ಇಡೀ ದೇಶದ ಧ್ವನಿ ಒಂದೇ: ದೇಶಕ್ಕಾಗಿ ಒಂದಾದ ಸರ್ವಪಕ್ಷಗಳು

Update: 2019-02-16 15:58 GMT

ಹೊಸದಿಲ್ಲಿ, ಫೆ. 16: ಪುಲ್ವಾಮ ಭಯೋತ್ಪಾದನೆ ಹಿನ್ನೆಲೆಯಲ್ಲಿ ಎನ್‌ ಡಿಎ ಸರಕಾರ ಆಯೋಜಿಸಿದ ಸರ್ವ ಪಕ್ಷಗಳ ಸಭೆಯಲ್ಲಿ ಭಾರತ ಭಯೋತ್ಪಾದನೆ ವಿರುದ್ಧ ಹೋರಾಡುವ ದೃಢ ಸಂಕಲ್ಪದೊಂದಿಗೆ ನಿರ್ಣಯ ಅಂಗೀಕರಿಸಲಾಯಿತು. ದೇಶದ ಏಕತೆ ಹಾಗೂ ಸಮಗ್ರತೆ ರಕ್ಷಿಸಲು ಭದ್ರತಾ ಪಡೆಗಳಿಗೆ ಬೆಂಬಲ ವ್ಯಕ್ತಪಡಿಸಲು ಸರ್ವ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿದವು.

ನಿರ್ಣಯದಲ್ಲಿ ಪಾಕಿಸ್ತಾನದ ಹೆಸರು ಉಲ್ಲೇಖಿಸಲಾಗಿಲ್ಲ. ಆದರೆ, ಭಾರತ ಗಡಿಯಾಚೆಗಿನ ಭಯೋತ್ಪಾದನೆ ಎದುರಿಸುತ್ತಿದೆ ಎಂದು ಪ್ರತಿಪಾದಿಸಲಾಗಿದೆ. ನೆರೆಯ ದೇಶದ ತಮ್ಮ ಪಡೆಗಳ ಮೂಲಕ ಭಯೋತ್ಪಾದನೆಯನ್ನು ಸಕ್ರಿಯವಾಗಿ ಉತ್ತೇಜಿಸುತ್ತದೆ ಎಂದು ಅದರಲ್ಲಿ ಹೇಳಲಾಗಿದೆ. ‘‘ಭಾರತ ಈ ಸವಾಲನ್ನು ನಿರ್ವಹಿಸುವುದರೊಂದಿಗೆ ದೃಢತೆ ಹಾಗೂ ಸ್ಥಿತಿಸ್ಥಾಪಕತ್ವ ಎರಡನ್ನೂ ಪ್ರದರ್ಶಿಸಲಿದೆ. ಈ ಸವಾಲುಗಳೊಂದಿಗೆ ಹೋರಾಡುವ ದೃಢಸಂಕಲ್ಪ ವ್ಯಕ್ತಪಡಿಸಲು ಸಂಪೂರ್ಣ ದೇಶ ಒಂದೇ ಧ್ವನಿಯಲ್ಲಿ ಮಾತನಾಡುತ್ತಿದೆ. ಭಾರತದ ಏಕತೆ ಹಾಗೂ ಸಮಗ್ರತೆ ರಕ್ಷಿಸಲು ಹಾಗೂ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಲು ನಾವು ನಮ್ಮ ಭದ್ರತಾ ಪಡೆಗಳೊಂದಿಗೆ ನಾವು ಐಕ್ಯ ಮತದಿಂದ ನಿಲ್ಲುತ್ತೇವೆ’’ ಎಂದು ಅದು ಹೇಳಿದೆ.

