ಮಣಿಪಾಲ ಹಾಫ್ ಮ್ಯಾರಥಾನ್: ಕೀನ್ಯಾದ ಇಬ್ರಾಹೀಂ, ಆಳ್ವಾಸ್ ನ ಅರ್ಚನಾಗೆ ಚಾಂಪಿಯನ್ ಪ್ರಶಸ್ತಿ

Update: 2019-02-17 15:10 GMT

ಮಣಿಪಾಲ, ಫೆ.17: ಮಣಿಪಾಲದ ಮಾಹೆ ವಿವಿ ಹಾಗೂ ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ ಅಸೋಸಿಯೇಷನ್‌ಗಳ ಜಂಟಿ ಆಶ್ರಯದಲ್ಲಿ ರವಿವಾರ ಮಣಿಪಾಲದಲ್ಲಿ ಆಯೋಜಿಸಲಾದ 21ಕಿ.ಮೀ.ದೂರದ ಮಣಿಪಾಲ ಹಾಫ್ ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿ ಕೀನ್ಯಾದ ಇಬ್ರಾಹೀಂ ಹಾಗೂ ಮಹಿಳೆ ಯರ ವಿಭಾಗದಲ್ಲಿ ಆಳ್ವಾಸ್ ನ ಅರ್ಚನಾ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

‘ಮಾನಸಿಕ ಕಾಯಿಲೆ ಕುರಿತು ಜಾಗೃತಿ’ ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಮ್ಯಾರಥಾನ್‌ಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಬಿ.ನಿಂಬರಗಿ ಮಣಿಪಾಲ ಏಜು ಕಟ್ಟಡದ ಮುಂದೆ ಚಾಲನೆ ನೀಡಿದರು.

ಕೀನ್ಯಾ, ಜರ್ಮನಿ, ಶ್ರೀಲಂಕಾ, ನೈರೋಬಿಯಾ, ಇಥಿಯೋಪಿಯಾ ದೇಶಗಳು ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸುಮಾರು 10 ಸಾವಿರ ಕ್ರೀಡಾಪಟುಗಳು ಇದರಲ್ಲಿ ಪಾಲ್ಗೊಂಡಿದ್ದರು.

ಮಣಿಪಾಲ ಕೆಎಂಸಿ ಗ್ರೀನ್ಸ್‌ನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ಗಳನ್ನು ವಿತರಿಸಲಾಯಿತು. ಹಾಫ್ ಮ್ಯಾರಥಾನ್‌ನ ಮುಕ್ತ ಪುರುಷರ ವಿಭಾಗದಲ್ಲಿ ಪರಸಪ್ಪ ದ್ವಿತೀಯ, ಕೀನ್ಯಾದ ಐಸಾಕ್ ತೃತೀಯ ಮತ್ತು ಮಹಿಳೆಯರ ವಿಭಾಗದಲ್ಲಿ ಶಾಲಿನಿ ದ್ವಿತೀಯ, ಪ್ರಿಯಾಂಕ ತೃತೀಯ ಸ್ಥಾನ ಗಳಿಸಿದರು. ಈ ಎರಡೂ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆದ ಕ್ರೀಡಾಪಟುಗಳಿಗೆ ಪ್ರಶಸ್ತಿಯೊಂದಿಗೆ ಕ್ರಮವಾಗಿ 50ಸಾವಿರ ರೂ., 30ಸಾವಿರ ರೂ. ಹಾಗೂ 15ಸಾವಿರ ರೂ. ನಗದು ಬಹುಮಾನ ನೀಡಲಾಯಿತು.

ಮಾಹೆಯವರಿಗೆ ಏರ್ಪಡಿಸಲಾದ 21ಕಿ.ಮೀ. ಓಟದ ಪುರುಷರ ವಿಭಾಗ ದಲ್ಲಿ ಬಿನು ಪೀಟರ್ ಪ್ರಥಮ, ಮಹಾಕುಟೇಶ್ವರ್ ದ್ವಿತೀಯ, ಸುದೀಪ್ ಕುಮಾರ್ ತೃತೀಯ ಮತ್ತು ಮಹಿಳೆಯರ ವಿಭಾಗದಲ್ಲಿ ಇವುನೈಸ್ ಪ್ರಥಮ, ಕ್ರಿಸ್ಟಿನಾ ದ್ವಿತೀಯ ಹಾಗೂ ಚಿತ್ರಾಲಿ ಖನ್ನಾ ತೃತೀಯ ಸ್ಥಾನ ಪಡೆದುಕೊಂಡರು.

