ಬಾಲಕಿಯ ಅತ್ಯಾಚಾರ: ಫಾ ರಾಬಿನ್ ಗೆ 20 ವರ್ಷ ಜೈಲು

Update: 2019-02-16 14:49 GMT

ತಿರುವನಂತಪುರಂ, ಫೆ.16: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ತಲಶ್ಯೇರಿಯ ಪೋಕ್ಸೊ ನ್ಯಾಯಾಲಯವು ಫಾದರ್ ರಾಬಿನ್ ವಡಕ್ಕುಂಚೆರಿಗೆ 20 ವರ್ಷ ಕಠಿಣ ಜೈಲುಶಿಕ್ಷೆ ಹಾಗೂ 2 ಲಕ್ಷ ರೂ. ದಂಡ ವಿಧಿಸಿದೆ ಎಂದು ವರದಿ ತಿಳಿಸಿದೆ.

ಈ ಪ್ರಕರಣದಲ್ಲಿ ಇತರ ಆರೋಪಿಗಳಾದ ಥಂಗಮ್ಮ ನೆಲ್ಲಿಯಾಣಿ, ವಯನಾಡ್ ಬಾಲ ಕಲ್ಯಾಣ ಸಮಿತಿ(ಸಿಡಬ್ಲೂಸಿ) ಅಧ್ಯಕ್ಷ ಫಾದರ್ ಥಾಮಸ್ ಜೋಸೆಫ್ ಥರಕಮ್, ಸಮಿತಿಯ ಸದಸ್ಯೆ, ಕೈಸ್ತ ಸನ್ಯಾಸಿನಿ(ಭಗಿನಿ) ಬೆಟ್ಟೀ ಜೋಸ್, ವಯನಾಡ್‌ನಲ್ಲಿರುವ ಅನಾಥಾಶ್ರಮದ ಮೇಲ್ವಿಚಾರಕರಾದ ಭಗಿನಿ ಒಫೇಲಿಯಾ, ಭಗಿನಿಯರಾದ ಲಿಸ್ ಮರಿಯಾ ಮತ್ತು ಅನಿತಾರನ್ನು ಶನಿವಾರ ಖುಲಾಸೆಗೊಳಿಸಲಾಗಿದೆ. ಬಾಲಕಿಯ ಮೇಲೆ ಅತ್ಯಾಚಾರ ನಡೆಸಲು ಇವರು ಸಹಕರಿಸಿದ್ದರು ಎಂದು ಆರೋಪಿಸಲಾಗಿತ್ತು.

2016ರ ಮೇ ತಿಂಗಳಲ್ಲಿ ಅತ್ಯಾಚಾರ ಘಟನೆ ನಡೆದಿತ್ತು. ತಾನು ಕಲಿಯುತ್ತಿದ್ದ ಶಾಲೆಯ ಮ್ಯಾನೇಜರ್ ಕೂಡಾ ಆಗಿರುವ 48 ವರ್ಷದ ಫಾದರ್ ರಾಬಿನ್ ವಡಕ್ಕುಂಚೆರಿ ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಬಾಲಕಿ ಆರೋಪಿಸಿದ್ದು 2017ರ ಫೆಬ್ರವರಿಯಲ್ಲಿ ಈ ಬಾಲಕಿ ಮಗುವಿಗೆ ಜನ್ಮ ನೀಡಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News