ಅಬ್ಬಕ್ಕ ಉತ್ಸವ ಅರ್ಥಪೂರ್ಣವಾಗಿ ಆಚರಿಸಿ: ದ.ಕ. ಜಿಲ್ಲಾಧಿಕಾರಿ

Update: 2019-02-15 17:17 GMT

ಮಂಗಳೂರು, ಫೆ.15: ವೀರರಾಣಿ ಅಬ್ಬಕ್ಕ ಉತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್ ಹೇಳಿದರು.

ಜಿಲ್ಲಾ ಪಂಚಾಯತ್‌ನ ಮಿನಿ ಸಭಾಂಗಣದಲ್ಲಿ ಆಯೋಜಿಸಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ, ಉಳ್ಳಾಲದ ಸಮುದ್ರ ತೀರದಲ್ಲಿ ಉತ್ತಮ ವೇದಿಕೆಯನ್ನು ರಚಿಸಿ ಅತ್ಯುತ್ತಮ ಸಾಂಸ್ಕತಿಕ ಕಾರ್ಯಕ್ರಮಗಳನ್ನೊಳಗೊಂಡಂತೆ ರಾಣಿ ಅಬ್ಬಕ್ಕನ ಐತಿಹ್ಯವನ್ನು ಸಾರುವ ಕಾರ್ಯಕ್ರಮಗಳನ್ನು ರೂಪಿಸಲು ವಿವಿಧ ಸಮಿತಿಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಪಂ ಸಿಇಒ ಡಾ.ಸೆಲ್ವಮಣಿ ಕಾರ್ಯಕ್ರಮಕ್ಕೆ ನೋಡಲ್ ಅಧಿಕಾರಿಯಾಗಿದ್ದು, ಸಭೆಯ ಬಳಿಕ ಮೂಡಾ ಆಯುಕ್ತ ಶ್ರೀಕಾಂತ್ ರಾವ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ನಿರ್ಮಿತಿಯ ರಾಜೇಂದ್ರ ಕಲ್ಬಾವಿ, ನಗರಸಭೆ ಆಯುಕ್ತ ವಾಣಿ ವಿ. ಆಳ್ವ ಉಳ್ಳಾಲಕ್ಕೆ ಭೇಟಿ ನೀಡಿ ವೇದಿಕೆ ರಚನೆ ಸಂಬಂಧ ಸ್ಥಳ ಪರಿಶೀಲನೆ ನಡೆಸಿ ಸಮುದ್ರ ತೀರದಲ್ಲೇ ವೇದಿಕೆ ನಿರ್ಮಿಸಿ ಒಂದೇ ವೇದಿಕೆಯಡಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು.

ಉಳ್ಳಾಲದ ಮೊಗವೀರ ಶಾಲೆಯಲ್ಲಿ ಅಬ್ಬಕ್ಕ ಚರಿತ್ರೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಕಲಾ ಉಪನ್ಯಾಸಕರ ಮೂಲಕ ತೈಲವರ್ಣ ಚಿತ್ರಗಳನ್ನು ರಚಿಸಿ ಪ್ರದರ್ಶಿಸುವ ಬಗ್ಗೆ ನಿರ್ಧರಿಸಲಾಯಿತು. ರಾಣಿ ಅಬ್ಬಕ್ಕಳ ಚರಿತೆಯಲ್ಲಿ ಉಳ್ಳಾಲದ ಸಮುದ್ರದಲ್ಲಿ ನಡೆದ ಯುದ್ಧಗಳ ಮಾದರಿಯನ್ನು ರಚಿಸಿ ಪ್ರದರ್ಶಿಸುವ ಬಗ್ಗೆಯೂ ಚರ್ಚಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News