ಈ ಸಭೆಯನ್ನು ಗೃಹ ಸಚಿವ ರಾಜನಾಥ್ ಸಿಂಗ್ ಆಯೋಜಿಸಿದ್ದರು. ಕಾಂಗ್ರೆಸ್‌ನ ಗುಲಾಂ ನಬಿ ಆಝಾದ್, ಆನಂದ್ ಶರ್ಮಾ ಹಾಗೂ ಜ್ಯೋತಿರಾದಿತ್ಯ ಸಿಂಧ್ಯ, ಟಿಎಂಸಿಯ ಸುದೀಪ್ ಬಂದೋಪಾಧ್ಯಾಯ, ಡೆರಿಕ್ ಓಬ್ರಿಯಾನ್, ಶಿವಸೇನೆಯ ಸಂಜಯ್ ರಾವತ್, ಟಿಆರ್‌ಎಸ್‌ನ ಜಿತೇಂದ್ರ ರೆಡ್ಡಿ, ಸಿಪಿಐಯ ಡಿ. ರಾಜಾ, ನ್ಯಾಶನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ, ಎಲ್‌ಜೆಪಿಯ ರಾಮ್ ವಿಲಾಸ್ ಪಾಸ್ವಾನ್ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡರು.

ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿ ಹಾಗೂ ಇದುವರೆಗೆ ಸರಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಪಕ್ಷಗಳಿಗೆ ವಿವರಿಸಲಾಯಿತು ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಅಕಾಲಿ ದಳದ ನರೇಶ್ ಗುಜ್ರಾಲ್, ಆರ್‌ಎಸ್‌ಎಲ್‌ಪಿಯ ಉಪೇಂದ್ರ ಕುಶ್ವಾಹ ಹಾಗೂ ಪ್ರಿಯಾಂಕ ನಾರಾಯಣ್ ಯಾದವ್ ಸಭೆಯಲ್ಲಿ ಪಾಲ್ಗೊಂಡ ಇತರರು. ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆಡಳಿತಾರೂಢ ಎನ್‌ಡಿಎ ಆಯೋಜಿಸುತ್ತಿರುವ ಮೊದಲ ಸಭೆ ಇದಾಗಿದೆ. ಈ ಹಿಂದೆ 2016ರಲ್ಲಿ ಭಯಾತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಸರ್ವ ಪಕ್ಷಗಳ ಸಭೆ ನಡೆಸಲಾಗಿತ್ತು.

ಗಡಿ ನಿಯಂತ್ರಣ ರೇಖೆಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಬಳಿಕ ಈ ಬಗೆಗಿನ ವಿವರವನ್ನು ಸರ್ವಪಕ್ಷಗಳಿಗೆ ಸಂಕ್ಷಿಪ್ತವಾಗಿ ವಿವರಿಸಲಾಗಿತ್ತು. ಸರ್ವ ಪಕ್ಷಗಳ ಸಭೆಯ ಈ ಬಾರಿಯ ಭಿನ್ನತೆ ಏನೆಂದರೆ, ಈ ಬಾರಿ ಪಾಕಿಸ್ಥಾನದ ವಿರುದ್ಧ ನಿರ್ಣಯ ತೆಗೆದುಕೊಳ್ಳುವ ಮುನ್ನವೇ ಕೇಂದ್ರ ಸರಕಾರ ಸರ್ವ ಪಕ್ಷಗಳ ಸಭೆ ನಡೆಸಿದೆ. ಸಭೆಯ ಬಳಿಕ ಮಾತನಾಡಿದ ಕಾಂಗ್ರೆಸ್ ‌ನ ಹಿರಿಯ ನಾಯಕ ಗುಲಾಂ ನಬಿ ಆಝಾದ್, ದೇಶದಲ್ಲಿ ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡಲು ಸರಕಾರದೊಂದಿಗೆ ಬೆಂಬಲವಾಗಿ ನಿಲ್ಲಲಿದೆ ಎಂದು ಪ್ರತಿಪಕ್ಷಗಳು ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಲಿದೆ ಎಂದು ಹೇಳಿದರು. ಈ ವಿಷಯದ ಕುರಿತು ಚರ್ಚೆ ನಡೆಸಲು ಎಲ್ಲಾ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಅಧ್ಯಕ್ಷರನ್ನು ಭೇಟಿಯಾಗಲು ಪ್ರಧಾನಿ ಮಂತ್ರಿ ಅವರಲ್ಲಿ ವಿನಂತಿಸುವಂತೆ ರಾಜ್‌ನಾಥ್ ಸಿಂಗ್ ಅವರಲ್ಲಿ ಪ್ರತಿಪಕ್ಷಗಳು ಮನವಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News