ಕಾಶ್ಮೀರಿಗಳ ಮೇಲೆ ದಾಳಿ: ಕಣಿವೆಯ ವಿವಿಧ ಭಾಗಗಳಲ್ಲಿ ಬಂದ್

Update: 2019-02-16 16:29 GMT

ಶ್ರೀನಗರ, ಫೆ. 16: ಜಮ್ಮು ಹಾಗೂ ಕಾಶ್ಮೀರ ರಾಜ್ಯದ ಹೊರಗೆ ಹಾಗೂ ಜಮ್ಮುವಿನಲ್ಲಿ ಕಾಶ್ಮೀರಿಗಳ ಮೇಲೆ ನಡೆದ ದಾಳಿ ವಿರೋಧಿಸಿ ಇಲ್ಲಿನ ಲಾಲ್ ಚೌಕ ನಗರ ಕೇಂದ್ರ ಹಾಗೂ ಸಮೀಪದ ಪ್ರದೇಶಗಳಲ್ಲಿ ಶನಿವಾರ ಬಂದ್ ಆಚರಿಸಲಾಯಿತು.

ಕಣಿವೆಯ ವ್ಯಾಪಾರ ಸಂಘಟನೆ ಕರೆ ನೀಡಿದ್ದ ಬಂದ್‌ಗೆ ಪ್ರತಿಕ್ರಿಯೆಯಾಗಿ ಲಾಲ್ ಚೌಕ, ಮೈಸುಮಾ, ರೆಸಿಡೆನ್ಸಿ ರಸ್ತೆ ಹಾಗೂ ಇತರ ಸಮೀಪದ ಪ್ರದೇಶಗಳಲ್ಲಿ ಅಂಗಡಿ ಮಾಲಕರು ಬಾಗಿಲು ಮುಚ್ಚಿ ಪ್ರತಿಭಟಿಸಿದರು. ದೇಶದ ವಿವಿಧ ಭಾಗಗಳಲ್ಲಿ ಹಾಗೂ ಜಮ್ಮುವಿನಲ್ಲಿ ಕಾಶ್ಮೀರಿಗಳ ಮೇಲೆ ನಡೆದ ದಾಳಿ ಖಂಡಿಸಿ ವ್ಯಾಪಾರಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕಣಿವೆಯ ಹೊರಗೆ ಕಾಶ್ಮೀರಿ ವ್ಯಾಪಾರಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಭದ್ರತೆ ನೀಡುವಂತೆ ಪ್ರತಿಭಟನಕಾರರು ಆಗ್ರಹಿಸಿದರು. ಇಲ್ಲಿನ ಪ್ರೆಸ್ ಕಾಲನಿಯಲ್ಲಿ ವಿವಿಧ ವ್ಯಾಪಾರ ಸಂಘಟನೆಗಳು, ನೌಕರರ ಒಕ್ಕೂಟ ಕೂಡ ಪ್ರತಿಭಟನೆ ನಡೆಸಿತು. ವ್ಯಾಪಾರಿ ಸಂಘಟನೆ ಕಾಶ್ಮೀರದಲ್ಲಿ ರವಿವಾರ ಕೂಡ ಬಂದ್‌ಗೆ ಕರೆ ನೀಡಿದೆ. ಈ ನಡುವೆ ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಇದ್ದಕ್ಕಿದ್ದಂತೆ ಬಂದ್ ನಡೆಯಿತು. ಜಮ್ಮ್ಮುವಿನಲ್ಲಿ ಹಿಂಸಾತ್ಮಕ ಪ್ರತಿಭಟನೆ ಹಾಗೂ ದೇಶದ ಇತರ ಭಾಗಗಳಲ್ಲಿ ಕಾಶ್ಮೀರಿಗಳ ಮೇಲೆ ನಡೆಯುತ್ತಿರುವ ದೌರ್ಜನ ವಿರೋಧಿಸಿ ಅನಂತ್‌ನಾಗ್ ಪಟ್ಟಣದ ಹೆಚ್ಚಿನ ಅಂಗಡಿಗಳು ಬಾಗಿಲು ಮುಚ್ಚಿದವು. ಪುಲ್ವಾಮ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಜಮ್ಮುವಿನಲ್ಲಿ ಪ್ರತಿಭಟನೆ ನಡೆಯಿತು.

ಇಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಹೇರಲಾಗಿದೆ. ಜಮ್ಮುವಿನಲ್ಲಿ ನಡೆದ ದಾಳಿಯಲ್ಲಿ ಕಾಶ್ಮೀರಿ ಚಾಲಕನೋರ್ವ ಮೃತಪಟ್ಟಿದ್ದಾನೆ ಎಂಬ ವದಂತಿ ಹಬ್ಬಿದ ಬಳಿಕ ಅನಂತ್‌ನಾಗ್‌ನಲ್ಲಿ ಶನಿವಾರ ಯುವಕರ ಗುಂಪೊಂದು ಭದ್ರತಾ ಪಡೆಯೊಂದಿಗೆ ಘರ್ಷಣೆಗೆ ಇಳಿದಿದ್ದರು. ಆದರೆ, ಈ ವದಂತಿಯನ್ನು ಪೊಲೀಸರು ನಿರಾಕರಿಸಿದ್ದಾರೆ. ಇದು ಆಧಾರ ರಹಿತ ಸುಳ್ಳು ಸುದ್ದಿ ಎಂದು ಅವರು ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News