ವಾದ್ರಾ ಮಧ್ಯಂತರ ಜಾಮೀನು ಮಾರ್ಚ್ 2ರವರೆಗೆ ವಿಸ್ತರಣೆ

Update: 2019-02-16 15:47 GMT

ಹೊಸದಿಲ್ಲಿ, ಫೆ.16: ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದ ಹಿನ್ನೆಲೆಯಲ್ಲಿ ರಾಬರ್ಟ್ ವಾದ್ರಾಗೆ ನೀಡಿರುವ ಮಧ್ಯಂತರ ಜಾಮೀನು ಅವಧಿಯನ್ನು ದಿಲ್ಲಿಯ ನ್ಯಾಯಾಲಯ ಮಾರ್ಚ್ 2ರವರೆಗೆ ವಿಸ್ತರಿಸಿದೆ. ಈ ಪ್ರಕರಣದಲ್ಲಿ ವಾದ್ರಾರನ್ನು ಇನ್ನೂ ನಾಲ್ಕೈದು ಬಾರಿ ವಿಚಾರಣೆಗೆ ಒಳಪಡಿಸಬೇಕಿದ್ದು ಅವರು ಸಹಕರಿಸುತ್ತಿಲ್ಲ. ಆದ್ದರಿಂದ ಜಾಮೀನು ಅವಧಿ ವಿಸ್ತರಿಸದೆ ಅವರನ್ನು ಕಸ್ಟಡಿಗೆ ನೀಡಬೇಕೆಂದು ಜಾರಿ ನಿರ್ದೇಶನಾಲಯದ ವಕೀಲ ನಿತೇಶ್ ರಾಣಾ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು.

ಆದರೆ ಯಾವಾಗ ಬೇಕಿದ್ದರೂ ವಿಚಾರಣೆಗೆ ಬರಲು ಸಿದ್ಧನಾಗಿದ್ದು, ತನಿಖೆಗೆ ಸಹಕರಿಸುತ್ತಿದ್ದೇನೆ ಎಂದು ವಾದ್ರಾ ನ್ಯಾಯಾಲಯಕ್ಕೆ ತಿಳಿಸಿದರು. ಇದನ್ನು ಗಮನಿಸಿದ ವಿಶೇಷ ನ್ಯಾಯಾಲಯ ಅರವಿಂದ್ ಕುಮಾರ್ ಮಧ್ಯಂತರ ಜಾಮೀನು ಅವಧಿಯನ್ನು ಮಾರ್ಚ್ 2ರವರೆಗೆ ವಿಸ್ತರಿಸಿದರು. ಮಾರ್ಚ್ 2ರಂದು ವಾದ್ರಾ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಪಟಿಯಾಲಾ ಹೌಸ್‌ಕೋರ್ಟ್‌ನಲ್ಲಿ ನಡೆಯಲಿದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯನಾಗಿರುವ ವಾದ್ರಾ ಲಂಡನ್‌ನಲ್ಲಿ 1.9 ಮಿಲಿಯನ್ ಪೌಂಡ್ ಮೌಲ್ಯದ ಆಸ್ತಿಯನ್ನು ಖರೀದಿಸಲು ಅಕ್ರಮವಾಗಿ ಹಣ ಸಾಗಣೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಇದಕ್ಕೂ ಮುನ್ನ ಫೇಸ್‌ ಬುಕ್‌ ನಲ್ಲಿ ಪೋಸ್ಟ್ ಮಾಡಿರುವ ಹೇಳಿಕೆಯಲ್ಲಿ ಇಡಿ ಅಧಿಕಾರಿಗಳ ವರ್ತನೆಯನ್ನು ವಾದ್ರಾ ಟೀಕಿಸಿದ್ದಾರೆ. ಇದೊಂದು ಕೆಟ್ಟ ಮತ್ತು ಪ್ರತೀಕಾರಾತ್ಮಕ ಶೋಧನೆಯಾಗಿದೆ. ಕಳೆದ ಸುಮಾರು 6 ದಿನದಿಂದ, ದಿನಕ್ಕೆ ಸುಮಾರು 12 ಗಂಟೆ ವಿಚಾರಣೆ ನಡೆಯುತ್ತಿದೆ. ಮಧ್ಯೆ 40 ನಿಮಿಷದ ಊಟದ ವಿರಾಮವಿದೆ. ಶೌಚಾಲಯಕ್ಕೆ ಹೋಗುವಾಗಲೂ ನನ್ನ ಹಿಂದೆ ಭದ್ರತಾ ಸಿಬ್ಬಂದಿ ಇರುತ್ತಾರೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News