ಬೋಟು ನಾಪತ್ತೆ ಪ್ರಕರಣ: ತನಿಖೆಗಾಗಿ ವಿಶೇಷ ಸಮಿತಿ; ಎಸ್ಪಿ ಜೊತೆ ಮೀನುಗಾರರ ಮಾತುಕತೆ

Update: 2019-02-16 16:26 GMT

ಉಡುಪಿ, ಫೆ.16: ಕಳೆದ 63 ದಿನಗಳಿಂದ ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟು ಸೇರಿದಂತೆ ಏಳು ಮಂದಿ ಮೀನುಗಾರರ ಶೋಧ ಕಾರ್ಯಾ ಚರಣೆಗೆ ಸಂಬಂಧಿಸಿ ನೌಕಪಡೆ ಎಲ್ಲ ಮಾಹಿತಿಯನ್ನು ಗೌಪ್ಯವಾಗಿರಿಸುವುದ ರಿಂದ ಕೇಂದ್ರ ರಕ್ಷಣಾ ಸಚಿವರು ನೌಕಪಡೆ, ಕೋಸ್ಟಲ್ ಗಾರ್ಡ್, ಪೊಲೀಸರು ಹಾಗೂ ಮೀನುಗಾರರನ್ನೊಳಗೊಂಡ ಸಮಿತಿಯನ್ನು ರಚಿಸಿ ಆ ಮೂಲಕ ತನಿಖೆ ನಡೆಸುವಂತೆ ಎಸ್ಪಿ ಜೊತೆ ಮಾತುಕತೆ ಸಂದರ್ಭದಲ್ಲಿ ಒತ್ತಾಯಿಸಲಾಗಿದೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಇಂದು ಎಸ್ಪಿ ಲಕ್ಷ್ಮಣ್ ನಿಂಬರ್ಗಿ ಜೊತೆ ಸುವರ್ಣ ತ್ರಿಭುಜ ಬೋಟಿಗೆ ಸಂಬಂಧಿಸಿ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಮುಖಂಡರು ಮತ್ತು ನಾಪತ್ತೆಯಾದ ವರ ಕುಟುಂಬದವರು ನಡೆಸಿದ ಮಾತುಕತೆಯ ಬಳಿಕ ಅವರು ಮಾಧ್ಯಮದ ರಿಗೆ ಈ ಕುರಿತು ವಿವರ ನೀಡಿದರು.

ನೌಕಪಡೆಯ ಐಎನ್‌ಎಸ್ ಕೊಚ್ಚಿ ಹಡಗು ಢಿಕ್ಕಿ ಹೊಡೆದ ಪರಿಣಾಮವೇ ಸುವರ್ಣ ತ್ರಿಭುಜ ಬೋಟು ಹಾನಿಗೊಂಡು ಸಮುದ್ರದಲ್ಲಿ ಮುಳುಗಿದೆ ಎಂಬುದು ನಮ್ಮ ಬಲವಾದ ಶಂಕೆಯಾಗಿದೆ. ಆದರೆ ಈ ವಿಚಾರವನ್ನು ನೌಕಪಡೆ ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ. ಈ ಸಂಬಂಧ ಮೀನುಗಾರರಿಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ ಎಂದು ಅವರು ಆರೋಪಿಸಿದರು.

ಬೋಟಿನ ಶೋಧ ಕಾರ್ಯಾಚರಣೆ ನಮ್ಮ ಪೊಲೀಸ್ ಇಲಾಖೆಯ ವ್ಯಾಪ್ತಿಗೆ ಬಾರದಿರುವುದರಿಂದ ರಾಜ್ಯ ಸರಕಾರದ ಮೂಲಕ ಕೇಂದ್ರ ಸರಕಾರಕ್ಕೆ ಒತ್ತಡ ಹೇರಿ ನೌಕಪಡೆ, ಕೋಸ್ಟಲ್‌ಗಾರ್ಡ್, ಪೊಲೀಸರು ಹಾಗೂ ಮೀನುಗಾರರ ಸಮಿತಿ ರಚಿಸುವಂತೆ ರಕ್ಷಣಾ ಸಚಿವರನ್ನು ಒತ್ತಾಯಿಸಲಾಗುವುದು. ಇಂದು ನಡೆದ ಸಭೆಯಲ್ಲಿ ಎಸ್ಪಿ ಜೊತೆ ಚರ್ಚಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳ ಲಾಗಿದೆ ಎಂದು ಅವರು ಹೇಳಿದರು.

