ಕೋಟ ಜೋಡಿ ಕೊಲೆ ಪ್ರಕರಣ: ಇಬ್ಬರು ಪೊಲೀಸ್ ಕಸ್ಟಡಿಗೆ

Update: 2019-02-15 16:06 GMT

ಕುಂದಾಪುರ, ಫೆ.15: ಕೋಟ ಮಣೂರು ಗ್ರಾಮದ ಚಿಕ್ಕನಕೆರೆ ಯುವಕರ ಜೋಡಿ ಕೊಲೆ ಪ್ರಕರಣದ ಎಲ್ಲ 16 ಆರೋಪಿಗಳನ್ನು ಪೊಲೀಸರು ಇಂದು ಕುಂದಾಪುರ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ಇದರಲ್ಲಿ ಫೆ.14ರಂದು ಬಂಧಿಸಲ್ಪಟ್ಟ ಚಂದ್ರಶೇಖರ್ ರೆಡ್ಡಿ ಹಾಗೂ ಕೋಟದ ಸುಜಯ್ (22) ಎಂಬಾತನನ್ನು ಪೊಲೀಸ್ ಕಸ್ಟಡಿಗೆ ಹಾಗೂ ಉಳಿದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣದ ತನಿಖಾಧಿಕಾರಿಯಾಗಿರುವ ಉಡುಪಿ ಡಿವೈಎಸ್ಪಿ ಜೈಶಂಕರ್ ನೇತೃತ್ವದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ರಾಜಶೇಖರ ರೆಡ್ಡಿ, ಮೆಡಿಕಲ್ ರವಿ, ಜಿಪಂ ಸದಸ್ಯ ರಾಘವೇಂದ್ರ ಕಾಂಚನ್, ಹರೀಶ್ ರೆಡ್ಡಿ, ಮಹೇಶ್ ಗಾಣಿಗ, ರವಿಚಂದ್ರ ಪೂಜಾರಿ ಹಾಗೂ ನ್ಯಾಯಾಂಗ ಬಂಧನದಲ್ಲಿದ್ದ ಪವನ್ ಅಮೀನ್, ವೀರೇಂದ್ರ ಆಚಾರ್ಯ, ಅಭಿಷೇಕ್ ಪಾಲನ್, ಸಂತೋಷ್ ಕುಂದರ್, ರೊಟ್ಟಿ ನಾಗ ರಾಜ, ಪ್ರಣವ್ ರಾವ್, ಶಂಕರ ಮೊಗವೀರ, ರತೀಶ್ ಕರ್ಕೇರ ಮತ್ತು ನಿನ್ನೆ ಬಂಧಿತರಾದ ಚಂದ್ರಶೇಖರ್ ರೆಡ್ಡಿ, ಸುಜಯ್ ಎಂಬವರನ್ನು ಬಿಗಿ ಭದ್ರತೆ ಯಲ್ಲಿ ಸಂಜೆ ವೇಳೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ತನಿಖಾಧಿಕಾರಿಯ ಮನವಿಯಂತೆ ಹೆಚ್ಚಿನ ತನಿಖೆಗಾಗಿ ಪ್ರಕರಣದ ಪ್ರಮುಖ ಆರೋಪಿ ಚಂದ್ರಶೇಖರ್ ರೆಡ್ಡಿ ಹಾಗೂ ಸುಜಯ್‌ನನ್ನು ನ್ಯಾಯಾಧೀಶ ಶ್ರೀಕಾಂತ ಎನ್.ಎ. ಫೆ.20ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿ ದರು. ಉಳಿದ 14 ಮಂದಿ ಆರೋಪಿಗಳನ್ನು ಮಾ.1ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ಈ ಮಧ್ಯೆ ಬಂಧಿತ ಪೊಲೀಸ್ ಸಿಬ್ಬಂದಿಯಾದ ಪವನ್ ಅಮೀನ್ ಹಾಗೂ ವೀರೇಂದ್ರ ಆಚಾರ್ಯ ಮತ್ತು ವಿದ್ಯಾರ್ಥಿ ಪ್ರಣವ್ ರಾವ್‌ಗೆ ಜಾಮೀನು ನೀಡುವಂತೆ ಕೋರಿ ಆರೋಪಿ ಪರ ವಕೀಲ ರವಿಕಿರಣ್ ಮುರ್ಡೇಶ್ವರ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಹಾಯಕ ಸರಕಾರಿ ಅಭಿಯೋಜಕಿ ಸುಮಂಗಲಾ ನಾಯ್ಕೆ ಆಕ್ಷೇಪಣೆ ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯನ್ನು ಫೆ.16ಕ್ಕೆ ಮುಂದೂಡಿ ನ್ಯಾಯಾಧೀಶರು ಆದೇಶ ನೀಡಿದರು.

ಕೊಲೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ನ್ಯಾಯಾಲಯದ ಹೊರಗೆ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಈ ಮಧ್ಯೆ ಆರೋಪಿಗಳನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ಹಿರಿಯಡ್ಕ ಕಾರಾಗೃಹಕ್ಕೆ ಕೊಂಡೊಯ್ದರು.

ಮತ್ತೋರ್ವ ಆರೋಪಿಯ ಬಂಧನ


ಜೋಡಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಈ ಮೂಲಕ ಪ್ರಕರಣದ ಬಂಧಿತ ಆರೋಪಿ ಗಳ ಸಂಖ್ಯೆ 16ಕ್ಕೆ ಏರಿದೆ.

ಮಣೂರು ಚಿಕ್ಕನಕೆರೆಯ ಸುಜಯ್ (22) ಬಂಧಿತ ಆರೋಪಿ. ಈತ ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದನು ಎಂದು ತಿಳಿದುಬಂದಿದೆ. ಇದೀಗ ಚಂದ್ರಶೇಖರ್ ರೆಡ್ಡಿ ಜೊತೆ ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News