ಮಂಗಳೂರು: ‘ಟ್ರಾವೆಲ್ ನೌ’ ಶುಭಾರಂಭ

Update: 2019-02-15 15:40 GMT

ಮಂಗಳೂರು, ಫೆ.15: ಅಂತರಾಷ್ಟ್ರೀಯ ಸಾರಿಗೆ ಸಂಸ್ಥೆಯಾದ ‘ಟ್ರಾವೆಲ್ ನೌ- ಫ್ರಾಮ್ ಡ್ರೀಮ್ ಟು ಡೆಸ್ಟಿನೇಶನ್’ ಇದರ ಮಂಗಳೂರು ಶಾಖೆಯು ನಗರದ ಅತ್ತಾವರದ ನೀಲಗಿರೀಸ್ ಸೂಪರ್ ಮಾರ್ಕೆಟ್ ಮೇಲಿನ ಮಳಿಗೆಯೊಂದರಲ್ಲಿ ಶುಭಾರಂಭಗೊಂಡಿದ್ದು, ರಿಬ್ಬನ್ ಕಟ್ ಮಾಡುವ ಮೂಲಕ ಬ್ಯಾರೀಸ್ ಚೇಂಬರ್ಸ್ ಆಫ್ ಕಾಮರ್ಸ್ (ಬಿಸಿಸಿಐ) ಅಧ್ಯಕ್ಷ ಹಾಜಿ ಎಸ್.ಎಂ. ರಶೀದ್ ಉದ್ಘಾಟಿಸಿದರು.

ಬಿಸಿಸಿಐ ಅಧ್ಯಕ್ಷ ಹಾಗೂ ಎಸ್‌ಎಂಆರ್ ಗ್ರೂಪ್‌ನ ಹಾಜಿ ಎಸ್.ಎಂ.ರಶೀದ್ ಮಾತನಾಡಿ, ಉಮ್ರಾ ಪ್ರವಾಸ ಕೈಗೊಳ್ಳುವುದು ಮೊದಲು ಮುಂಬೈಯಿಂದ ಆರಂಭವಾಯಿತು. ಮಂಗಳೂರಿನಲ್ಲಿ ಅಂತಹ ವ್ಯವಸ್ಥೆ ಇರಲಿಲ್ಲ. ಮಂಗಳೂರಿನಿಂದ ಹಜ್, ಉಮ್ರಾ ಯಾತ್ರಾರ್ಥಿಗಳನ್ನು ಮುಂಬೈ ಮೂಲಕವೇ ಸೌದಿಗೆ ಕರೆದೊಯ್ಯಲಾಗುತ್ತಿತ್ತು. ಇಲ್ಲಿಯವರೆಗೂ ಸೌದಿಯಲ್ಲಿ ಯಾತ್ರಾರ್ಥಿಗಳಿಗೆ ಎಮಿಗ್ರೇಶನ್‌ಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳು ತಲೆದೋರಿದ್ದವು. ಆದರೆ ‘ಟ್ರಾವೆಲ್ ನೌ’ನಿಂದ ಸೌದಿಯ ವಿಮಾನ ನಿಲ್ದಾಣದಿಂದ ನೇರವಾಗಿ ನಿಗದಿತ ಸ್ಥಳಕ್ಕೆ ತಲುಪಿಸುತ್ತಿರುವುದು ಸಂತಸದ ವಿಚಾರ ಎಂದು ತಿಳಿಸಿದರು.

