ಧರ್ಮಸ್ಥಳ ಬಾಹುಬಲಿಯ ಮಹಾಮಸ್ತಕಾಭಿಷೇಕ ಸಮವಸರಣ ದರ್ಶನ

Update: 2019-02-15 18:04 GMT

ಬೆಳ್ತಂಗಡಿ, ಫೆ. 15:  ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದ ಸಮೀಪ ರಚಿಸಲಾದ ವರ್ತುಲಾಕಾರದ ಆಕರ್ಷಕ ವಿನ್ಯಾಸದ ಸಮವಸರಣದಲ್ಲಿ ಶುಕ್ರವಾರ ವಿಶೇಷ ಸಂಭ್ರಮ-ಸಡಗರದೊಂದಿಗೆ ಸಮವಸರಣ ದರ್ಶನ ನಡೆಯಿತು.  

ತೀರ್ಥಂಕರರು ತಮ್ಮ ದಿವ್ಯ ಧ್ವನಿಯಿಂದ ಉಪದೆದೀಶ ನೀಡುವ ಧರ್ಮಸಭೆಗೆ ಸಮವಸರಣ ಎನ್ನುತ್ತಾರೆ. ಇಲ್ಲಿ ಉಪದೇಶಾಮೃತ ಪಡೆಯಲು ಸರ್ವರಿಗೂ ಸಮಾನ ಅವಕಾಶ ಇರುವುದರಿಂದ ಇದಕ್ಕೆ ಸಮವಸರಣ ಎನ್ನುತ್ತಾರೆ.

ಹೆಗ್ಗಡೆಯವರ ನಿವಾಸದಿಂದ ಭವ್ಯ ಮೆರವಣಿಗೆಯಲ್ಲಿ ಧರ್ಮ ಚಕ್ರ ಹೊತ್ತು ಸರ್ವಾಹ್ನ ಯಕ್ಷ ದೇವರ ಮೂತಿಯನ್ನು ಸಮವಸರಣ ವೇದಿಕೆಗೆ ಕರೆ ತರಲಾಯಿತು. ಸಮವಸರಣ ಮಂಟಪದಲ್ಲಿ ಚೆಂಡೆವಾದನದೊಂದಿಗೆ ಸರ್ವಾಹ್ನ ಯಕ್ಷ ಉತ್ಸವ ನಡೆಯಿತು. “ಏನು ರಮ್ಯ, ಏನು ಸೌಮ್ಯ” ಎಂಬ ಯಕ್ಷಗಾನ ಶೈಲಿಯ ಹಾಡಿಗೆ 32 ಮಂದಿ ಹಿರಿಯ ಹಾಗೂ ಕಿರಿಯ ಯಕ್ಷಗಾನ ಕಲಾವಿದರು ಸಮವಸರಣದ ಸುತ್ತ ನರ್ತನ ಮಾಡಿ ಸಮವಸರಣದ ಸೊಗಡನ್ನು ಹೆಚ್ಚಿಸಿದರು.

ಆಚಾರ್ಯ ಶ್ರೀ 108 ವರ್ಧಮಾನ ಸಾಗರ ಮುನಿಮಹಾರಾಜರು ಮತ್ತು ಆಚಾರ್ಯ ಶ್ರೀ 108 ಪುಷ್ಪದಂತ ಮುನಿಮಹಾರಾಜರು ಹಾಗೂ ಎಪ್ಪತ್ತು ಮಂದಿ ದಿಗಂಬರ ಮುನಿಗಳು, ಕ್ಷುಲ್ಲಕರು, ಮಾತಾಜಿಯವರು ದಿವ್ಯ ಸಾನ್ನಿಧ್ಯ ವಹಿಸಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಶ್ರದ್ಧಾ ಮತ್ತು ಅಮಿತ್ ಹಾಗೂ ಕುಟುಂಬ ವರ್ಗದವರು ಅಷ್ಟವಿಧಾರ್ಚನೆ ಪೂಜೆಯಲ್ಲಿ ಭಾಗವಹಿಸಿದರು. ಭರತ ಚಕ್ರವರ್ತಿಯಾಗಿ ಡಿ. ಶ್ರೇಯಸ್ ಕುಮಾರ್ ಮತ್ತು ರಾಣಿ ಸುಭದ್ರ ದೇವಿಯಾಗಿ ಸಂಹಿತಾ ಸಮಾರಂಭದ ಶೊಭೆಯನ್ನು ಹೆಚ್ಚಿಸಿದರು.

