ರಾಜ್ಯದ ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸಲು ಮೋದಿ, ಅಮಿತ್ ಶಾ ಸಂಚು: ಯು.ಟಿ.ಖಾದರ್ ಆರೋಪ

Update: 2019-02-16 17:47 GMT

ಮಂಗಳೂರು, ಫೆ.16: ರಾಜ್ಯದ ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸಲು ಮೋದಿ ಮತ್ತು ಅಮಿತ್‌ ಶಾ ರಾಜ್ಯದ ಬಿಜೆಪಿ ಮುಖಂಡರ ಮೂಲಕ ಸಂಚು ನಡೆಸಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಕಳೆದ ಬಜೆಟ್ ಮಂಡನೆ ಹಾಗೂ ಬಳಿಕ ನಡೆದ ಅಧಿವೇಶ ಸಮರ್ಪಕವಾಗಿ ನಡೆಯಲು ಬಿಜೆಪಿ ಅಡ್ದಡಿಪಡಿಸಿದೆ. ರಾಜ್ಯದ ಪ್ರಮುಖ ಯೋಜನೆಗಳ ಖರ್ಚು ವೆಚ್ಚದ ಬಗ್ಗೆ ನಡೆಯಬೇಕಾಗಿದ್ದ ಪ್ರಮುಖ ಚರ್ಚೆಯಲ್ಲಿ ಬಿಜೆಪಿ ಶಾಸಕರು ಭಾಗವಹಿಸದೆ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ರಾಜ್ಯದ ಜನರ ಹಿತಾಸಕ್ತಿಯನ್ನು ಮರೆತು ಬಿಜೆಪಿ ಕಳೆದ ಅಧಿವೇಶನದಲ್ಲಿ ವರ್ತಿಸಿದ ರೀತಿಯನ್ನು ರಾಜ್ಯದ ಜನತೆ ಖಂಡಿತಾ ಸಹಿಸುವುದಿಲ್ಲ. ಬಿಜೆಪಿಯ ಶಾಸಕರಿಗೆ ತಮ್ಮ ಹಿತ ಮಾತ್ರ ಮುಖ್ಯವಾಗಿದೆ ಹೊರತು ರಾಜ್ಯದ ಜನತೆ ಹಿತವನ್ನು ಮರೆತಂತಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ರಾಜ್ಯದಲ್ಲಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದ ಬಿಜೆಪಿ ಶಾಸಕರು, ಬಜೆಟ್ ಮಂಡನೆಯಾಗುವುದಿಲ್ಲ ಸರಕಾರ ಬೀಳುತ್ತದೆ ಎಂದು ಗುಲ್ಲೆಬ್ಬಿಸಿದರು. ಬಳಿಕ ನಡೆದ ಅಧಿವೇಶನದ ಪ್ರಮುಖ ಚರ್ಚೆಯಲ್ಲಿ ಭಾಗವಹಿಸದೆ ಗದ್ದಲ ಎಬ್ಬಿಸಿದ್ದಾರೆ. ಈ ಎಲ್ಲಾ ಘಟನೆಗಳನ್ನು ಗಮನಿಸಿದಾಗ ರಾಜ್ಯದ ಸಮ್ಮಿಶ್ರ ಸರಕಾರದ ಸಾಧನೆಯನ್ನು ಸಹಿಸದ ಬಿಜೆಪಿಯ ಮೋದಿ ಹಾಗೂ ಅಮಿತ್‌ಶಾ ರಾಜ್ಯ ಸರಕಾರ ವಿರುದ್ಧ ಸಂಚು ಹೂಡುತ್ತಿದ್ದಾರೆ ಎನ್ನುವ ಸಂದೇಹ ಉಂಟಾಗಲು ಕಾರಣವಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ಮುಲ್ಕಿ -ಮೂಡುಬಿದಿರೆ ಕೆರೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಮೂಡಬಿದ್ರೆಯ ಮಾಜಿ ಶಾಸಕ ಮತ್ತು ಮಾಜಿ ಸಚಿವ ಅಭಯ ಚಂದ್ರ ಜೈನ್‌ ರವರು ಮುಲ್ಕಿ ಜಲಕದ ಕೆರೆ ಅಭಿವೃದ್ಧಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸರಕಾರ ಪರಿಗಣಿಸಿ 2ಕೋಟಿ ರೂ ಮಂಜೂರು ಮಾಡಿದೆ. ಕೊಣಾಜೆಯ ದಡಸ್ ಕೆರೆ ಅಭಿವೃದ್ಧಿಗೆ ಒಂದೂವರೆ ಕೋಟಿ ಬಿಡುಗಡೆ ಮಾಡಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಕೇಂದ್ರ ಸರಕಾರಕ್ಕೆ ಬೆಂಬಲವಿದೆ:- ಕಾಶ್ಮೀರದಲ್ಲಿ ಉಗ್ರರು ಭಾರತದ ಯೋಧರನ್ನು ಹತ್ಯೆ ಮಾಡಿರುವುದು ಅತ್ಯಂತ ಘೋರ ಕೃತ್ಯವಾಗಿದೆ. ಅದಕ್ಕಾಗಿ ಭಾರತ ಉಗ್ರರ ವಿರುದ್ಧ ಕೈಗೊಳ್ಳುವ ಕಾರ್ಯಾಚರಣೆಗೆ ಬೆಂಬಲವಿದೆ. ಹುತಾತ್ಮರಾದ ಯೋಧರ ಕುಟುಂಬದ ಈ ದು:ಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ, ಯೋಧರಿಗಾಗಿ ನಾಡಿನ ಎಲ್ಲಾ ಜನರು ಹಿಂದು ಮುಸ್ಲಿಂ ಕ್ರೈಸ್ತಗರೆಂಬ ಭೇದ ಮರೆತು ಪ್ರಾಥೀಸೋಣ ಎಂದು ಸಚಿವ ಯು.ಟಿ.ಖಾದರ್ ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪ್ರತಿನಿಧಿಗಳಾದ ಟಿ.ಕೆ.ಸುಧೀರ್, ಸಂತೋಷ್ ಕುಮಾರ್ ಶೆಟ್ಟಿ, ಉಮ್ಮರ್ ಫಾರೂಕ್, ಆಶಾ ಡಿಸಿಲ್ವ, ಧನಂಜಯ, ನಝೀರ್ ಬಜಾಲ್, ವಸಂತ್ ಬೆರ್ನಾಡ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News