ಬ್ಯಾರಿ ಆಂದೋಲನದ ರೂವಾರಿ ಅಬ್ದುಲ್ ರಹೀಂ ಟೀಕೆಗೆ ನುಡಿನಮನ

Update: 2019-02-16 16:30 GMT

ಮಂಗಳೂರು, ಫೆ.16: ಶುಕ್ರವಾರ ನಿಧನರಾದ ಬ್ಯಾರಿ ಆಂದೋಲನದ ರೂವಾರಿ, ಉದ್ಯಮಿ,ಲೇಖಕ, ಚಿಂತಕ ಅಬ್ದುಲ್ ರಹೀಂ ಟೀಕೆ ಅವರಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ನಗರದ ಪೊಲೀಸ್ ಲೈನ್‌ನಲ್ಲಿರುವ ನಾಸಿಕ್ ಸಭಾಂಗಣದಲ್ಲಿ ಸಂತಾಪ ಸೂಚಕ ಸಭೆ ಶನಿವಾರ ನಡೆಯಿತು.

ಈ ಸಂದರ್ಭ ಜಮ್ಮು ಕಾಶ್ಮೀರದಲ್ಲಿ ನಡೆದ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೂ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಹಮ್ಮದ್ ತನ್ನ ಹಾಗೂ ಅಬ್ದುಲ್ ರಹೀಂ ಟೀಕೆ ಅವರ ಬಾಲ್ಯದ ಒಡನಾಟವನ್ನು ಸ್ಮರಿಸಿದರಲ್ಲದೆ, ರಹೀಂ ಟೀಕೆಯವರು ಮಂಗಳೂರಿನಲ್ಲಿ ಆರಂಭಗೊಂಡ ಬ್ಯಾರಿ ಆಂದೋಲನದ ಚಾಲನಾ ಶಕ್ತಿಯಾಗಿದ್ದರು. ಅವರ ಅಗಲಿಕೆಯು ಬ್ಯಾರಿ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಅಬ್ದುಲ್ ರಹೀಂ ಟೀಕೆ ಅವರ ಸಹೋದರ ಉಮರ್ ಟೀಕೆ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ, ಅಬ್ದುಲ್ ಮಜೀದ್ ಸೂರಲ್ಪಾಡಿ ಮತ್ತಿತರರು ಮಾತನಾಡಿದರು. ಅಬ್ದುಲ್ ರಹೀಂ ಟೀಕೆ ಅವರ ಕುರಿತು ಸ್ವತಃ ರಚಿಸಿದ ಹಾಡನ್ನು ಕವಿ ಶರೀಫ್ ನಿರ್ಮುಂಜೆ ಹಾಡಿದರು.

ಕಾರ್ಯಕ್ರಮದಲ್ಲಿ ಅಬ್ದುಲ್ ರಹೀಂ ಟೀಕೆ ಅವರ ಪುತ್ರರಾದ ರಾಹಿಲ್ ಟೀಕೆ, ಅಶೀಬ್ ಬಾವಾ ಟೀಕೆ, ವಿವಿಧ ಸಂಘಟನೆಗಳ ಪ್ರಮುಖರಾದ ಮುಹಮ್ಮದ್ ಅಲಿ ಉಚ್ಚಿಲ್, ಅಬ್ದುಲ್ಲಾ ಮದುಮೂಲೆ, ಬಶೀರ್ ಬೈಕಂಪಾಡಿ, ಅಝೀಝ್ ಬೈಕಂಪಾಡಿ, ಅಹ್ಮದ್ ಬಾವಾ, ಮುಹಮ್ಮದ್ ಹನೀಫ್ ಗೋಳ್ತಮಜಲು, ಉಮರ್ ಯು.ಎಚ್., ಅಥಾವುಲ್ಲಾ ಜೋಕಟ್ಟೆ, ಆಲಿಕುಂಞಿ ಪಾರೆ, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಖಾಲಿದ್ ತಣ್ಣೀರುಬಾವಿ, ಟಿ.ಎ.ಆಲಿಯಬ್ಬ ಜೋಕಟ್ಟೆ, ಬ್ಯಾರಿ ಅಕಾಡಮಿಯ ಸದಸ್ಯರಾದ ಅಬ್ದುರ್ರಹ್ಮಾನ್ ಕುತ್ತೆತ್ತೂರು, ಆರೀಫ್ ಪಡುಬಿದ್ರೆ ಮತ್ತಿತರರು ಪಾಲ್ಗೊಂಡಿದ್ದರು.

ಬ್ಯಾರಿ ಅಕಾಡಮಿಯ ಸದಸ್ಯ ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News