ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ

Update: 2019-02-16 14:44 GMT

ಜಮ್ಮು, ಫೆ. 16: ಜಮ್ಮುವಿನ ಕೆಲವು ಪ್ರದೇಶಗಳಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಹೇರಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಸಂಜೆಯಿಂದ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಶುಕ್ರವಾರ ಬೆಳಗ್ಗೆ ಕೆಲವು ಶಾಂತಿಯುತ ಪ್ರತಿಭಟನೆಗಳು ನಡೆದಿದ್ದವು. ಆದರೆ ಅಪರಾಹ್ನ ಅದು ಅಶಾಂತಿಗೆ ತಿರುಗಿತ್ತು. ಕೆಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ನಿಷೇಧಾಜ್ಞೆ ಮುಂದುವರಿಸಲಾಗಿದೆ. ಮನೆಯಿಂದ ಹೊರಗೆ ಬರದಂತೆ ಜನರಲ್ಲಿ ಮನವಿ ಮಾಡಲಾಗಿದೆ. ಎಂದು ಜಮ್ಮುವಿನ ಡೆಪ್ಯುಟಿ ಕಮಿಷನರ್ ರಮೇಶ್ ಕುಮಾರ್ ಹೇಳಿದ್ದಾರೆ.

ವದಂತಿಗಳನ್ನು ನಂಬದಂತೆ ಹಾಗೂ ಪರಿಸ್ಥಿತಿ ಸಹಜ ಸ್ಥಿತಿಗೆ ತರಲು ಆಡಳಿತದೊಂದಿಗೆ ಸಹಕರಿಸುವಂತೆ ತಿಳಿಸಲಾಗಿದೆ. ಶಿಕ್ಷಣ ಸಂಸ್ಥೆಗಳು ಮುಚ್ಚಿದ್ದವು ಎಂದು ಕುಮಾರ್ ಹೇಳಿದ್ದಾರೆ. ಪರಿಸ್ಥಿತಿ ಹದಗೆಡಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಸಿವಿಲ್ ಸೆಕ್ರೇಟರಿಯೇಟ್ ಉದ್ಯೋಗಿಗಳು ಹಾಗೂ ಕಾಶ್ಮೀರಿಗಳಿಗೆ ಭದ್ರತೆ ನೀಡಲಾಗಿದೆ. ದಾರ್ಮಿಕ ಸ್ಥಳಗಳಿಗೆ ರಕ್ಷಣೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜನರ ಚಲನವಲನ ಪರಿಶೀಲಿಸಲು ವಿವಿಧ ರಸ್ತೆಗಳಲ್ಲಿ ಸಾಧನಗಳನ್ನು ಅಳವಡಿಸಲಾಗಿದೆ. ಪರಿಸ್ಥಿತಿ ಅವಲೋಕಿಸಲು ಸೇನೆಯ ಹೆಲಿಕಾಪ್ಟರ್ ಹಾಗೂ ಡ್ರೋನ್‌ಗಳನ್ನು ಬಳಸಲಾಗಿದೆ. ಮೊಬೈಲ್ ಇಂಟರ್‌ನೆಟ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಬ್ರಾಡ್‌ಬ್ಯಾಂಡ್‌ಗಳ ವೇಗವನ್ನು ಕಡಿತಗೊಳಿಸಲಾಗಿದೆ ಎಂದು ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News