‘ಸಂತ ಸೇವಾಲಾಲರು ಬಂಜಾರ ಜನಾಂಗದ ಪ್ರಮುಖ ಸಂಘಟಕರು’

Update: 2019-02-15 16:42 GMT

ಉಡುಪಿ, ಫೆ.15: ಸಂತ ಸೇವಾಲಾಲರು ವಿಚಾರವಾದಿ, ಅಹಿಂಸಾವಾದಿ, ವರ್ತಕ, ಭವಿಷ್ಯಕಾರರಾಗಿದ್ದು, ಬಂಜಾರ ಸಮುದಾಯವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಶಿವಮೊಗ್ಗದ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ನಾಗೇಂದ್ರ ನಾಯ್ಕ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕೃಷ್ಣನಗರಿ ಶ್ರೀ ಸಂತ ಸೇವಾಲಾಲ್ ಬಂಜಾರ (ಲಂಬಾಣಿ) ಸಂಘ ಉಡುಪಿ ಇವರ ಸಹಯೋಗದಲ್ಲಿ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ ನಳಂದ ಸಭಾಂಗಣದಲ್ಲಿ ನಡೆದ ಸಂತ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡುತಿದ್ದರು.

ಬಂಜಾರ ಸಮುದಾಯವನ್ನು ಸಂಘಟಿಸಿ, ಸಮುದಾಯದ ಅಭಿವೃದ್ದಿಗೆ ಕೊಡುಗೆ ನೀಡಿದ್ದ ಸಂತ ಸೇವಾಲಾಲರು, ಭಾರತವನ್ನು 17 ಬಾರಿ ಸುತ್ತಾಡಿದ್ದು, ತಮ್ಮ ಅಪಾರ ಅನುಭವದಿಂದ ಬಂಜಾರ ಜನಾಂಗಕ್ಕೆ, ಒಳ್ಳೆಯದನ್ನು ಆಲಿಸು, ಒಳ್ಳೆಯದನ್ನು ಒಪ್ಪಿಕೋ ಮತ್ತು ಒಳ್ಳೆಯದನ್ನು ಸ್ವೀಕರಿಸುವ ತ್ರಿಸೂತ್ರ ಸಂದೇಶ ವನ್ನು ನೀಡಿದ್ದಾರೆ. ಬಂಜಾರ ಜನಾಂಗ ಭಾರತದ ಪುರಾತನ ನಾಗರಿಕತೆಯಾದ ಸಿಂಧೂ ಜನಾಂಗದ ಶೇ.99ರಷ್ಟು ಹೋಲಿಕೆ ಇದೆ. ಇವರ ಬಗ್ಗೆ ಹರಪ್ಪ ಮೊಹೆಂಜದಾರೋದಲ್ಲಿ ನಡೆದ ಉತ್ಖನನ ವೇಳೆ ಮಾಹಿತಿ ಸಿಕ್ಕಿದ್ದು, ಹಿಂದೆ ವ್ಯಾಪಾರದಲ್ಲಿ ತೊಡಗಿದ್ದ ಈ ಜನಾಂಗ, ಪ್ರಸ್ತುತ ವಿಶ್ವದ 144 ದೇಶಗಳಲ್ಲಿ ವಿವಿಧ ಹೆಸರುಗಳಿಂದ ಗುರುತಿಸಿಕೊಂಡಿದ್ದಾರೆ. ಬಂಜಾರ ಜನಾಂಗದ ಮಹಿಳೆಯರು ಧರಿಸುವ ವಿಶಿಷ್ಟ ಉಡುಪುಗಳು ಫ್ಯಾಷನ್ ಜಗತ್ತಿಗೆ ನೀಡಿದ ಕೊಡುಗೆ ಎಂದು ಡಾ.ನಾಗೇಂದ್ರ ನಾಯ್ಕ ಹೇಳಿದರು.

ಕಾರ್ಯಕ್ರಮವನ್ನು ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಉದ್ಘಾಟಿಸಿ ಮಾತನಾಡಿ, ಸಮುದಾಯದ ಅಭಿವೃದ್ದಿಗೆ ಕೊಡುಗೆ ನೀಡಿದ ಮಹನೀಯರ ವಿಚಾರಧಾರೆಗಳನ್ನು ಇಂದಿನ ಜನಾಂಗಕ್ಕೆ ತಲುಪಿಸುವ ಕೆಲಸ ಆಗಬೇಕು ಎಂದರು.

ನಗರಸಭಾ ಸದಸ್ಯ ರಜನಿ ಹೆಬ್ಬಾರ್, ಎಎಸ್ಪಿ ಕುಮಾರಚಂದ್ರ, ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಅಭಿವೃದ್ದಿ ಇಲಾಖೆಯ ಜಿಲ್ಲಾ ಅಧಿಕಾರಿ ಹೆಚ್.ಆರ್.ಲಮಾಣಿ, ಪೊಲಿಪು ಪಿಯು ಕಾಲೇಜಿನ ಪ್ರಾಂಶುಪಾಲ ಪಂಡರೀನಾಥ್, ಕೃಷ್ಣನಗರಿ ಶ್ರೀ ಸಂತ ಸೇವಾಲಾಲ್ ಬಂಜಾರ(ಲಂಬಾಣಿ) ಸಂದ ಅಧ್ಯಕ್ಷ ಶಾಂತಪ್ಪ ಜಿ ಲಂಬಾಣಿ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಸ್ವಾಗತಿಸಿದರು. ಮನೋಹರ್ ಲಂಬಾಣಿ ವಂದಿಸಿ, ಹಿರಿಯ ತಾಂತ್ರಿಕ ಮೇಲ್ವಿಚಾರಕಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News