10ಕಿ.ಮೀ. ಮಾಹೆ ಮಹಿಳೆಯರ ವಿಭಾಗ: ಪ್ರ-ಪ್ರಿಯ, ದ್ವಿ-ನೇಹಾ, ತೃ- ಎಮ್ಮಾ. ಪುರುಷರ ವಿಭಾಗ: ಪ್ರ- ಸಂದೀಪ್, ದ್ವಿ- ಸಜನ್ ಕುರಿಯಕೋಸ್, ತೃ- ದೇಬೊರ್ಶಿ. 10 ಕಿ.ಮೀ. ಮುಕ್ತ ಪುರುಷರ ವಿಭಾಗ: ಪ್ರ- ಇಮಾನ್ಯು ವಲ್, ದ್ವಿ-ಪ್ರಶಾಂತ್, ತೃ- ಮಿಕಿಯಸ್. 5ಕಿ.ಮೀ. ಮುಕ್ತ ಪುರುಷರು: ಪ್ರ- ಬಸವರಾಜ್ ಜಿ.ಎಸ್., ದ್ವಿ- ನೀಲಪ್ಪ, ತೃ- ಚಂದನ್. ಮಹಿಳೆಯರ ವಿಭಾಗ: ಪ್ರ-ಪ್ರಿಯಾ, ದ್ವಿ- ಸುಮಾ, ತೃ-ದೀಕ್ಷಾ.

ಸಮಾರಂಭದ ಅಧ್ಯಕ್ಷತೆಯನ್ನು ಮಾಹೆಯ ಸಹಕುಲಪತಿ ಡಾ.ಎಚ್.ಎಸ್. ಬಲ್ಲಾಳ್ ವಹಿಸಿದ್ದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಬಿ.ನಿಂಬರಗಿ, ಐಸಿಐಸಿಐ ದಕ್ಷಿಣ ಮುಖ್ಯಸ್ಥ ವಿರಾಲ್ ರೂಪಾಣಿ, ಕುಂದಾಪುರ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್, ಗೋಲ್ಡನ್ ಗ್ಲೋಬ್ ರೇಸ್‌ನಲ್ಲಿ ಭಾಗವಹಿಸಿದ್ದ ಏಷ್ಯದ ಏಕೈಕ ಸ್ಪರ್ಧಿ ಭಾರತೀಯ ನೌಕಾಪಡೆಯ ಕಮಾಂಡರ್ ಅಭಿಲಾಷ್ ಟಾಮಿ, ಮಣಿಪಾಲ ಸಿಂಡಿಕೇಟ್ ಬ್ಯಾಂಕಿನ ಮಹಾ ಪ್ರಬಂಧಕ ಭಾಸ್ಕರ ಹಂದೆ, ಮಾಹೆಯ ವೈಸ್ ಚಾನ್ಸೆಲರ್ ಡಾ.ಎಚ್.ವಿನೋದ್ ಭಟ್, ಮಾಹೆ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್, ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಶನ್‌ನ ಹಿರಿಯ ಉಪಾಧ್ಯಕ್ಷ ಎಚ್.ಟಿ.ಮಹಾದೇವ, ಉದ್ಯಮಿ ಪುರುಷೋತ್ತಮ ಶೆಟ್ಟಿ, ಐಸಿಐಸಿಐ ಬ್ಯಾಂಕಿನ ಮೆನೇಜರ್ ಜಯಕುಮಾರ್ ಮುಖ್ಯ ಅತಿಥಿಗಳಾಗಿದ್ದರು.

ಮ್ಯಾರಥಾನ್ ಸಂಘಟನಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ರಘುಪತಿ ಭಟ್ ಸ್ವಾಗತಿಸಿದರು. ಅಸೋಸಿಯೇಶನ್‌ನ ಅಧ್ಯಕ್ಷ ಅಶೋಕ್ ಅಡ್ಯಂತಾಯ, ಕಾರ್ಯಾಧ್ಯಕ್ಷ ರಘುರಾಮ ನಾಯಕ್, ಕಾರ್ಯದರ್ಶಿ ದಿನೇಶ್ ಡಿ. ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News