ಶ್ರೀನಿವಾಸ್ ವಿವಿಯ ಪ್ರಥಮ ಘಟಿಕೋತ್ಸವ: ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಗೆ ಗೌರವ ಡಾಕ್ಟರೇಟ್

Update: 2019-02-15 17:47 GMT

ಸುರತ್ಕಲ್, ಫೆ.15: ಇಲ್ಲಿಗೆ ಸಮೀಪದ ಮುಕ್ಕ ಶ್ರೀನಿವಾಸ ಕ್ಯಾಂಪಸ್‌ನಲ್ಲಿ ಶುಕ್ರವಾರ ಜರುಗಿದ ಶ್ರೀನಿವಾಸ ಯುನಿವರ್ಸಿಟಿಯ ಪ್ರಥಮ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಗೆ ಗೌರವ ಡಾಕ್ಟರೇಟ್ ನೀಡಲಾಯಿತು.

ಬೆಂಗಳೂರಿನ ರಾಜೀವಗಾಂಧಿ ಯೂನಿವರ್ಸಿಟ್ ಆಫ್ ಹೆಲ್ತ್ ಸೈನ್ಸ್‌ನ ವೈಸ್ ಚಾನ್ಸಲರ್ ಡಾ.ಎಸ್.ಸಚ್ಚಿದಾನಂದ ಹಾಗೂ ಶ್ರೀನಿವಾಸ್ ಯುನಿವರ್ಸಿಟಿಯ ಕುಲಪತಿ ಸಿಎ ಎ.ರಾಘವೇಂದ್ರ ರಾವ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಪ್ರಥಮ ಘಟಿಕೋತ್ಸವದಲ್ಲಿ 1,400 ವಿದ್ಯಾರ್ಥಿಗಳಿಗಳಿಗೆ ಪದವಿ ಪ್ರದಾನ, ಒಬ್ಬರಿಗೆ ಪಿಎಚ್‌ಡಿ ಹಾಗೂ ಮೂವರಿಗೆ ಡಿ.ಲಿಟ್ ಪದವಿ ಪ್ರದಾನಿಸಲಾಯಿತು.

ಪ್ರಜ್ಞಾವಂತ ಸಮಾಜ ನಿರ್ಮಣ ಅಗತ್ಯ: ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ವಿಶ್ವೇಶತೀರ್ಥ ಸ್ವಾಮೀಜಿ ವಿದ್ಯೆಯಿಂದ ವಿದ್ಯಾವಂತ ಹಾಗೂ ಪ್ರಜ್ಞಾವಂತ ಸಮಾಜ ನಿರ್ಮಾಣವಾಗಬೇಕು.ಮಾನವ ಹೃದಯ ವಿಕಾಸಕ್ಕೆ ವಿದ್ಯೆಯೂ ಬೇಕು. ಇದರಿಂದ ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಬೆಳೆದು ಬರಲು ಸಾಧ್ಯ. ವಿದ್ಯೆಯಿಂದ ಮಾನವನಿಗೆ ತೃಪ್ತಿ ಎಂಬುದು ಸಿಕ್ಕಿದಾಗ ಆತ ಸಮಾಜಕ್ಕೂ ವಿದ್ಯೆಯ ಮೂಲಕ ಕೊಡುಗೆ ನೀಡಬಲ್ಲ ಎಂದರು.

ಸಂಸ್ಥೆಯು ಗೌರವ ಡಾಕ್ಟರೇಟ್ ನೀಡಿರುವುದನ್ನು ಪ್ರೀತಿಯಿಂದ ಸ್ವೀಕರಿಸಿದ್ದೇನೆ. ಸಂಸ್ಥೆಯು ವಿವಿಧ ಶೈಕ್ಷಣಿಕ ಚಟುವಟಿಕೆ ನಡೆಸುತ್ತಾ ಸಮಾಜಕ್ಕೆ ವಿದ್ಯಾವಂತರನ್ನು ಕೊಡುವುದರ ಮೂಲಕ ವಿದ್ಯಾನಿವಾಸವಾಗಿ ಬೆಳಗುತ್ತಿದೆ ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಶ್ಲಾಘಿಸಿದರು.

ಡಾ.ಎಸ್. ಸಚ್ಚಿದಾನಂದ ಮಾತನಾಡಿ ಇಂದಿನ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ವಿಫುಲ ಆಯ್ಕೆಗೆ ಅವಕಾಶವಿದೆ.ವೃತ್ತಿಪರ ಶಿಕ್ಷಣ ಪಡೆದವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ.ದೇಶದ ಒಳಿತಿಗಾಗಿ ಈ ವಿದ್ಯೆ ಬಳಕೆಯಾಗಬೇಕು ಎಂದರು.

ಕುಲಪತಿ ಸಿಎ ಎ ರಾಘವೇಂದ್ರ ರಾವ್ ಪದವಿ ಪಡೆದ ವಿದ್ಯಾರ್ಥಿ ಸಮೂಹಕ್ಕೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಟ್ರಸ್ಟಿಗಳಾದ ಎ.ವಿಜಯಲಕ್ಷ್ಮಿ ಆರ್.ರಾವ್, ಪ್ರೊ.ಎ.ಮಿತ್ರಾ ಎಸ್.ರಾವ್, ಪದ್ಮಿನಿ ಕುಮಾರ್, ರಿಜಿಸ್ಟ್ರಾರ್ ಡಾ.ಅನಿಲ್ ಕುಮಾರ್, ವಿವಿಧ ವಿಭಾಗದ ಡೀನ್, ಮುಖ್ಯಸ್ಥರು, ಉಪನ್ಯಾಸಕ ವರ್ಗ, ವಿದ್ಯಾರ್ಥಿಳ ಪೋಷಕರು ಉಪಸ್ಥಿತರಿದ್ದರು.

ಸಂಸ್ಥೆಯ ಪ್ರೊ. ಚಾನ್ಸಲರ್ ಡಾ.ಎ.ಶ್ರೀನಿವಾಸ ರಾವ್ ಸ್ವಾಗತಿಸಿದರು. ವೈಸ್ ಚಾನ್ಸಲರ್ ಡಾ.ಪಿ.ಎಸ್.ಐತಾಳ್ ವರದಿ ವಾಚಿಸಿದರು.ಡಾ.ಶ್ರೀನಿವಾಸ್ ಮಯ್ಯ ಡಿ.ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News