ಡೀಸೆಲ್ ಕಳ್ಳತನ: ನಾಲ್ವರು ಆರೋಪಿಗಳ ಬಂಧನ

Update: 2019-02-15 18:23 GMT

ಮಂಗಳೂರು, ಫೆ.15: ನಗರದ ಹೊರವಲಯ ಪಣಂಬೂರು ಎನ್‌ಎಂಪಿಟಿ ಬಸ್ ನಿಲ್ದಾಣದ ಬಳಿ ನಡೆದ ಡೀಸೆಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉತ್ತರ ಪ್ರದೇಶ ರಾಜ್ಯದ ಹಾಗೂ ಪ್ರಸ್ತುತ ಬಂಗ್ರ ಕೂಳೂರು ನಿವಾಸಿಗಳಾದ ಪ್ರೇಮಚಂದ್ರ ಯಾದವ್ ಯಾನೆ ಪ್ರೇಮ್, ನಾನ್ ಬಾಬು, ಬಲವಂತ್ ಕುಮಾರ್, ಮಧ್ಯಪ್ರದೇಶ ರಾಜ್ಯದ ಸತ್ನಾ ಜಿಲ್ಲೆಯ ರಾಜ್‌ಕುಮಾರ್ ರಜಾಕ್ ಯಾನೆ ಲಾಲಾ ಬಂಧಿತ ಆರೋಪಿಗಳು.

ಫೆ.13ರಂದು ಪಣಂಬೂರು ಎನ್‌ಎಂಪಿಟಿ ಬಸ್ ನಿಲ್ದಾಣದ ಬಳಿ ರೀನಸ್ ಲೊಜಿಸ್ಟಿಕ್ ಕಂಪೆನಿಯ ಟ್ಯಾಂಕರ್‌ವೊಂದರಿಂದ ಆರೋಪಿಗಳು ಸುಮಾರು 900 ಲೀಟರ್ ಡೀಸೆಲ್ ಕಳ್ಳತನ ಮಾಡಿದ ಬಗ್ಗೆ ರೀನಸ್ ಲೊಜಿಸ್ಟಿಕ್ ಕಂಪೆನಿಯ ಮ್ಯಾನೇಜರ್ ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾರ್ಯಾಚರಣೆ ನಡೆಸಿದ ಪೊಲೀಸರು, ಬಂಧಿತ ಆರೋಪಿಗಳಿಂದ ಸುಮಾರು 40 ಲಕ್ಷ ವೌಲ್ಯದ 12 ಚಕ್ರದ ಟ್ಯಾಂಕರ್ ಲಾರಿ, ಸುಮಾರು 46 ಸಾವಿರ ರೂ. ಮೌಲ್ಯದ 900 ಲೀಟರ್ ಡೀಸೆಲ್ ಮತ್ತು ಕೃತ್ಯಕ್ಕೆ ಬಳಸಿದ ಇತರ ಪರಿಕರಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ ಗೌಡ ನೇತೃತ್ವ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ., ಪಣಂಬೂರು ಠಾಣಾ ಪಿಎಸ್ಸೈ ಉಮೇಶ್‌ಕುಮಾರ್ ಎಂ.ಎನ್. ಹಾಗೂ ಠಾಣಾ ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News