ಸರ್ವಪಕ್ಷಗಳ ಸಭೆಯ ನಿರ್ಣಯದಲ್ಲಿ ಶಾಂತಿ ಸಂದೇಶವನ್ನೂ ಸೇರಿಸಬೇಕಿತ್ತು: ಉಮರ್ ಅಬ್ದುಲ್ಲಾ

Update: 2019-02-16 15:53 GMT

ಶ್ರೀನಗರ, ಫೆ.16: ಪುಲ್ವಾಮ ಭಯೋತ್ಪಾದಕ ದಾಳಿ ಘಟನೆಯ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಅಂಗೀಕರಿಸಲ್ಪಟ್ಟ ನಿರ್ಣಯದಲ್ಲಿ ಶಾಂತಿಗೆ ಕರೆಯನ್ನು ಸೇರ್ಪಡೆಗೊಳಿಸದಿರುವ ಬಗ್ಗೆ ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ) ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಅಸಮಾಧಾನ ಸೂಚಿಸಿದ್ದಾರೆ.

ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಪ್ರತಿಭಟಿಸಿ ಜಮ್ಮುವಿನಲ್ಲಿ ನಡೆದ ಹಿಂಸಾಚಾರ ಹಾಗೂ ದೇಶದ ಇತರೆಡೆ ಹಾಗೂ ಕೆಲವು ರಾಜ್ಯಗಳ ವಿವಿ, ಕಾಲೇಜುಗಳಲ್ಲಿ ಇರುವ ಉದ್ವೇಗದ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಖಂಡನೆ ಮತ್ತು ಸಂತಾಪ ಸಂದೇಶದ ಜೊತೆಗೆ ಶಾಂತಿ ಕಾಪಾಡುವಂತೆ ಜನತೆಗೆ ಕರೆ ನೀಡುವ ಸಂದೇಶ ಸರ್ವಪಕ್ಷಗಳ ಸಭೆಯ ನಿರ್ಣಯದಲ್ಲಿ ಒಳಗೊಂಡಿರುತ್ತದೆ ಎಂದು ತಾನು ನಿರೀಕ್ಷಿಸಿದ್ದೆ ಎಂದು ಅಬ್ದುಲ್ಲಾ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಶನಿವಾರ ಹೊಸದಿಲ್ಲಿಯಲ್ಲಿ ನಡೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಎಲ್ಲಾ ಪ್ರಮುಖ ಪಕ್ಷಗಳ ಹಿರಿಯ ಮುಖಂಡರು ಪಾಲ್ಗೊಂಡಿದ್ದು ಭಯೋತ್ಪಾದಕರ ದಾಳಿಯನ್ನು ಹಾಗೂ ಭಯೋತ್ಪಾದಕರಿಗೆ ಗಡಿಯಾಚೆಗಿಂದ ನೆರವು ನೀಡುತ್ತಿರುವುದನ್ನು ಖಂಡಿಸುವ ಮತ್ತು ಘಟನೆಗೆ ಸಂತಾಪ ಸೂಚಿಸುವ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೆ ಭಯೋತ್ಪಾದಕರ ಅಟ್ಟಹಾಸವನ್ನು ಮಟ್ಟಹಾಕುವಲ್ಲಿ ಕೇಂದ್ರ ಸರಕಾರ ಕೈಗೊಳ್ಳುವ ಕ್ರಮಕ್ಕೆ ತಮ್ಮ ಬೆಂಬಲ ಸೂಚಿಸಿವೆ. ಪುಲ್ವಾಮ ದಾಳಿಯನ್ನು ಖಂಡಿಸಿ ಜಮ್ಮು ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ಶುಕ್ರವಾರ ಜಮ್ಮು-ಕಾಶ್ಮೀರದಲ್ಲಿ ಬೃಹತ್ ಪಾಕ್ ವಿರೋಧಿ ಪ್ರತಿಭಟನೆ ನಡೆದಿದ್ದು ಮೋಂಬತ್ತಿ ಹಿಡಿದು ರ್ಯಾಲಿ ನಡೆಸಲಾಗಿತ್ತು. ಈ ಸಂದರ್ಭ ಕೆಲವರು ಪ್ರತಿಭಟನಾಕಾರರ ಮೇಲೆ ಕಲ್ಲೆಸೆದಿದ್ದು ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಪೊಲೀಸರೂ ಸೇರಿದಂತೆ 9 ಮಂದಿ ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News