ಭಯೋತ್ಪಾದನೆ ಮಟ್ಟ ಹಾಕಲು ಸರಕಾರಕ್ಕೆ ಬೆಂಬಲ: ಗುಲಾಮ್ ನಬಿ ಆಝಾದ್

Update: 2019-02-16 16:26 GMT

ಹೊಸದಿಲ್ಲಿ, ಫೆ. 16: ಪುಲ್ವಾಮ ಭಯೋತ್ಪಾದಕ ದಾಳಿ ಹಾಗೂ ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ಶನಿವಾರ ಕರೆದಿದ್ದ ಸರ್ವ ಪಕ್ಷಗಳ ಸಭೆ ಪೂರ್ಣಗೊಂಡಿದೆ. ಸಭೆಯ ಬಳಿಕ ಮಾದ್ಯಮವನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್‌ ನ ಗುಲಾಂ ನಬಿ ಆಝಾದ್, ದೇಶದ ಭದ್ರತೆ, ಏಕತೆಗಾಗಿ ನಾವು ಸರಕಾರಕ್ಕೆ ಬೆಂಬಲವಾಗಿ ನಿಲ್ಲಲಿದ್ದೇವೆ. ಅದು ಕಾಶ್ಮೀರ ಆಗಿರಲಿ ಅಥವಾ ದೇಶದ ಯಾವುದೇ ಭಾಗವಾಗಿರಲಿ, ಭಯೋತ್ಪಾದನೆ ವಿರುದ್ಧ ಹೋರಾಡಲು ಸರಕಾರಕ್ಕೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅವರು ಹೇಳಿದರು.

ಯುದ್ಧಗಳ ಬಗ್ಗೆ ನಮ್ಮ ತಿಳಿವಿನಲ್ಲಿ ಹೇಳುವುದಾದರೆ, 1947ರ ಬಳಿಕ ಇಷ್ಟು ದೊಡ್ಡ ಸಂಖ್ಯೆಯ ಯೋಧರು ಮೃತಪಟ್ಟಿರುವುದು ಇದೇ ಮೊದಲು. ಎಲ್ಲಾ ಪಕ್ಷಗಳ, ಎಲ್ಲ ಧರ್ಮಗಳ ಹಾಗೂ ಎಲ್ಲ ವಲಯಗಳ ಜನರು ರೋದಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಪಕ್ಷ ಭದ್ರತಾ ಪಡೆಗಳು ಹಾಗೂ ಜಮ್ಮುಕಾಶ್ಮೀರದಲ್ಲಿರುವ ಸ್ಥಳೀಯ ಪೊಲೀಸರಿಗೆ ಬೆಂಬಲವಾಗಿ ನಿಲ್ಲುವ ನಿರ್ಧಾರ ತೆಗೆದುಕೊಂಡಿದೆ ಎಂದು ಅವರು ಹೇಳಿದರು.

ಸರಕಾರದೊಂದಿಗೆ ಹಲವು ಭಿನ್ನಾಭಿಪ್ರಾಯಗಳು ಇವೆ. ಆದರೆ, ದೇಶದ ಹಿತಾಸಕ್ತಿಗಾಗಿ, ಎಲ್ಲರ ಭದ್ರತೆ ದಿಶೆಯಲ್ಲಿ ಭಯೋತ್ಪಾದನೆಯನ್ನು ಮಟ್ಟ ಹಾಕಲು ನಾವು ಸರಕಾರಕ್ಕೆ ಬೆಂಬಲ ನೀಡಲಿದ್ದೇವೆ ಎಂದು ಗುಲಾಂ ನಬಿ ಆಝಾದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News