ಸುರತ್ಕಲ್‌: ಭಯೋತ್ಪಾದಕ ಕೃತ್ಯ ಖಂಡಿಸಿ ಮೊಂಬತ್ತಿ ಹಿಡಿದು ಪ್ರತಿಭಟನೆ

Update: 2019-02-15 17:18 GMT

ಮಂಗಳೂರು, ಫೆ.15: ಕಾಶ್ಮೀರದ ಪುಲ್ವಾಮದಲ್ಲಿ ಯೋಧರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಭಯೋತ್ಪಾದಕರು ಢಿಕ್ಕಿ ಹೊಡೆದು 40ಕ್ಕೂ ಅಧಿಕ ಸೈನಿಕರ ಸಾವಿಗೆ ಕಾರಣರಾದ ಭಯೋತ್ಪಾದಕರ ಕೃತ್ಯ ಖಂಡಿಸಿ ಟೀಂ ಇಂಡಿಯಾ ಸುರತ್ಕಲ್‌ನಿಂದ ಮೊಂಬತ್ತಿ ಹೊತ್ತಿಸಿ ಪ್ರತಿಭಟನೆ ನಡೆಸಲಾಯಿತು.

ಆರಂಭದಲ್ಲಿ ಹುತಾತ್ಮ ಯೋಧರಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಟೀಂ ಇಂಡಿಯಾದ ಸಂಸ್ಥಾಪಕ ಮತ್ತು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಭಯೋತ್ಪಾದಕರ ಕೃತ್ಯ ದೇಶದ ಹಾಗೂ ಸೇನೆಯ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ, ಆಂತರಿಕವಾಗಿ ದುರ್ಬಲಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದರು.

ಇಡೀ ದೇಶದ ಜನರು ಒಂದಾಗಿ ಇಂತಹ ಸವಾಲನ್ನು ಎದುರಿಸಬೇಕು. ಹುತಾತ್ಮ ಯೋಧರ ಕುಟುಂಬಗಳಿಗೆ ಪರಿಹಾರ ಮತ್ತು ಉದ್ಯೋಗ ನೀಡಿ ಸರಕಾರ ಯೋಧರ ಕುಟುಂಬಗಳಿಗೆ ಧೈರ್ಯ ತುಂಬಬೇಕು. ಯೋಧರ ಮೇಲಿನ ದಾಳಿ ರಾಜಕಾರಣಕ್ಕೆ ಬಳಸದಂತೆ ಎಚ್ಚರ ವಹಿಸಬೇಕು ಎಂದರು.

ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಮಾಜಿ ಯೋಧ ನವೀನ್ ಪೂಜಾರಿ, ಟೀಂ ಇಂಡಿಯಾದ ಅಜ್ಮಲ್ ಅಹ್ಮದ್, ಶ್ರೀನಾಥ್ ಕುಲಾಲ್, ಬಿ.ಕೆ. ಮಕ್ಸೂದ್, ಸಮೀರ್, ಹಂಝ ಮೈಂದಗುರಿ, ಕಾನ ಮಸೀದಿ ಅಧ್ಯಕ್ಷ ಬಿ.ಎಸ್.ಉಮರ್ ಅನೀಸ್, ಅಬೂಬಕರ್ ಬಾವ ಜೋಕಟ್ಟೆ, ಕರುಣಾಕರ ಶೆಟ್ಟಿ, ಐ.ಮುಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News