ಸಾಹಿತ್ಯಕ್ಕೆ ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿ ಇದೆ: ಸಚಿವ ಖಾದರ್

Update: 2019-02-17 12:50 GMT

ಮಂಗಳೂರು, ಫೆ. 17: ಸಾಹಿತ್ಯಕ್ಕೆ ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿ ಇದೆ. ಆದರೆ ಇಂದಿನ ಯುವ ಪೀಳಿಗೆ ಮತ್ತು ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗ್ಗೆ ಒಲವು ಕಡಿಮೆಯಾಗುತ್ತಿರುವುದು ವಿಷಾದನೀಯ. ಯುವ ಜನಾಂಗದಲ್ಲಿ ಸಾಹಿತ್ಯದ ಬಗ್ಗೆ ಒಲವು ಮೂಢಿಸಿ ಅವರನ್ನು ಸರಿ ದಾರಿಗೆ ತರಲು ಸಾಧ್ಯವಾದರೆ ಅವರ ಎಲ್ಲಾ ಶಕ್ತಿಯನ್ನು ದೇಶದ ಸಂಪತ್ತಾಗಿ ರೂಪಿಸಬಹುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.

ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಯುವ ವಾಹಿನಿ ಮಂಗಳೂರು ಕೇಂದ್ರ ಸಮಿತಿಯ ಆಶ್ರಯದಲ್ಲಿ, ಸಸಿಹಿತ್ಲು ಘಟಕದ ಆತಿಥ್ಯದಲ್ಲಿ ಹಾಗೂ ವಿಶು ಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಸಹಯೋಗದಲ್ಲಿ ನಗರದ ಪುರಭವನದಲ್ಲಿ ರವಿವಾರ ನಡೆದ ವಿಶು ಕುಮಾರ್ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವಜನರು ದುಶ್ಚಟಗಳಿಗೆ ಬಲಿಯಾಗುವುದನ್ನು ಕಾನೂನಿನಿಂದ ಮಾತ್ರ ಸಾಧ್ಯವಾಗದು. ಸಾಮಾಜಿಕ, ಧಾರ್ಮಿಕ ಮುಖಂಡರು ತಿಳುವಳಿಕೆ ನೀಡುವುದರೊಂದಿಗೆ ಮತ್ತು ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸತ್ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯವಿದೆ ಎಂದು ಸಚಿವ ಖಾದರ್ ಹೇಳಿದರು.

ಪುಸ್ತಕ ಬಿಡುಗಡೆ: ದಿ. ವಿಶು ಕುಮಾರ್ ಅವರ ಸಾಹಿತ್ಯ ಕೃತಿಗಳನ್ನು ಹೈಕೋರ್ಟ್ ವಕೀಲೆ ಹಾಗೂ ವಿಶು ಕುಮಾರ್ ಅವರ ಪತ್ನಿ ವಿಜಯಲಕ್ಷ್ಮಿ ಬಿಡುಗಡೆ ಗೊಳಿಸಿದರು. ಬಳಿಕ ಮಾತನಾಡಿದ ಅವರು ತನ್ನ ಪತಿ ವಿಶುಕುಮಾರ್ 32 ವರ್ಷಗಳ ಹಿಂದೆ ಅಗಲಿದ್ದರೂ ತಾನು ದ.ಕ.ಜಿಲ್ಲೆಯ ಜನತೆಯ ಜತೆ ನಿರಂತರ ಸಂಪರ್ಕವನ್ನು ಇರಿಸಿಕೊಂಡಿದ್ದೇನೆ. ಪತಿ ವಿಶು ಕುಮಾರ್ ತನ್ನ ಜತೆ ಕೇವಲ ಒಂದು ವರ್ಷ ಮಾತ್ರ ಇದ್ದು, ಅವರನ್ನು ಬಹಳಷ್ಟು ಅರ್ಥ ಮಾಡಿಕೊಂಡಿ ದ್ದೇನೆ. ಸಹನೆ, ಸರಳತೆ, ಸತ್ಯಕ್ಕೆ ನಿಷ್ಠೆ ಅವರ ಗುಣವಿಶೇಷಗಳು. ಅವರ ಸಾಹಿತ್ಯವನ್ನು ಇಂದಿನ ಯುವಜನರಿಗೆ ಒದಗಿಸಲು ಮುಂದಾಗಿರುವ ಯುವವಾಹಿನಿ ಸಂಘಟನೆ ಅಭಿನಂದನಾರ್ಹ ಎಂದರು.