ಸಮವಸರಣಕ್ಕೆ ಬಂದ ಭರತ ಚಕ್ರವರ್ತಿ ತನ್ನ ಸಹೋದರ ಬಾಹುಬಲಿ ಕಠಿಣ ತಪಸ್ಸು ಮಾಡಿದರೂ ಕೇವಲಜ್ಞಾನ ಪ್ರಾಪ್ತಿ ಏಕೆ ಆಗಲಿಲ್ಲ ಎಂಬ ತನ್ನ ಮನದ ಶಂಕೆಯನ್ನು ವ್ಯಕ್ತ ಪಡಿಸುತ್ತಾನೆ. ಆತ ತಪಸ್ಸಿಗೆ ನಿಂತ ನೆಲ ಭರತ ಚಕ್ರವರ್ತಿಗೆ ಸೇರಿದೆ ಎಂಬ ಕಷಾಯ ಆತನ ಮನದಲ್ಲಿದೆ. ನೀನು ಆತನ ಪಾದಕ್ಕೆರಗಿ ಕ್ಷಮೆ ಕೇಳು ಎಂದು ಓಂ ಕಾರ ಧ್ವನಿಯಿಂದ ಕೇಳಿ ಬರುತ್ತದೆ. ಭರತ ಚಕ್ರವರ್ತಿ ಬಾಹುಬಲಿಯ ಪಾದಕ್ಕೆರಗಿ ಕ್ಷಮೆಯಾಚನೆ ಮಾಡಿದಾಗ ಆತನಿಗೆ ಕೇವಲಜ್ಞಾನ ಪ್ರಾಪ್ತಿಯಾಗುತ್ತದೆ ಈ ದೃಶ್ಯಗಳನ್ನು ಅತ್ಯಂತ ಸುಂದರವಾಗಿ ಪ್ರದರ್ಶಿಸಲಾಯಿತು. 

ಕನಕಗಿರಿಯ ಭುವನಕೀರ್ತಿ ಭಟ್ಟಾರಕರು ಮಾತನಾಡಿ ಭಗವಂತನ ಉಪದೇಶ ಸಾರವನ್ನು ಋಷಿ-ಮುನಿಗಳು ಗ್ರಂಥಗಳಲ್ಲಿ ಸಾದರ ಪಡಿಸಿದ್ದಾರೆ. ಸಮವಸರಣದಲ್ಲಿ ತೀರ್ಥಂಕರರ ಧರ್ಮೋಪದೇಶದಿಂದ ನಾವು ಪಾವನರಾಗುತ್ತೇವೆ. ಧರ್ಮಸ್ಥಳಕ್ಕೆ ಬಂದವರ ದುಃಖ-ದುಮ್ಮಾನಗಳೆಲ್ಲ ದೂರವಾಗಿ ಸಂತೋಷ, ನೆಮ್ಮದಿ ಸಿಗುತ್ತದೆ. ಸಮವಸರಣದಲ್ಲಿದ್ದವರೆಲ್ಲ ಭವ್ಯಾತ್ಮರು, ದಿವ್ಯಾತ್ಮರು ಎಂದು ಅವರು ಅಭಿಪ್ರಾಯ ಪಟ್ಟರು.