ನೌಕ ಹಡಗಿನ ಹಾನಿಗೆ ಕಾರಣ ?

ಡಿ.15ರಂದು ನಸುಕಿನ ವೇಳೆ 2ಗಂಟೆಯಿಂದ ಆರು ಗಂಟೆಯ ಮಧ್ಯಾವಧಿ ಯಲ್ಲಿ ಸುವರ್ಣ ತ್ರಿಭುಜ ಬೋಟು ನಾಪತ್ತೆಯಾಗಿದ್ದರೆ, ಅದೇ ಸಮಯದಲ್ಲಿ ನೌಕಪಡೆಯ ಐಎನ್‌ಎಸ್ ಕೊಚ್ಚಿ ಹಡಗು ಮುಂಬೈಯಿಂದ ಕಾರವಾರಕ್ಕೆ ತೆರಳು ತ್ತಿತ್ತು. ನಂತರ ಈ ಹಡಗಿನ ಅಡಿಭಾಗಕ್ಕೆ ಹಾನಿಯಾಗಿರುವುದು ಕಂಡು ಬಂದಿತ್ತು. ಸುವರ್ಣ ತ್ರಿಭುಜ ಬೋಟು ನಾಪತ್ತೆಯಾಗಿರುವುದು ಮತ್ತು ನೌಕಪಡೆಯ ಹಡಗಿನ ಅಡಿಭಾಗಕ್ಕೆ ಹಾನಿಯಾಗಿರುವುದು ಎರಡು ಸಮಯ ಕೂಡ ಒಂದೇ ಆಗಿರುವುದರಿಂದ ಸುವರ್ಣ ತ್ರಿಭುಜ ಬೋಟಿಗೆ ನೌಕಪಡೆಯ ಹಡಗು ಢಿಕ್ಕಿ ಹೊಡೆದಿರುವ ಸಂಶಯ ವ್ಯಕ್ತವಾಗಿತ್ತು ಎಂದು ಸತೀಶ್ ಕುಂದರ್ ತಿಳಿಸಿದರು.

ಈ ಹಿನ್ನೆಲೆಯಲ್ಲಿ ದುರಂತ ಸಂಭವಿಸರಬಹುದೆಂದು ಶಂಕಿಸಲಾದ ಸಮುದ್ರ ದಲ್ಲಿ ನೌಕಪಡೆಯ ಸಟ್ಲೇಜ್ ಹಾಗೂ ನಿರೀಕ್ಷಕ್ ಎಂಬ ಎರಡು ಹಡಗಿನ ಮೂಲಕ ಹುಡುಕಾಟ ಆರಂಭಿಸಲಾಯಿತು. ಈ ವೇಳೆ ಸಮುದ್ರದ ಆಳದಲ್ಲಿ 21.5 ಮೀಟರ್ ಉದ್ದದ ರೆಕ್ಕೆಯ ಭಾಗವೊಂದು ಗೋಚರಿಸಿತ್ತು. ಇತ್ತೀಚೆಗೆ ಬಂದ ಮಾಹಿತಿಯಂತೆ ಆಳದಲ್ಲಿ ಕಂಡುಬಂದಿರುವುದು ಬೋಟು ಅಲ್ಲ, ಕಲ್ಲು ಬಂಡೆ ಎಂಬುದು ಎಸ್ಪಿ ಮೂಲಕ ನಮಗೆ ತಿಳಿಯಿತು ಎಂದರು.

