ಕೇರಳ ಅತ್ಯಾಚಾರ ಪ್ರಕರಣ: ಬಿಷಪ್ ವಿರುದ್ಧ ಪ್ರತಿಭಟನೆ ನಡೆಸಿದ್ದವರಿಗೆ ಬೆದರಿಕೆ ಪತ್ರ

Update: 2019-02-16 15:50 GMT

ತಿರುವನಂತಪುರಂ, ಫೆ.16: ಕೇರಳದ ಕ್ರೈಸ್ತ ಸನ್ಯಾಸಿನಿಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪ ಎದುರಿಸುತ್ತಿರುವ ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ಧ ಪ್ರತಿಭಟನೆ ನಡೆಸಿದ್ದ ಕ್ರೈಸ್ತ ಸನ್ಯಾಸಿನಿ ಲೂಸಿ ಕಲಪುರರಿಗೆ ಮತ್ತೊಂದು ಬೆದರಿಕೆ ಪತ್ರ ಬಂದಿರುವುದಾಗಿ ವರದಿಯಾಗಿದೆ. ನಿಮ್ಮ ನಿರ್ಧಾರ ಬದಲಿಸದಿದ್ದರೆ ಧಾರ್ಮಿಕ ಪರಿಷತ್ತಿನಿಂದ ನಿಮ್ಮನ್ನು ವಜಾಗೊಳಿಸಲಾಗುವುದು ಎಂದು ಎಚ್ಚರಿಕೆ ಪತ್ರ ಬಂದಿರುವುದಾಗಿ ಲೂಸಿ ತಿಳಿಸಿದ್ದಾರೆ.

 ಫ್ರಾನ್ಸಿಸ್ಕನ್ ಧರ್ಮ ಪರಿಷತ್(ಎಫ್‌ಸಿಸಿ)ನ ಸುಪೀರಿಯರ್ ಜನರಲ್ ಈ ಎರಡನೇ ಅಧಿಕೃತ ಎಚ್ಚರಿಕೆ ಪತ್ರವನ್ನು ಕಳುಹಿಸಿದ್ದಾರೆ ಎಂದು ವರದಿ ತಿಳಿಸಿದೆ. ನಿಮ್ಮ ನಿರ್ಧಾರ ಮತ್ತು ವರ್ತನೆಯನ್ನು ಬದಲಾಯಿಸಿಕೊಳ್ಳಬೇಕೆಂದು ಪ್ರಾಮಾಣಿಕವಾಗಿ ತಿಳಿಸುತ್ತಿದ್ದೇವೆ. ಇದಕ್ಕೆ ನೀವು ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ನಿಮ್ಮನ್ನು ಪರಿಷತ್‌ನಿಂದ ವಜಾಗೊಳಿಸುವುದು ಅನಿವಾರ್ಯವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಕಳೆದ ತಿಂಗಳು ಕೂಡಾ ಇದೇ ರೀತಿಯ ಎಚ್ಚರಿಕೆ ಪತ್ರ ಪಡೆದಿರುವುದಾಗಿ ಲೂಸಿ ತಿಳಿಸಿದ್ದಾರೆ. ಜನವರಿ 1ರಂದು ತನಗೆ ಬರೆದಿದ್ದ ಪತ್ರದಲ್ಲಿ, ಕ್ರೈಸ್ತ ಸನ್ಯಾಸಿನಿ ಲೂಸಿ ಎಫ್‌ಸಿಸಿಯ ನೀತಿ ನಿಯಮಗಳಿಗೆ ವಿರುದ್ಧವಾಗಿ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು ಮತ್ತು ಇದನ್ನು ತಿದ್ದಿಕೊಳ್ಳದಿದ್ದರೆ ಧರ್ಮ ಪರಿಷದ್‌ನಿಂದ ವಜಾಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು.

ಬಿಷಪ್ ಮುಲಕ್ಕಲ್‌ರ ಬಂಧನಕ್ಕೆ ಆಗ್ರಹಿಸಿ ಎರ್ನಾಕುಳಂನಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಲೂಸಿ, ಬಿಷಪ್ ವಿರುದ್ಧ ಮುಚ್ಚುಮರೆಯಿಲ್ಲದೆ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News