ಸೆಂಟ್ರಲ್ ಮಾರ್ಕೆಟ್ ಆಸುಪಾಸಿನ ಬೀದಿಬದಿ ವ್ಯಾಪಾರಿಗಳ ತೆರವಿಗೆ ಆಗ್ರಹ

Update: 2019-02-15 17:43 GMT

ಮಂಗಳೂರು, ಫೆ.15: ಸೆಂಟ್ರಲ್ ಮಾರ್ಕೆಟ್ ಆಸುಪಾಸು ಬೀದಿ ವ್ಯಾಪಾರಿಗಳು ಹೆಚ್ಚಿದ್ದು, ಗ್ರಾಹಕರು ಮಾರುಕಟ್ಟೆಯೊಳಗೆ ಬರಲು ಸಾಧ್ಯವಿಲ್ಲದಂತಾಗಿದೆ. ಅವರನ್ನು ತೆರವು ಮಾಡಬೇಕು ಎಂದು ಮಾರುಕಟ್ಟೆ ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ 106ನೇ ಫೋನ್‌ಇನ್ ಕಾರ್ಯಕ್ರಮದಲ್ಲಿ ಅಹವಾಲು ವ್ಯಕ್ತಪಡಿಸಿದ ವ್ಯಾಪಾರಿಯೊಬ್ಬರು, ಮಾರುಕಟ್ಟೆ ಒಳಗಡೆಯ ವ್ಯಾಪಾರಿಗಳಿಗೆ ವ್ಯಾಪಾರವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸ್ಥಿತಿ ಇದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಉಮಾ ಪ್ರಶಾಂತ್, ಇದನ್ನು ಮಹಾನಗರಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ನಗರದ ಬಂಟ್ಸ್ ಹಾಸ್ಟೆಲ್, ಪಿವಿಎಸ್, ಬಲ್ಮಠ ಮತ್ತಿತರ ಕಡೆ ಫುಟ್‌ಪಾತ್‌ಗಳಲ್ಲಿ ಕೇಬಲ್‌ಗಳು ಎದ್ದು ಕಾಣುತ್ತಿದ್ದು ಪಾದಚಾರಿಗಳು ಎಡವಿ ಬೀಳುವ ಅಪಾಯವಿದೆ. ಅದನ್ನು ತೆರವು ಮಾಡಬೇಕು ಎಂದು ವ್ಯಕ್ತಿಯೊಬ್ಬರು ಒತ್ತಾಯಿಸಿದರು. ಕಿನ್ನಿಗೋಳಿಯಲ್ಲಿ ಫುಟ್‌ಪಾತ್ ಮೇಲೆ ವಾಹನ ಪಾರ್ಕಿಂಗ್ ಮಾಡುತ್ತಾರೆ. ಕೆಲವು ಕಡೆ ಸಾಮಾಗ್ರಿಗಳನ್ನೂ ಇಡುತ್ತಿದ್ದಾರೆ. ಇದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ದೂರಿದರು. ಕೋಟೆಕಾರ್-ಮಡ್ಯಾರ್ ಮಧ್ಯೆ ಓಡಾಡುವ ನಾಲ್ಕು ಖಾಸಗಿ ಬಸ್‌ಗಳ ಪೈಕಿ 2 ಬಸ್ ಕಳೆದ 2 ತಿಂಗಳಿನಿಂದ ಓಡಾಟ ನಿಲ್ಲಿಸಿವೆ. ಅಲ್ಲದೆ ಈ ರೂಟ್‌ಗೆ 4 ಸರಕಾರಿ ಬಸ್ ಮಂಜೂರಾಗಿದ್ದು, 2 ಮಾತ್ರ ಚಲಿಸುತ್ತಿವೆ ಎಂದು ಸ್ಥಳೀಯರೊಬ್ಬರು ದೂರಿದರು. ಬಿಜೈಯಲ್ಲಿ ಬೆಳಗ್ಗೆ 6 ಗಂಟೆಗೆ ವೈನ್‌ಶಾಪ್ ತೆರೆಯುತ್ತಿದ್ದಾರೆ. ಬಿಜೈ ಬಳಿ ಸ್ಲೀಪರ್ ಕೋಚ್ ಬಸ್‌ಗಳು ಪಾರ್ಕಿಂಗ್ ಮಾಡುತ್ತಿವೆ ಎಂದು ಸಾರ್ವಜನಿಕರೊಬ್ಬರು ಆರೋಪಿಸಿದರು.

ಈ ಎಲ್ಲಾ ಅಹವಾಲುಗಳನ್ನು ಆಲಿಸಿದ ಡಿಸಿಪಿ ಉಮಾ ಪ್ರಶಾಂತ್ ಸೂಕ್ತ ಕ್ರಮದ ಭರವಸೆ ನೀಡಿದರು.

ಮಹಾಕಾಳಿಪಡ್ಪು ರೈಲ್ವೆ ಗೇಟ್ ಬಳಿ ಪೊಲೀಸರು ಪ್ರತಿ ದಿನವೂ ಇರುವುದಿಲ್ಲ. ಇದರಿಂದ ಬಹಳಷ್ಟು ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ದೂರಿದರು. ಅಲ್ಲಿಗೆ ಇಬ್ಬರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅವರು ಎಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಪರಿಶೀಲಿಸುವುದಾಗಿ ಡಿಸಿಪಿ ಹೇಳಿದರು.

ಸುಳ್ಯ, ಪುತ್ತೂರು, ಧರ್ಮಸ್ಥಳದಿಂದ ಮಂಗಳೂರಿಗೆ ಬರುವ ಬಸ್‌ಗಳಲ್ಲಿ ಸ್ಟೇಟ್‌ಬ್ಯಾಂಕ್ ಎಂದು ನಾಮ ಫಲಕ ಹಾಕಿರುತ್ತಾರೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಮಂಗಳೂರು ಎಂದು ಬರೆದು ಆವರಣದಲ್ಲಿ ಸ್ಟೇಟ್‌ಬ್ಯಾಂಕ್ ಎಂದು ಹಾಕಿದರೆ ಎಲ್ಲರಿಗೂ ತಿಳಿಯುತ್ತದೆ ಎಂದು ಪ್ರಸಾದ್ ಎಂಬವರು ಸಲಹೆ ನೀಡಿದರು. ಈ ಬಗ್ಗೆ ಕೆಎಸ್ಸಾರ್ಟಿಸಿ ಅಧಿಕಾರಿಗಳ ಗಮನಕ್ಕೆ ಸೆಳೆಯುವುದಾಗಿ ಡಿಸಿಪಿ ಹೇಳಿದರು.

ಡಿಸಿಪಿ ಹನುಮಂತರಾಯ, ಎಸಿಪಿಗಳಾದ ಮಂಜುನಾಥ ಶೆಟ್ಟಿ, ಶ್ರೀನಿವಾಸ ಗೌಡ ಆರ್., ಮದನ್ ಗಾಂವ್ಕರ್, ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಉಪಸ್ಥಿತರಿದ್ದರು.
*ಈ ಸಂದರ್ಭ ಜಮ್ಮು ಕಾಶ್ಮೀರದಲ್ಲಿ ಉಗ್ರ ದಾಳಿಗೆ ಹುತಾತ್ಮರಾದ ಯೋಧರಿಗೆ ಒಂದು ನಿಮಿಷ ವೌನ ಪ್ರಾರ್ಥನೆ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News