ಪುಲ್ವಾಮ ದಾಳಿ ಪ್ರಕರಣ: ಪಾಕ್ ನಿಂದ ಆಮದಾಗುವ ವಸ್ತುಗಳ ತೆರಿಗೆ ಶೇ.200ರಷ್ಟು ಹೆಚ್ಚಳ

Update: 2019-02-16 16:21 GMT

ಹೊಸದಿಲ್ಲಿ, ಫೆ.16: ಪಾಕಿಸ್ತಾನಕ್ಕೆ ನೀಡಲಾಗಿರುವ ಪರಮಾಪ್ತ ಸ್ಥಾನಮಾನವನ್ನು ರದ್ದುಗೊಳಿಸಿದ ಒಂದು ದಿನದ ಬಳಿಕ ಪಾಕಿಸ್ತಾನದಿಂದ ಆಮದಾಗುವ ಎಲ್ಲಾ ವಸ್ತುಗಳ ಮೇಲಿನ ಆಮದು ತೆರಿಗೆಯನ್ನು ಶೇ.200ರಷ್ಟು ಹೆಚ್ಚಿಸಿರುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಪ್ರಕಟಿಸಿದ್ದಾರೆ.

ಪುಲ್ವಾಮದಲ್ಲಿ ಗುರುವಾರ ನಡೆದ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನವನ್ನು ವಿಶ್ವಮಟ್ಟದಲ್ಲಿ ಏಕಾಂಗಿಯನ್ನಾಗಿಸುವ ಕ್ರಮವಾಗಿ ಭಾರತ ಈ ನಡೆ ಇರಿಸಿದೆ ಎಂದು ಮೂಲಗಳು ತಿಳಿಸಿವೆ. ಪುಲ್ವಾಮ ಘಟನೆಯ ಬಳಿಕ ಪಾಕಿಸ್ತಾನಕ್ಕೆ ನೀಡಲಾಗಿದ್ದ ಪರಮಾಪ್ತ ಸ್ಥಾನಮಾನವನ್ನು ಭಾರತ ಹಿಂಪಡೆದಿದೆ. ಇದರಿಂದ , ಪಾಕಿಸ್ತಾನದಿಂದ ಆಮದಾಗುವ ಎಲ್ಲಾ ವಸ್ತುಗಳ ಮೇಲಿನ ಮೂಲ ಆಮದು ತೆರಿಗೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಶೇ.200ರಷ್ಟು ಹೆಚ್ಚಿಸಲಾಗಿದೆ ಎಂದು ಜೇಟ್ಲಿ ಟ್ವೀಟ್ ಮಾಡಿದ್ದಾರೆ.

ಉನ್ನತ ಮಟ್ಟದ ಸಂಪುಟ ಸಭೆಯ ಬಳಿಕ ಭಾರತ ಶುಕ್ರವಾರ ಪಾಕ್‌ಗೆ ನೀಡಿದ್ದ ಪರಮಾಪ್ತ ಸ್ಥಾನಮಾನವನ್ನು ರದ್ದುಗೊಳಿಸಿತ್ತು. ಇದರಿಂದ ಪಾಕ್‌ನಿಂದ ಆಮದಾಗುವ ವಸ್ತುಗಳ ಮೇಲಿನ ಆಮದು ತೆರಿಗೆ ಹೆಚ್ಚಿಸಲು ಸಾಧ್ಯವಾಗಿದೆ. 2018ರ ಆರ್ಥಿಕ ವರ್ಷದಲ್ಲಿ ಭಾರತದ ಒಟ್ಟು ವಿದೇಶ ವ್ಯವಹಾರದ ಶೇ.0.4ರಷ್ಟು ಅಂದರೆ ಪಾಕಿಸ್ತಾನದಿಂದ 2.40 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ವಸ್ತುಗಳು ಭಾರತಕ್ಕೆ ಆಮದಾಗಿದೆ. ಭಾರತದಿಂದ ಪಾಕ್ ಆಮದು ಮಾಡಿಕೊಳ್ಳುವುದಕ್ಕಿಂತ ನಾಲ್ಕುಪಟ್ಟು ಭಾರತಕ್ಕೆ ರಫು ಮಾಡುತ್ತಿದೆ.

ಭಾರತದಿಂದ ಹತ್ತಿ, ಬಣ್ಣ, ರಾಸಾಯನಿಕ ವಸ್ತುಗಳು, ತರಕಾರಿ , ಕಬ್ಬಿಣ ಮತ್ತು ಸ್ಟೀಲ್ ಉತ್ಪನ್ನಗಳು ಪಾಕ್‌ಗೆ ರಫ್ತಾದರೆ, ಅಲ್ಲಿಂದ ಹಣ್ಣು, ಸಿಮೆಂಟ್, ಸಾಂಬಾರ ವಸ್ತು ಹಾಗೂ ಚರ್ಮದ ಉತ್ಪನ್ನಗಳು ಆಮದಾಗುತ್ತಿವೆ. ಎಲ್ಲಾ ಡಬ್ಯುಟಿಒ(ವಿಶ್ವ ವ್ಯಾಪಾರ ಸಂಘಟನೆಯ) ಸದಸ್ಯ ರಾಷ್ಟ್ರಗಳೂ ಮತ್ತೊಂದು ಸದಸ್ಯ ರಾಷ್ಟ್ರಕ್ಕೆ ಪರಮಾಪ್ತ ಸ್ಥಾನಮಾನ ನೀಡಬೇಕೆಂದು 1988ರ ಜಿಎಟಿಟಿ ಒಪ್ಪಂದದಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತವೂ ಪಾಕ್‌ಗೆ ಪರಮಾಪ್ತ ಸ್ಥಾನಮಾನ ನೀಡಿತ್ತು. ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಸಮುದಾಯದಲ್ಲಿ ಏಕಾಂಗಿಯನ್ನಾಗಿಸಲು ಸಾಧ್ಯವಿರುವ ಎಲ್ಲಾ ರಾಜತಾಂತ್ರಿಕ ಕ್ರಮಗಳನ್ನೂ ಭಾರತ ಕೈಗೊಳ್ಳುತ್ತದೆ ಎಂದು ಜೇಟ್ಲಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News