ನರಸಿಂಹರಾಜಪುರದ ಲಕ್ಷೀಸೇನ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಧರ್ಮಸ್ಥಳವು ನಾಡಿನ ಜಾಗೃತ ಧರ್ಮಕ್ಷೇತ್ರವಾಗಿದೆ. ತಪ್ಪುಗಳಾಗುವುದು ಸಹಜ. ಆದರೆ ತಪ್ಪನ್ನು ತಿದ್ದಿಕೊಂಡು ಸುಧಾರಣೆ ಮಾಡಿದರೆ ಜೀವನ ಪಾವನವಾಗುತ್ತದೆ. ಸಮವಸರಣದಿಂದ ಧರ್ಮಜಾಗೃತಿಯಾಗಿ ನಮ್ಮ ಜ್ಞಾನ ಕ್ಷಿತಿಜ ವಿಸ್ತಾರವಾಗುತ್ತದೆ ಎಂದು ಸ್ವಾಮೀಜಿ ಹೇಳಿದರು. ಇಂದು ಜನರು ಗುರುಗಳನ್ನು ದೂರ ಮಾಡಿ “ಗೂಗಲ್”ಗೆ ಮೊರೆ ಹೋಗುತ್ತಾರೆ ಎಂದು ಸ್ವಾಮೀಜಿ ಕಳವಳ ವ್ಯಕ್ತ ಪಡಿಸಿದರು.

ಅರಹಂತಗಿರಿ ಜೈನಮಠದ ಧವಳಕೀರ್ತಿ ಭಟ್ಟಾರಕರು ಮಾತನಾಡಿ, ಸಮವಸರಣದಲ್ಲಿ ನಮ್ಮ ಆಧ್ಯಾತ್ಮಿಕ ಶಕ್ತಿ ಹೆಚ್ಚಾಗಿ ಮುಕ್ತಿ ಸಿಗುತ್ತದೆ. ನಂಬಿಕೆಯೇ ಜೀವನವಾಗಿದೆ. ದೇವರ ದರ್ಶನ, ಗುರುಗಳ ಸೇವೆ ಹಾಗೂ ಸ್ವಾಧ್ಯಾಯದಿಂದ ಪಾಪಕರ್ಮಗಳ ನಾಶವಾಗುತ್ತದೆ ಎಂದು ಅವರು ಹೇಳಿದರು. ಹೊಂಬುಜ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಕಂಬದಹಳ್ಳಿ ಜೈನ ಮಠದ ಭಾನುಕೀರ್ತಿ ಭಟ್ಟಾರಕರು ಉಪಸ್ಥಿತರಿದ್ದರು. 

ಮಹಾಮಸ್ತಕಾಭಿಷೇಕ:

ಧರ್ಮಸ್ಥಳದಲ್ಲಿ  ಬಾಹುಬಲಿಯ ಮಹಾಮಸ್ತಕಾಭಿಷೇಕ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯುತ್ತಿದ್ದು  ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಕುಟುಂಬಸ್ಥರಿಂದ ಶನಿವಾರ ಬೆಳಿಗ್ಗೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ 8.45ರ ಮೀನ ಲಗ್ನದಲ್ಲಿ ಬಾಹುಬಲಿ ಸ್ವಾಮಿಗೆ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯುತ್ತದೆ.

ಸುಮೂಹೂರ್ತದಲ್ಲಿ ಡಾ. ಹೆಗ್ಗಡೆಯವರು ಹಾಗೂ ಕುಟುಂಬಸ್ಥರು ಪಾವನಗೊಳಿಸಲಾದ 1008 ಕಲಶಗಳ ನೀರನ್ನು ಅಟ್ಟಳಿಗೆ ಮೇಲೆ ಕೊಂಡೊಯ್ದು ಬಾಹುಬಲಿಯ ಶಿರದ ಮೇಲೆ ಅಭಿಷೇಕ ಮಾಡಲಿದ್ದಾರೆ. ಇದರಲ್ಲಿ ಹತ್ತುಬಗೆಯ ಕಲಶಗಳಿದ್ದು ಮಂಗಳ ಕಲಶ, ಅಮೃತ ಕಲಶ, ಸಿದ್ದಕಲಶ, ರತ್ನ ಕಲಶ, ದಿವ್ಯ ಕಲಶ, ಸುವರ್ಣ ಕಲಶ, ರಜತ ಕಲಶ, ಕಾಜು ಕಲಶ, ತಾಮ್ರ ಕಲಶ ಹಾಗೂ ಸರ್ವಮಂಗಳ ಕಲಶಗಳಾಗಿವೆ. 