ವಿಶು ಕುಮಾರ್‌ಗೆ ಮೀನು ಹೆಚ್ಚು ಇಷ್ಟ. ನನಗೆ ಮಿನಿನ ಪದಾರ್ಥ ಮಾಡಲು ಬರುತ್ತಿರಲಿಲ್ಲ. ಒಂದು ದಿನ ವಿಶುಕುಮಾರ್ ಬಂಗುಡೆ ಮೀನು ತಂದು ಪದಾರ್ಥ ಮಾಡುವಂತೆ ಹೇಳಿದ್ದರು. ಬಂಗುಡೆಯನ್ನು ಮುರಿದು ಶುಚಿಗೊಳಿಸಬೇಕೆಂದು ನನಗೆ ತಿಳಿದಿರಲಿಲ್ಲ. ನಾನು ಬಂಗುಡೆಯನ್ನು ಸ್ವಚ್ಛಗೊಳಿಸದೆ ಅದನ್ನು ಇದ್ದ ಹಾಗೆ ಪದಾರ್ಥ ಮಾಡಿ ಕೊಟ್ಟೆನು. ವಿಶು ಕುಮಾರ್ ಅವರು ಏನೂ ಮಾತನಾಡದೆ ಬಂಗುಡೆ ಮೀನಿನ ಮಾಂಸದ ಭಾಗವನ್ನು ಮಾತ್ರ ತಿಂದು ಅದರ ಒಳಗಿದ್ದ ಮಲಿನ ಅಂಶಗಳನ್ನು ಹಾಗೆಯೇ ಇರಿಸಿದ್ದರು. ಬಂಗುಡೆಯನ್ನು ಪದಾರ್ಥ ಮಾಡುವ ಮೊದಲು ಸ್ವಚ್ಛಗೊಳಿಸ ಬೇಕಿತ್ತೆಂದು ನನಗೆ ಆ ಬಳಿಕ ಗೊತ್ತಾಯಿತು. ಒಂದೊಮ್ಮೆ ಇವತ್ತಿನ ಕಾಲದಲ್ಲಿ ಯಾವುದೇ ಹೆಣ್ಣು ಈ ರೀತಿ ಮಾಡಿದ್ದರೆ ಡೈವೋರ್ಸ್‌ಗೆ ಕಾರಣವಾಗುತ್ತಿತ್ತೇನೊ ಎಂದು ವಿಜಯಲಕ್ಷ್ಮಿ ನುಡಿದರು.

ಗೌರವ ಪುರಸ್ಕಾರ: ಹಾಸ್ಯ ಕಲಾವಿದ ಅರವಿಂದ ಬೋಳಾರ್‌ಗೆ ವಿಶು ಕುಮಾರ್ ರಂಗ ಪುರಸ್ಕಾರ, ಸೀತಾರಾಮ ಕುಮಾರ್ ಕಟೀಲ್‌ಗೆ ವಿಶು ಕುಮಾರ್ ಯಕ್ಷ ಪುರಸ್ಕಾರ, ವಕೀಲ ರವಿ ಪ್ರಸನ್ನ ಸಿ.ಕೆ. ಅವರಿಗೆ ವಿಶು ಕುಮಾರ್ ಸೇವಾ ಪುರಸ್ಕಾರ, ಉಗ್ಗಪ್ಪ ಪೂಜಾರಿಗೆ ವಿಶು ಕುಮಾರ್ ಸಾಹಿತ್ಯ ಪುರಸ್ಕಾರ ಪ್ರದಾನ ಮಾಡಲಾಯಿತು.

ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಎ.ಸಿ. ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೇಯರ್ ಭಾಸ್ಕರ್ ಕೆ., ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕಾರಾಮ ಪೂಜಾರಿ, ಸಸಿಹಿತ್ಲು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ಕುಮಾರ್ ಬಿ.ಎನ್. ಭಾಗವಹಿಸಿದ್ದರು.

ವೇದಿಕೆಯಲ್ಲಿ ಯುವ ವಾಹಿನಿ ಸಸಿಹಿತ್ಲು ಘಟಕದ ನರೇಶ್ ಕುಮಾರ್ ಸ್ವಾಗತಿಸಿದರು. ಜಯಂತ್ ನಡುಬೈಲ್, ಸುನಿಲ್ ಕೆ. ಅಂಚನ್, ಶೈಲೇಶ್ ಸಸಿಹಿತ್ಲು, ಭಾಸ್ಕರ ಕೋಟ್ಯಾನ್, ಎಸ್.ಆರ್. ಪ್ರದೀಪ್, ದಿನೇಶ್ ಸುವರ್ಣ ರಾಯಿ, ಪ್ರಕಾಶ್ ಕುಮಾರ್, ಶಕೀಲಾ ನರೇಶ್ ಉಪಸ್ಥಿತರಿದ್ದರು.

ಅಧ್ಯಯನ ಪೀಠಗಳು ಜೊತೆಗೂಡಿ ಕೆಲಸ ಮಾಡಲಿ: ಸಚಿವ ಖಾದರ್

ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ 12 ವಿವಿಧ ಅಧ್ಯಯನ ಪೀಠಗಳಿದ್ದು, ಎಲ್ಲಾ ಪೀಠಗಳು ಜೊತೆಗೂಡಿ ಬೃಹತ್ ಕಾರ್ಯಕ್ರಮವನ್ನು ಈ ವರ್ಷದ ಅಂತ್ಯದೊಳಗೆ ನಡೆಸುವಂತೆ ವಿಶ್ವವಿದ್ಯಾನಿಲಯಕ್ಕೆ ಸಲಹೆ ನೀಡಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.

ತಾನು ಶನಿವಾರ ವಿಶ್ವ ವಿದ್ಯಾನಿಲಯಕ್ಕೆ ತೆರಳಿ ಎಲ್ಲಾ ಅಧ್ಯಯನ ಪೀಠಗಳ ಪ್ರಗತಿ ಪರಿಶೀಲನೆ ನಡೆಸಿದ್ದೇನೆ. ಎಲ್ಲಾ ವರ್ಗದ ಜನರಿಗೆ ಉಪಯುಕ್ತವಾಗುವ ಕಾರ್ಯಕ್ರಮವನ್ನು ಎಲ್ಲರನ್ನೂ ಸೇರಿಸಿ ಹಮ್ಮಿಕೊಳ್ಳುವಂತೆ ಸಲಹೆ ನೀಡಲಾಗಿದೆ ಎಂದು ಸಚಿವ ಖಾದರ್ ನುಡಿದರು.

ಸಾಹಿತ್ಯ ಎಂದರೆ ಭಾಷೆ ಅಥವಾ ಕೇವಲ ಪುಸ್ತಕದ ಓದುವಿಕೆಗೆ ಮಾತ್ರ ಸೀಮಿತಗೊಳಿಸುವುದು ಸರಿಯಲ್ಲ. ಸಾಹಿತ್ಯದಲ್ಲಿ ಒಂದು ಪ್ರದೇಶದ ಸಂಸ್ಕೃತಿ, ಆಚಾರ ವಿಚಾರಗಳೆಲ್ಲವೂ ಸೇರಿರುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News