ಪಾಕ್ ರಾಯಭಾರಿಗೆ ಭಾರತ ಬುಲಾವ್: ಪುಲ್ವಾಮ ದಾಳಿಗೆ ಪ್ರಬಲ ಪ್ರತಿಭಟನೆ

Update: 2019-02-15 16:14 GMT

ಹೊಸದಿಲ್ಲಿ, ಫೆ.16: 40ಕ್ಕೂ ಅಧಿಕ ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದು ಕೊಂಡಿರುವ ಪುಲ್ವಾಮಾ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತವು ಶುಕ್ರವಾರ ಪಾಕಿಸ್ತಾನದ ರಾಯಭಾರಿಯವರನ್ನು ಕರೆಯಿಸಿಕೊಂಡು ತನ್ನ ಪ್ರಬಲ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ.

ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಭಾರತದಲ್ಲಿನ ಪಾಕ್ ಹೈಕಮೀಶನರ್ ಸುಹೈಲ್ ಮುಹಮ್ಮದ್ ಅವರನ್ನು ಕರೆಯಿಸಿಕೊಂಡು, ಪುಲ್ವಾಮಾ ಘಟನೆಗೆ ಸಂಬಂಧಿಸಿ ಪ್ರಬಲ ರಾಜತಾಂತ್ರಿಕ ಪ್ರತಿಭಟನೆಯನ್ನು ವ್ಯಕ್ತಪಡಿಸಿದರೆಂದು ಅಧಿಕೃತ ಮೂಲಗಳು ತಿಳಿಸಿವೆ.

ಪಾಕಿಸ್ತಾನವು ಅದರ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಜೈಶೆ ಮುಹಮ್ಮದ್ ಉಗ್ರಗಾಮಿ ಗುಂಪಿನ ವಿರುದ್ಧ ತಕ್ಷಣವೇ ದೃಢವಾದ ಕ್ರಮವನ್ನು ಕೈಗೊಳ್ಳಬೇಕು ಹಾಗೂ ಭಯೋತ್ಪಾದನೆಯ ಜೊತೆ ನಂಟಿರುವ ವ್ಯಕ್ತಿಗಳು ಅಥವಾ ಸಂಘಟನೆಗಳು ತನ್ನ ನೆಲದಲ್ಲಿ ಕಾರ್ಯಾಚರಿಸುವುದನ್ನು ಅದು ತಡೆಯಬೇಕೆಂದು ಭಾರತವು ಪ್ರಬಲವಾಗಿ ಆಗ್ರಹಿಸಿದೆಯೆಂದು ಮೂಲಗಳು ತಿಳಿಸಿವೆ.

 ಪುಲ್ವಾಮಾ ದಾಳಿಯ ಹೊಣೆಯನ್ನು ಪಾಕ್ ಮೂಲದ ಭಯೋತ್ಪಾದಕ ಗುಂಪು ಜೈಶೆ ಮುಹಮ್ಮದ್ ವಹಿಸಿಕೊಂಡಿದೆ. ಪುಲ್ವಾಮ ಜಿಲ್ಲೆಯ ಅವಂತಿಪೊರದಲ್ಲಿ ಗುರುವಾರ ಭದ್ರತಾಪಡೆಗಳ ವಾಹನಸಾಲಿನ ಮೇಲೆ ಉಗ್ರನೊಬ್ಬ ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ 40ಕ್ಕೂ ಅಧಿಕ ಮಂದಿ ಸಿಆರ್‌ಪಿಎಫ್ ಯೋಧರು ಸಾವನ್ನಪ್ಪಿದ್ದರು.

 ಜೈಶೆ ಮುಹಮ್ಮದ್ ಗುಂಪಿನ ನಾಯಕ ಮುಹಮ್ಮದ್ ಮಸೂದ್ ಅಝರ್‌ನನ್ನು ಭಯೋತ್ಪಾದಕನೆಂದು ಹೆಸರಿಸುವಂತೆ ಹಾಗೂ ಪಾಕಿಸ್ತಾನದ ನೆಲದಿಂದ ಕಾರ್ಯಾಚರಿಸುವ ಎಲ್ಲಾ ಭಯೋತ್ಪಾದಕ ಗುಂಪುಗಳನ್ನು ನಿಷೇಧಿಸುವಂತೆ ಭಾರತವು ಗುರುವಾರ ವಿಶ್ವಸಂಸ್ಥೆಯನ್ನು ಆಗ್ರಹಿಸಿತ್ತು.

ಈ ಮಧ್ಯೆ ಭಾರತವು ಪಾಕಿಸ್ತಾನದಲ್ಲಿನ ಭಾರತೀಯ ಹೈಕಮೀಶನರ್ ಅಜಯ್ ಬಿಸಾರಿಯಾ ಅವರನ್ನು ಇಂದು ಸಮಾಲೋಚನೆಗಾಗಿ ಹೊಸದಿಲ್ಲಿಗೆ  ಕರೆಯಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News