ಬಜರಂಗದಳ, ವಿಹಿಂಪ ಕಾರ್ಯಕರ್ತರಿಂದ ಬೆದರಿಕೆ : ಕಾಶ್ಮೀರಿ ವಿದ್ಯಾರ್ಥಿಗಳ ಆರೋಪ

Update: 2019-02-16 14:55 GMT

ಡೆಹ್ರಾಡೂನ್, ಫೆ.16: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಗುರುವಾರ ನಡೆದ ಭಯೋತ್ಪಾದಕ ದಾಳಿಯ ಬಳಿಕ ದೇಶದ ಕೆಲವೆಡೆ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಸಂಘಪರಿವಾರ ಕಾರ್ಯಕರ್ತರು ಕಿರುಕುಳ ನೀಡಿ ಬೆದರಿಕೆ ಹಾಕಿರುವ ಘಟನೆ ನಡೆದಿರುವುದಾಗಿ ಆರೋಪಿಸಲಾಗಿದೆ.

   ಈ ಹಿನ್ನೆಲೆಯಲ್ಲಿ , ಕಾಶ್ಮೀರಿ ವಿದ್ಯಾರ್ಥಿಗಳ ಹಾಗೂ ನಾಗರಿಕರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಶನಿವಾರ ಕೇಂದ್ರ ಗೃಹ ಇಲಾಖೆಯು ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹಾ ಪತ್ರವನ್ನು ರವಾನಿಸಿದೆ.

 ಬಜರಂಗದಳ ಹಾಗೂ ವಿಶ್ವಹಿಂದು ಪರಿಷದ್(ವಿಹಿಂಪ)ದಂತಹ ಸಂಘಟನೆಗಳ ಕಾರ್ಯಕರ್ತರು 12 ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಲ್ಲದೆ, 24 ಗಂಟೆಯೊಳಗೆ ರಾಜ್ಯವನ್ನು ಬಿಟ್ಟು ತೆರಳುವಂತೆ ಬೆದರಿಸಿದ್ದಾರೆ ಎಂದು ಉತ್ತರಾಖಂಡದ ಕಾಶ್ಮೀರಿ ವಿದ್ಯಾರ್ಥಿಗಳ ಸಂಘಟನೆಯ ವಕ್ತಾರ ನಾಸಿರ್ ತಿಳಿಸಿದ್ದಾರೆ.

ಪುಲ್ವಾಮ ದಾಳಿಯ ಬಳಿಕ ಕಾಶ್ಮೀರಿ ವಿದ್ಯಾರ್ಥಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಆದ್ದರಿಂದ ವಿದ್ಯಾರ್ಥಿಗಳು ತಂಗಿದ್ದ ಮನೆಯಿಂದ ಅವರನ್ನು ಖಾಲಿ ಮಾಡಿಸುವಂತೆ ಮನೆಯ ಮಾಲಿಕರಿಗೆ ತಿಳಿಸಿದ್ದು ಘಟನೆಯ ಕುರಿತು ಕಾಲೇಜಿನ ಅಧಿಕಾರಿಗಳಿಗೂ ದೂರು ನೀಡಿದ್ದೇವೆ ಎಂದು ಬಜರಂಗದಳದ ಮುಖಂಡ ವಿಕಾಸ್ ವರ್ಮ ಆರೋಪಿಸಿದ್ದಾರೆ. ತಮ್ಮ ರಾಜ್ಯದಲ್ಲಿ ಕಾಶ್ಮೀರದ ಮುಸ್ಲಿಮ್ ವಿದ್ಯಾರ್ಥಿಗಳು ಅಧ್ಯಯನ ನಡೆಸುವುದಕ್ಕೆ ಮತ್ತು ಇಲ್ಲಿ ನೆಲೆಸುವುದಕ್ಕೆ ತಮ್ಮ ವಿರೋಧವಿದೆ . ಪುಲ್ವಾಮದಲ್ಲಿ ನಡೆದಿರುವ ಕೃತ್ಯವನ್ನು ಮತ್ತೊಮ್ಮೆ ನಡೆಸಲು ಕನಸಿನಲ್ಲೂ ಯೋಚಿಸದ ರೀತಿಯಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಪಾಠ ಕಲಿಸುವುದು ತಮ್ಮ ಉದ್ದೇಶವಾಗಿದೆ ಎಂದು ವಿಹಿಂಪದ ಮುಖಂಡ ಶ್ಯಾಮ್ ಶರ್ಮ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಅಲಿಗಡ ಮತ್ತು ಅಂಬಾಲದಲ್ಲಿರುವ ಕಾಶ್ಮೀರ ವಿದ್ಯಾರ್ಥಿಗಳೂ ತಮಗೆ ಬೆದರಿಕೆ ಎದುರಾಗಿರುವುದನ್ನು ತಿಳಿಸಿದ್ದಾರೆ. ಕಾಲೇಜು, ವಿವಿಯಿಂದ ಬೆದರಿಕೆಗೆ ಒಳಗಾಗಿರುವ ಅಥವಾ ಮನೆ ಖಾಲಿ ಮಾಡಿ ತೆರಳುವಂತೆ ಮನೆ ಮಾಲಿಕರಿಂದ ಎಚ್ಚರಿಕೆ ಪಡೆದಿರುವ ಕಾಶ್ಮೀರದ ವಿದ್ಯಾರ್ಥಿಗಳಿಗೆ ಚಂಡೀಗಡದಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಚಂಡೀಗಡದ ವಿದ್ಯಾರ್ಥಿ ಖವಾಹ ಇತ್ರತ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News