×
Ad

ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ: ಜಮ್ಮು ಕಾಶ್ಮೀರದಲ್ಲಿ ಹಿಂಸಾತ್ಮಕ ಪ್ರತಿಭಟನೆ

Update: 2019-02-15 21:52 IST

ಹೊಸದಿಲ್ಲಿ, ಫೆ. 15: ನಲ್ವತ್ತು ಯೋಧರ ಸಾವಿಗೆ ಕಾರಣವಾದ ಜಮ್ಮು ಹಾಗೂ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಮೇಲೆ ನಡೆದ ಭಯೋತ್ಪಾದಕ ದಾಳಿ ಬಳಿಕ ಗುಂಪೊಂದು ಕೆಲವು ಜನರ ಮೇಲೆ ದಾಳಿ ನಡೆಸಿದೆ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದೆ. ಈ ಹಿನ್ನೆಲೆಯಲ್ಲಿ ಜಮ್ಮುವಿನ ವಿವಿಧ ಭಾಗಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ.

ಗುಂಪೊಂದು ದಾಳಿ ನಡೆಸಿದ ಪರಿಣಾಮ 12ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಧ್ವಜ ಮೆರವಣಿಗೆ ನಡೆಸಲು ಹಾಗೂ ಶಾಂತಿ ಕಾಪಾಡಲು ಎರಡು ಸೇನಾ ತುಕಡಿಗಳನ್ನು ಕಳುಹಿಸಿ ಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋಮು ಹಿಂಸಾಚಾರ ಉದ್ಭವಿಸುವ ಭೀತಿಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ ಎಂದು ಅವರು ತಿಳಿಸಿದ್ದಾರೆ. ನಿಷೇಧಾಜ್ಞೆ ಹೇರಲಾಗಿದೆ ಎಂದು ಧ್ವನಿವರ್ಧಕದಲ್ಲಿ ಘೋಷಿಸಿದ ಹೊರತಾಗಿಯೂ ಮುಖ್ಯವಾಗಿ ಹಳೆ ನಗರದಲ್ಲಿ ಪ್ರತಿಭಟನೆಕಾರರು ಚದುರಲು ನಿರಾಕರಿಸಿದರು.  

‘‘ಮುನ್ನೆಚ್ಚರಿಕೆ ಕ್ರಮವಾಗಿ ಜಮ್ಮು ನಗರದಲ್ಲಿ ನಿಷೇಧಾಜ್ಞೆ ಹೇರಲಾಗಿದೆ.’’ ಎಂದು ಜಮ್ಮುವಿನ ಡೆಪ್ಯುಟಿ ಆಯುಕ್ತ ರಮೇಶ್ ಕುಮಾರ್ ಹೇಳಿದ್ದಾರೆ. ಜಮ್ಮು ನಗರ ಸಂಪೂರ್ಣ ಬಂದ್ ಆಗಿತ್ತು. ರಸ್ತೆಯಲ್ಲಿ ವಾಹನ ಸಂಚಾರ ಇರಲಿಲ್ಲ. ಎಲ್ಲಾ ಅಂಗಡಿ ಹಾಗೂ ಮುಂಗಟ್ಟುಗಳು ಬಂದ್ ಆಗಿದ್ದವು. ಜಿವೆಲ್ ಚೌಕ್, ಪುರಾನಿ ಮುಂಡಿ, ರೆಹಾರಿ ಶಕ್ತಿನಗರ್, ಪೆಕ್ಕಾ ಡಂಗಾ, ಜಾನಿಪುರ, ಗಾಂಧಿನಗರ್ ಹಾಗೂ ಬಕ್ಶಿಂಗರ್ ಸಹಿತ ಜಮ್ಮುವಿನ ಹಲವು ಪ್ರದೇಶಗಳಲ್ಲಿ ಜನರು ಬೀದಿಗಿಳಿದು ಪಾಕಿಸ್ಥಾನದ ವಿರುದ್ಧ ಪ್ರತಿಭಟನೆ ನಡೆಸಿದರು. ಗುಜ್ಜರ್ ನಗರ ಪ್ರದೇಶದಲ್ಲಿ ಗುಂಪು ದಾಳಿ ನಡೆಸಿದ್ದು, ಕಲ್ಲು ತೂರಾಟದಿಂದ ಹಲವು ವಾಹನಗಳು ಜಖಂಗೊಂಡಿವೆ ಎಂದು ಕೆಲವು ವರದಿಗಳು ತಿಳಿಸಿವೆ. ಆದಾಗ್ಯೂ, ಪ್ರಮುಖ ಘರ್ಷಣೆಯೊಂದನ್ನು ತಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News