‘ಟ್ರಾವೆಲ್ ನೌ- ಫ್ರಾಮ್ ಡ್ರೀಮ್ ಟು ಡೆಸ್ಟಿನೇಶನ್’ ಇದರ ಲಾಂಛನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಪ್ರೊ. ಡಾ.ಮುಹಮ್ಮದ್ ಇಸ್ಮಾಯೀಲ್, ಧಾರ್ಮಿಕ ಪ್ರಯಾಣದ ಜೊತೆಗೆ ವಿಶ್ವ ಪರ್ಯಟನೆ ಮಾಡುವ ಅವಕಾಶವನ್ನು ಟ್ರಾವೆಲ್ ನೌ ಕಲ್ಪಿಸಿಕೊಡಲಿದೆ. ದುಬೈ, ಯುರೋಪ್, ನೈಜಿರಿಯಾ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ಸುರಕ್ಷಿತ ಪ್ರಯಾಣವನ್ನು ಸಂಸ್ಥೆ ಕೈಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಯಾಣಿಕರು ಸಂಸ್ಥೆ ಏರ್ಪಡಿಸುವ ವಿಶೇಷ ಪ್ಯಾಕೇಜ್‌ಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ವಿಶ್ವಾಸ್ ಬಾವಾ ಬಿಲ್ಡರ್ಸ್‌ನ ಅಬ್ದುಲ್ ರವೂಫ್ ಪುತ್ತಿಗೆ ಮಾತನಾಡಿ, ಹಣವನ್ನು ಕೂಡಿಡುವುದರಲ್ಲಿ ಯಾವುದೇ ಅರ್ಥವಿಲ್ಲ. ಅದರ ಬದಲು ದೇಶ-ವಿದೇಶಗಳನ್ನು ಸುತ್ತಬೇಕು. ಅದರಿಂದ ಹೆಚ್ಚಿನ ಜ್ಞಾನವನ್ನು ಸಂಪಾದಿಸಬಹುದಾಗಿದೆ. ‘ಟ್ರಾವೆಲ್ ನೌ’ನಿಂದ ವಿಶೇಷ ಪ್ಯಾಕೇಜ್‌ಗಳನ್ನು ನೀಡಲಾಗುತ್ತಿದ್ದು ಒಳ್ಳೆಯ ವಿಷಯವಾಗಿದೆ. ‘ಟ್ರಾವೆಲ್ ನೌ’ ತನ್ನನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲಿ ಎಂದು ಶುಭ ಹಾರೈಸಿದರು.

ಆಝಾದ್ ಗ್ರೂಪ್ ಆಫ್ ಕಂಪೆನೀಸ್‌ನ ಮನ್ಸೂರ್ ಅಹ್ಮದ್ ಆಝಾದ್ ಮಾತನಾಡಿ, ಇಸ್ಲಾಂನಲ್ಲಿ ಐದು ಸ್ತಂಭಗಳಿವೆ. ಶಹಾದ್, ನಮಾಝ್, ಝಕಾತ್, ರೋಜಾ, ಹಜ್-ಉಮ್ರಾ ಯಾತ್ರೆ ಕೈಗೊಳ್ಳುವುದು ಪ್ರಮುಖವಾಗಿದೆ. ‘ಟ್ರಾವೆಲ್ ನೌ’ ಸಂಸ್ಥೆಯು ಇದರಲ್ಲಿ ಕೊನೆಯದಾದ ಹಜ್-ಉಮ್ರಾ ಯಾತ್ರೆ ಕೈಗೊಳ್ಳುವವರಿಗೆ ಅವಕಾಶ ಕಲ್ಪಿಸುವ ಮೂಲಕ ಅಲ್ಲಾಹನ ಸೇವೆ ಮಾಡುತ್ತಿರುವುದು ಸ್ವಾಗತಾರ್ಹ ಎಂದರು.

ಸಮಾರಂಭದಲ್ಲಿ ಅರೆಬಿಯನ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್-ಮುಂಬೈನ ಹಾಜಿ ಅಮ್ಜದ್, ಹಾಜಿ ಇಂಟರ್‌ನ್ಯಾಶನಲ್ ಮುಂಬೈನ ಅಶ್ಫಕ್, ಟ್ರಾವೆಲ್ ನೌ ಮಂಗಳೂರು ಶಾಖೆಯ ವ್ಯವಸ್ಥಾಪಕ ನಿರ್ದೇಶಕ ಹಾಜಿ ಸಿರಾಜ್ ಕಪಾಡಿಯಾ, ಶೋಹೈಬ್ ಕಪಾಡಿಯಾ, ಝುಬೈದ್, ರಿಝ್ವಾನ್, ಆಲಂ ಮತ್ತು ನೈಜೀರಿಯಾದ ಅತಿಥಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News