ಉಡುಪಿ: ಮೂರು ಮಂಗಗಳ ಕಳೇಬರ ಪತ್ತೆ

Update: 2019-02-15 16:47 GMT

ಉಡುಪಿ, ಫೆ.15: ಜಿಲ್ಲೆಯಲ್ಲಿ ಇಂದು ಕೇವಲ ಮೂರು ಮಂಗಗಳ ಕಳೇಬರ ಪತ್ತೆಯಾಗಿದೆ. ಬೆಳ್ವೆ ಪಂಚಾಯತ್‌ನ ಶೇಡಿಮನೆ, ವಂಡ್ಸೆಯ ನಂದ್ರೋಳಿ ಹಾಗೂ ಕರ್ಜೆಯ ಕೆಂಜೂರುಗಳಲ್ಲಿ ಇವುಗಳು ಪತ್ತೆಯಾಗಿವೆ ಎಂದು ಮಂಗನ ಕಾಯಿಲೆಯ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.

ಇವುಗಳಲ್ಲಿ ಯಾವುದರ ಅಟಾಪ್ಸಿ ನಡೆಸಲಾಗಿಲ್ಲ. ಶೇಡಿಮನೆಯಲ್ಲಿ ಈ ಮೊದಲೇ ಮಂಗನಲ್ಲಿ ಕೆಎಫ್‌ಡಿ ವೈರಸ್ ಪತ್ತೆಯಾಗಿದ್ದರೆ, ಉಳಿದೆರಡು ಮಂಗಗಳು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದವು ಎಂದವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 57 ಮಂಗಗಳ ಅಟಾಪ್ಸಿ ನಡೆಸಲಾಗಿದ್ದು, ಇವುಗಳಲ್ಲಿ 56ರ ವರದಿ ಲಭ್ಯವಾಗಿದ್ದು, 44ರಲ್ಲಿ ಯಾವುದೇ ಸೋಂಕು ಪತ್ತೆಯಾಗಿಲ್ಲ. ಜ.8ರಿಂದ 19ರ ನಡುವಿನ ಅವಧಿಯಲ್ಲಿ ಪತ್ತೆಯಾದ ಮಂಗಗಳಲ್ಲಿ 12ರಲ್ಲಿ ಮಾತ್ರ ಕೆಎಫ್‌ಡಿ ಸೋಂಕು ಪತ್ತೆಯಾಗಿತ್ತು ಎಂದರು.

ಅದೇ ರೀತಿ ಶಂಕಿತ ಕೆಎಫ್‌ಡಿ ಸೋಂಕಿಗಾಗಿ ಜಿಲ್ಲೆಯಲ್ಲಿ ಇದುವರೆಗೆ 38 ಮಂದಿಯ ರಕ್ತದ ಪರೀಕ್ಷೆ ನಡೆಸಿದ್ದು, ಇವುಗಳಲ್ಲಿ 35 ಮಂಂದಿಯಲ್ಲಿ ಸೋಂಕು ಪತ್ತೆಯಾಗಿಲ್ಲ. ಮೂವರ ವರದಿ ಇನ್ನಷ್ಟೇ ಬರಬೇಕಿದೆ ಎಂದು ಡಾ.ಭಟ್ ನುಡಿದರು.

ಶುಕ್ರವಾರ ಕಾರ್ಕಳ ತಾಲೂಕಿನ ನಿಟ್ಟೆ ಹಾಗೂ ಬ್ರಹ್ಮಾವರದ ಹೇರೂರು ಗ್ರಾಮ ಪಂಚಾಯತ್‌ಗಳಲ್ಲಿ ಮಂಗನಕಾಯಿಲೆ ಜಾಗೃತಿ ಕಾರ್ಯಕಮಗಳನ್ನು ಆಯೋಜಿಸಲಾಗಿತ್ತು. ಕುಂದಾಪುರ ತಾಲೂಕಿನಾದ್ಯಂತ ಸಂಚರಿಸುತ್ತಿರುವ ಸಂಚಾರಿ ಮೊಬೈಲ್ ವ್ಯಾನ್ ಇಂದು ಬೆಳ್ವೆ ಗ್ರಾಪಂ ವ್ಯಾಪ್ತಿಯಲ್ಲಿ ಸಂಚರಿಸಿ ಜನರಿಗೆ ಮಂಗನ ಕಾಯಿಲೆ ಕುರಿತು ಜಾಗೃತಿ ಮೂಡಿಸಿತು ಎಂದವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News