆ, ಮುನಿಗಳು, ನಾನು, ನೀವು ಎಲ್ಲರೂ ತೊಂದರೆಗೊಳಗಾಗುತ್ತಿದ್ದರು. ಇದಕ್ಕೆ ಮುನಿಗಳ ತಪಸ್ಸಿನ ಶಕ್ತಿಯೂ ಕಾರಣ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News