ಆಳದಲ್ಲಿ ಕಂಡುಬಂದಿರುವುದು ಕಲ್ಲು ಬಂಡೆಯಾದರೆ ನೌಕಪಡೆಯ ಹಡಗಿನ ಅಡಿ ಭಾಗಕ್ಕೆ ಹಾನಿಯಾಗಲು ಏನು ಕಾರಣ ಎಂಬುದು ನಮ್ಮ ಪ್ರಶ್ನೆ ಯಾಗಿದೆ. ಇದರಲ್ಲಿ ಮುಚ್ಚಿಡುವ ಕೆಲಸಗಳು ನೌಕಪಡೆಯಿಂದ ನಡೆಯುತ್ತಿದೆ. ಇದನ್ನು ತಿಳಿದುಕೊಳ್ಳಲು ಮೀನುಗಾರರ ನಿಯೋಗ ಎಸ್ಪಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಮಲ್ಪೆ ಆಳಸಮುದ್ರ ಮೀನುಗಾರರ ಸಂಘದ ಅಧ್ಯಕ್ಷ ಕಿಶೋರ್ ಡಿ.ಸುವರ್ಣ, ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಕೆ.ಗೋಪಾಲ್, ಮುಖಂಡರಾದ ಕರುಣಾಕರ ಕೊಳ, ಸಂತೋಷ್ ಸಾಲ್ಯಾನ್, ನಾಪತ್ತೆಯಾಗಿ ರುವ ಚಂದ್ರಶೇಖರ್ ಕೋಟ್ಯಾನ್‌ರ ಸಹೋದರ ನಿತ್ಯಾನಂದ, ದಾಮೋದರ್ ಸಾಲ್ಯಾನ್‌ರ ಸಹೋದರ ಪ್ರಮೋದ್ ಸಾಲ್ಯಾನ್, ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಮುಖಂಡರಾದ ಉಮಾಕಾಂತ್ ಕುಮಟಾ, ಗೋವಿಂದ ಹರಿ ಕಾಂತ್‌ಸ, ಮಂಜುನಾಥ್ ಹರಿಕಾಂತ್, ನಾಪತ್ತೆಯಾದ ಲಕ್ಷ್ಮಣ್ ತಮ್ಮ ಗೋವಿಂದ, ರವಿ ತಮ್ಮ ಅಣ್ಣಪ್ಪ ಹರಿಕಾಂತ್, ಹರೀಶ್ ಮಾವ ವಾಸು ಮೊಗೇರ ಮೊದಲಾದವರು ಉಪಸ್ಥಿತರಿದ್ದರು.

ನೌಕನೆಲೆಗೆ ಮುತ್ತಿಗೆ ಎಚ್ಚರಿಕೆ

ಎರಡು ತಿಂಗಳು ಕಳೆದರೂ ಸುವರ್ಣ ತ್ರಿಭುಜ ಬೋಟಿನ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಇಲ್ಲ. ಇದರಲ್ಲಿ ನಮಗೆ ನ್ಯಾಯ ಸಿಗದಿದ್ದರೆ ಕಾರವಾರ ದಲ್ಲಿರುವ ನೌಕಪಡೆಯ ಕದಂಬ ನೌಕನೆಲೆಗೆ ಮೀನುಗಾರರು ಮುತ್ತಿಗೆ ಹಾಕಿ ಹೋರಾಟ ನಡೆಸಲಾಗುವುದು ಮತ್ತು ಅದೇ ರೀತಿ ರಾಜ್ಯ ಸರಕಾರ ಸ್ಪಂದಿಸದಿದ್ದರೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ನಡೆಸುವ ಕುರಿತು ನಿರ್ಧರಿಸ ಲಾಗಿದೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದ್ದಾರೆ.

''ನಾಪತ್ತೆಯಾದ ಮೀನುಗಾರರ ಬಗ್ಗೆ ಯಾವುದೇ ಮಾಹಿತಿಗಳು ಸಿಗುತ್ತಿಲ್ಲ. ಈ ಮೂಲಕ ಸರಕಾರಗಳು ಮೀನುಗಾರರ ಸಮಾಜವನ್ನು ಕಡೆಗಣಿಸುತ್ತಿದೆ. ತಂತ್ರಜ್ಞಾನ ಮುಂದುವರೆದರೂ ಮೀನುಗಾರರು ಎಲ್ಲಿದ್ದಾರೆ ಹೇಗಿದ್ದಾರೆ ಎಂಬ ಕುರುಹುಗಳು ಪತ್ತೆಯಾಗದಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿ ಯಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾದರೆ ಮೀನು ಗಾರರು ಹೇಗೆ ಬದುಕಬೇಕು. ನಾಪತ್ತೆಯಾದವರನ್ನು ಶೀಘ್ರವೇ ಹುಡುಕಿ ಕೊಡಿ ಎಂದು ಪ್ರತಿಭಟನೆ ನಡೆಸುವ ಮೂಲಕ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಮೇಲೆ ಒತ್ತಡ ಹೇರುವ ಕೆಲಸ ಮಾಡಲಾಗುವುದು''.
- ಮಂಜುನಾಥ್ ಹರಿಕಾಂತ್ ಅಂಕೋಲ, ಮೀನುಗಾರ ಮುಖಂಡ, ಉತ್ತರ ಕನ್ನಡ ಜಿಲ್ಲೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News