ಧರ್ಮಸ್ಥಳ: ಮಹಾಮಸ್ತಕಾಭಿಷೇಕ, 1008 ಕಲಶಗಳಿಂದ ಮಹಾಮಜ್ಜನ

Update: 2019-02-16 16:38 GMT

ಬೆಳ್ತಂಗಡಿ, ಫೆ. 16:  ಧರ್ಮಸ್ಥಳದ ರತ್ನಗಿರಿಯಲ್ಲಿ 39 ಅಡಿ ಎತ್ತರದ ಬಾಹುಬಲಿ ಮೂರ್ತಿಯ ಮಹಾ ಮಸ್ತಕಾಭಿಷೇಕವನ್ನು ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಟ್ಟಾರಕರುಗಳು, ಮುನಿಮಹಾರಾಜರುಗಳು ನಡೆಸಿದರು.

ಕ್ರಮವಾಗಿ ಜಲಾಭಿಷೇಕ, ನಾಳೀಕೇರ, ಇಕ್ಷುರಸ (ಕಬ್ಬಿನ ಹಾಲು), ಹಾಲು, ಕಲ್ಕ ಚೂರ್ಣ, ಅರಶಿನ, ಕಷಾಯ, ಚತುಷ್ಕೋಣ ಕಲಶ, ಚಂದನ, ಅಷ್ಟಗಂಧ ಅಭಿಷೇಕ ನಡೆದ ಬಳಿಕ ಪುಷ್ಪವೃಷ್ಟಿ, ಸುವರ್ಣ, ಬೆಳ್ಳಿ ಹಾಗೂ ರತ್ನಗಳ ವೃಷ್ಟಿ ಬಳಿಕ ಪೂರ್ಣ ಕುಂಭ ಅಭಿಷೇಕದೊಂದಿಗೆ ಮಸ್ತಕಾಭಿಷೇಕ ಮುಕ್ತಾಯ ಗೊಂಡಿತು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್  ಹಾಗೂ ಕುಟುಂಬದವರು ವಿವಿಧ ಮಂಗಲ ದ್ರವ್ಯಗಳಿಂದ ಮಸ್ತಕಾಭಿಷೇಕ ನೆರವೇರಿಸಿದರು.

ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕರು, ಹೊಂಬುಜ ಜೈನ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಮೂಡಬಿದ್ರೆಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಮೊದಲಾದವರು ಮಸ್ತಕಾಭಿಷೇಕ ಮಾಡಿದರು.

ನಾಡೋಜ ಹಂಪನಾಗರಾಜಯ್ಯ, ಕಮಲಾ ಹಂಪನಾ, ಡಾ. ಬಿ.ಪಿ. ಸಂಪತ್ ಕುಮಾರ್ ಮಸ್ತಕಾಭಿಷೇಕದ ವೀಕ್ಷಕ ವಿವರಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News