ನಾಳೆ ವಿಶ್ವಸಂಸ್ಥೆ ಕೋರ್ಟ್‌ನಲ್ಲಿ ಭಾರತ-ಪಾಕ್ ಮುಖಾಮುಖಿ

Update: 2019-02-16 17:04 GMT

ಹೇಗ್,ಫೆ.16: ಬೇಹುಗಾರಿಕೆಯ ಆರೋಪದಲ್ಲಿ ನಿವೃತ್ತ ಭಾರತೀಯ ಸೇನಾಧಿಕಾರಿ ಕುಲಭೂಷಣ್ ಜಾಧವ್‌ಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಯನ್ನು ರದ್ದುಪಡಿಸುವಂತೆ ಪಾಕಿಸ್ತಾನಕ್ಕೆ ಆದೇಶಿಸಬೇಕೆಂದು ಭಾರತವು ಸೋಮವಾರ ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ನ್ಯಾಯಾಲಯವನ್ನು ಕೋರಲಿದೆ. ಪುಲ್ವಾಮ ದಾಳಿಯ ಬಳಿ ಈ ಪ್ರಕರಣ ಕೂಡಾ ಉಭಯ ದೇಶಗಳ ನಡುವೆ ಹೊಸತೊಂದು ರಾಜತಾಂತ್ರಿಕ ಉದ್ವಿಗ್ನತೆಗೆ ಕಾರಣವಾಗುವ ಸಾಧ್ಯತೆಯಿದೆ.

ಬೇಹುಗಾರಿಕೆಯ ಆರೋಪದಲ್ಲಿ ಕುಲಭೂಷಣ್ ಜಾಧವ್ ಅವರನ್ನು 2016ರ ಮಾರ್ಚ್‌ನಲ್ಲಿ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತದಲ್ಲಿ ಬಂಧಿಸಲಾಗಿತ್ತು. ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯವು ಅವರಿಗೆ ಗಲ್ಲು ಶಿಕ್ಷೆಯನ್ನು ಘೋಷಿಸಿತ್ತು. ಆದಾಗ್ಯೂ ಭಾರತದ ಮನವಿಯ ಮೇರೆಗೆ, ಹೇಗ್‌ ನ ಅಂತಾರಾಷ್ಟ್ರೀಯ ನ್ಯಾಯಾಲಯವು 2017ರಲ್ಲಿ, ಜಾಧವ್‌ ಗೆ ಗಲ್ಲು ಶಿಕ್ಷೆ ವಿಧಿಸುವುದಕ್ಕೆ ತಡೆಯಾಜ್ಞೆ ನೀಡಿತ್ತು. ಸೋಮವಾರ ಭಾರತವು ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ತನ್ನ ವಾದವನ್ನು ಮಂಡಿಸಲಿದೆ.

ಭಾರತ ಸರಕಾರದಿಂದ ನಿಯೋಜಿತರಾದ ನ್ಯಾಯವಾದಿಗಳು ಸೋಮವಾರ ವಾದಿಸಲಿದ್ದು, ಮಂಗಳವಾರ ಪಾಕ್ ಪರ ವಕೀಲರು ವಾದ ಮಂಡಿಸಲಿದ್ದಾರೆ.

ಅಂತಾರಾಷ್ಟ್ರೀಯ ವಿವಾದಗಳನ್ನು ಇತ್ಯರ್ಥಗೊಳಿಸುವ ಉದ್ದೇಶದಿಂದ ಎರಡನೆ ವಿಶ್ವ ಮಹಾಯುದ್ಧದ ಬಳಿಕ ಹೇಗ್ ನಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ಸ್ಥಾಪನೆಯಾಗಿತ್ತು.

ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಯಾದ ಕುಲಭೂಷಣ್ ಜಾಧವ್ ಅಫ್ಘಾನಿಸ್ತಾನದ ಗಡಿಗೆ ತಾಗಿಕೊಂಡಿರುವ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಭಾರತದ ಗುಪ್ತಚರ ಸಂಸ್ಥೆಗಳ ಪರವಾಗಿ ಕೆಲಸ ಮಾಡುತ್ತಿದ್ದರೆಂದು ಪಾಕ್ ಆರೋಪಿಸಿತ್ತು.

ಜಾಧವ್ ವಿರುದ್ಧ ರಹಸ್ಯ ವಿಚಾರಣೆ ನಡೆಸಿದ ಪಾಕ್ ಸೇನಾ ನ್ಯಾಯಾಲಯವು, ಬೇಹುಗಾರಿಕೆ, ವಿಧ್ವಂಸಕಕೃತ್ಯ ಹಾಗೂ ಭಯೋತ್ಪಾದನೆಯ ಆರೋಪದಲ್ಲಿ ಅವರಿಗೆ ಎಪ್ರಿಲ್ 10, 2017ರಂದು ಮರಣದಂಡನೆ ವಿಧಿಸಿತ್ತು.

ಬಲೂಚಿಸ್ತಾನದ ಪ್ರತ್ಯೇಕವಾದಿಗಳಿಗೆ ಭಾರತ ಬೆಂಬಲ ನೀಡುತ್ತಿರುವುದಾಗಿ ಪಾಕಿಸ್ತಾನವು ಆರೋಪಿಸುತ್ತಿದೆ. ಆದರೆ ಜಾಧವ್ ಬೇಹುಗಾರರಲ್ಲವೆಂದು ಭಾರತ ವಾದಿಸಿದೆ.ಭಾರತೀಯ ನೌಕಾಪಡೆಯ ನಿವೃತ್ತರಾದ ಬಳಿಕ ಜಾಧವ್ ಇರಾನ್‌ನಲ್ಲಿ ಉದ್ಯಮವನ್ನು ನಡೆಸುತ್ತಿದ್ದು, ಅವರನ್ನು ಪಾಕಿಸ್ತಾನವು ಅಪಹರಿಸಿರುವುದಾಗಿ ಭಾರತ ಆರೋಪಿಸಿದೆ.

ಜಾಧವ್ ಅವರಿಗೆ ಭಾರತೀಯ ರಾಜತಾಂತ್ರಿಕ ಸಂಪರ್ಕವನ್ನು ನಿರಾಕರಿಸುವ ಮೂಲಕ ಪಾಕಿಸ್ತಾನವು, ವಿಯೆನ್ನಾ ಒಪ್ಪಂದ ಹಾಗೂ ಮಾನವಹಕ್ಕುಗಳ ಕಾಯ್ದೆಯನ್ನು ಉಲ್ಲಂಘಿಸಿರುವುದಾಗಿ ಭಾರತ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News