ಇದಾದ ಬಳಿಕ ಹತ್ತು ಬಗೆಯ ದ್ರವ್ಯಗಳಿಂದ ಬಾಹುಬಲಿಗೆ ಅಭಿಷೇಕ ಮಾಡಲಾಗುತ್ತದೆ. ಮೊದಲು ಎಳನೀರಿನಿಂದ ಅಭಿಷೇಕ ಮಾಡಲಾಗುತ್ತದೆ, ಬಳಿಕ ಕಬ್ಬಿನ ರಸದ ಅಭಿಷೇಕ ನಡೆಯುತ್ತದೆ. ಮೂರನೆಯದಾಗಿ ಶುದ್ದ ಹಾಲಿನಿಂದ ಅಭಿಷೇಕ ಮಾಡುತ್ತಾರೆ, ಬಳಿಕ ಅಕ್ಕಿ ಹಿಟ್ಟಿನ ಅಭಿಷೇಕ ನಡೆಯುತ್ತದೆ.  ಇದಾದಬಳಿಕ ಅರಿಶಿನದ ದ್ರಾವಣದಿಂದ ಅಭಿಷೇಕಮಾಡಲಾಗುತ್ತದೆ. ಆರನೇಯದಾಗಿ ಕಷಾಯಾಭಿಷೇಕ ಇದನ್ನು ಕಲ್ಕ ಚೂರ್ಣ ಎಂದೂ ಕರೆಯುತ್ತಾರೆ. ಔಷಧ ಗುಣವಿರುವ ಮರದ ಕೆತ್ತೆಗಳನ್ನು ಉಪಯೋಗಿಸಿ ಇದನ್ನು ತಯಾರಿಸಲಾಗುತ್ತದೆ. ಬಳಿಕ ಚತುಷ್ಕೋನ ಅಭಿಷೇಕ ನಡೆಯುತ್ತದೆ. ಇದು ಪವಿತ್ರ ಜಲ, ಎಂಟನೇಯದಾಗಿ ಶ್ರೀಗಂಧಾಭಿಷೇಕ ನಡೆಯುತ್ತದೆ. ಇದಾದಬಳಿಕ ಚಂದನಾಭಿಷೇಕ ಹಾಗೂ ಕೊನೆಯದಾಗಿ ಅಷ್ಟಗಂಧ ಲೇಪನಾವಗುತ್ತದೆ. ಬಳಿಕ ಪುಷ್ಪವೃಷ್ಟಿಯಾಗುತ್ತದೆ.

ಪ್ರತಿಯೊಂದು ದ್ರವ್ಯದಿಂದ ಅಭಿಷೇಕ ನಡೆದಾಗಲೂ ಸೂರ್ಯನ ಕಿರಣಗಳೂ ಸೇರಿ ಬಾಹುಬಲಿ ವೈವಿಧ್ಯಮಯವಾದ ವರ್ಣಗಳಲ್ಲಿ ಕಂಗೊಳಿಸುತ್ತಾನೆ ಇದನ್ನು ನೋಡುವುದೇ ಒಂದು ಅಪರೂಪದ ಅನುಭವವಾಗುತ್ತದೆ. 

ಮಹಾ ಮಸ್ತಕಾಭಿಷೇಕ ವೀಕ್ಷಿಸಲು ಬರುವವರಿಗೆ ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಿದ್ದು, ರತ್ನಗಿರಿಗೆ ಹೋಗಿ ಮಸ್ತಕಾಭಿಷೇಕ ನೋಡಲು ಉಚಿತ ವಾಹನ ಸೌಲಭ್ಯವಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News