ಯೋಧರ ಹತ್ಯೆಗೆ ಖಂಡನೆ: ವರ್ತಕರ ಸಂಘದಿಂದ ಅಂಗಡಿ ಮಳಿಗೆ ಬಂದ್ ಮಾಡಿ ಪ್ರತಿಭಟನೆ

Update: 2019-02-16 15:01 GMT

ಪುತ್ತೂರು, ಫೆ. 16 : ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಯೋಧರ ಹತ್ಯೆಯನ್ನು ಖಂಡಿಸಿ ಮತ್ತು ಉಗ್ರರ ವಿರುದ್ದ ಪ್ರತಿಕಾರಕ್ಕೆ ಆಗ್ರಹಿಸಿ ಶನಿವಾರ ಪುತ್ತೂರು ಬಸ್ ನಿಲ್ದಾಣ ವಠಾರದ ವರ್ತಕರ ಸಂಘದ ವತಿಯಿಂದ ವ್ಯವಹಾರ ಸ್ಥಗಿತಗೊಳಿಸಿ, ಅಂಗಡಿ ಮಳಿಗೆಗಳನ್ನು ಒಂದು ಗಂಟೆ ಕಾಲ ಬಂದ್ ಮಾಡಿ ಇಲ್ಲಿನ ಗಾಂಧೀ ಕಟ್ಟೆಯ ಬಳಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಸುರೇಂದ್ರ ಕಿಣಿ ಅವರು, ದೇಶ ಕಾಯುವ ಯೋಧರನ್ನು ಕಾಶ್ಮೀರದಲ್ಲಿ ಘೋರ ರೀತಿಯಲ್ಲಿ ಹತ್ಯೆ ಮಾಡಲಾಗಿದೆ. ಇದನ್ನು ತಿಳಿದೂ ನಾಗರಿಕರಾದ ನಾವು ಸುಮ್ಮನೆ ಕುಳಿತುಕೊಂಡರೆ ನಮ್ಮ ಜೀವಕ್ಕೂ ಬೆಲೆ ಇಲ್ಲದಾಗುತ್ತದೆ ಎಂದರು. ಇಂತಹ ಘಟನೆ ಮರುಕಳಿಸಲು ಬಿಡಬಾರದು. ಈ ನಿಟ್ಟಿನಲ್ಲಿ ಉಗ್ರರಿಗೆ ಸೂಕ್ತ ಉತ್ತರ ನೀಡುವ ಜತೆಗೆ ಉಗ್ರಗಾಮಿ ಸಂಘಟನೆಯನ್ನು ನಿಗ್ರಹಿಸಲು ಕ್ರಮಕೈಗೊಳ್ಳಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಮಾಜಿ ಯೋಧ ರಮೇಶ್‍ಬಾಬು ಅವರು ಮಾತನಾಡಿ, ನಮ್ಮ ಸುಖ ಸಂತೋಷಗಳಿಗೆ ದೇಶ ಕಾಯುವ ಸೈನಿಕರೇ ಕಾರಣ. ನಿಶಸ್ತ್ರಧಾರಿಗಳನ್ನು ಹಿಂಸಿಸಬಾರದು, ಹತ್ಯೆ ಮಾಡಬಾರದು ಎಂದು ಎಲ್ಲಾ ಧರ್ಮಗಳಲ್ಲಿ ಹೇಳಿವೆ . ಆದರೆ ಕಾಶ್ಮೀರದಲ್ಲಿ ನಿಶಸ್ತ್ರಧಾರಿಗಳಾಗಿ ತೆರಳುತ್ತಿದ್ದ ಸೈನಿಕರನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಮಹಮ್ಮದ್ ಆಲಿ ಜಿನ್ಹಾ ಭಿತ್ತಿದ ವಿಷ ಬೀಜ  ಚಿಗುರೊಡೆದಿರುವ ಪರಿಣಾಮವಾಗಿಯೇ ಇಂತಹ ಕೃತ್ಯಗಳು ಕಾಶ್ಮೀರದಲ್ಲಿ ನಡೆಯುತ್ತಿದ್ದು, ಇದನ್ನು ಬುಡಸಮೇತ ಕಡಿದು ನಿರ್ಮೂಲನ ಮಾಡಬೇಕು. ಸೈನಿಕರ ಬಲಿದಾನ ನಿರರ್ಥಕವಾಗಲು ಬಿಡಬಾರದು ಎಂದು ಆಗ್ರಹಿಸಿದ ಅವರು ಈ ಕೆಲಸವನ್ನು ದೇಶದ ಪ್ರಧಾನಿ ಮಾಡಿಯೇ ಮಾಡುತ್ತಾರೆ. ಆದರೆ ನಾವೆಲ್ಲರೂ ಪಕ್ಷ -ಜಾತಿ ಮರೆತು ಅವರನ್ನು ಬೆಂಬಲಿಸಬೇಕಾಗಿದೆ ಎಂದರು.

ನಿವೃತ್ತ ಸೇನಾಧಿಕಾರಿ ಸುರೇಶ್ ಶೆಣೈ, ವರ್ತಕ ಖಾದರ್ ಹಾಜಿ ಕೆನರಾ ಅವರು ಮಾತನಾಡಿದರು. ವರ್ತಕರಾದ ಅಶೋಕ್, ಶ್ಯಾಮ್‍ಪ್ರಕಾಶ್, ಅಬ್ದುಲ್ ಸತ್ತಾರ್, ಅನಿಲ್‍ಕುಮಾರ್,ಶರೀಫ್, ಭವನ್‍ಲಾಲ್, ಅಮೃತ್, ಬಬ್ಬಾರ್,ಶೀನಪ್ಪ, ಪ್ರಶಾಂತ್, ರಶೀದ್, ಯೋಗೀಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News