ಮಂಗಳೂರು: ರಾಮಕೃಷ್ಣ ಮಿಷನ್‌ನಿಂದ ಸ್ವಚ್ಛತಾ ಶ್ರಮದಾನ

Update: 2019-02-17 15:01 GMT

ಮಂಗಳೂರು, ಫೆ.17: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಐದನೇ ಹಂತದ ಪ್ರಯುಕ್ತ ಹಮ್ಮಿಕೊಳ್ಳಲಾಗುತ್ತಿರುವ ಶ್ರಮದಾನಗಳ 11ನೇ ಶ್ರಮದಾನವನ್ನು ನಗರದ ಸ್ಟೇಟ್ ಬ್ಯಾಂಕ್ ಬಳಿಯಿರುವ ಸರ್ವೀಸ್ ಬಸ್ ನಿಲ್ದಾಣದಲ್ಲಿ ರವಿವಾರ ಹಮ್ಮಿಕೊಳ್ಳಲಾಯಿತು. ಪರಿಸರ ಪ್ರೇಮಿ ಹಾಗೂ ಕಲಾವಿದ ದಿನೇಶ್ ಹೊಳ್ಳ ಹಾಗೂ ಮನಪಾ ಆರೋಗ್ಯ ಅಧೀಕ್ಷಕ ಭರತ್‌ಕುಮಾರ್ ಸ್ವಚ್ಛತಾ ಶ್ರಮದಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಪರಿಸರ ಪ್ರೇಮಿ ದಿನೇಶ್ ಹೊಳ್ಳ, ರಾಮಕೃಷ್ಣ ಮಿಷನ್ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಸ್ವಚ್ಛತಾ ಅಭಿಯಾನ ಕಳೆದ ನಾಲ್ಕು ವರ್ಷಗಳಲ್ಲಿ ಮಂಗಳೂರಿನ ಜನರ ಮನಸ್ಸಿನಲ್ಲಿ ಅಪಾರವಾದ ಧನಾತ್ಮಕ ಬದಲಾವಣೆ ತಂದಿದೆ. ಇದರಿಂದ ಪ್ರೇರಿತಗೊಂಡು ‘ಸಹ್ಯಾದ್ರಿ ಸಂಚಯ’ ತಂಡದಿಂದ ಪಶ್ಚಿಮ ಘಟ್ಟ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಿದ್ದೇವೆ ಎಂದು ಹೇಳಿದರು.

ಪ್ರಮುಖವಾಗಿ ಜನರ ಅಂತರಂಗ ಶುದ್ಧಿಯಾಗಬೇಕು. ಹಾಗಾದಾಗ ಸಹಜವಾಗಿಯೇ ಬಹಿರಂಗ ಶುಚಿತ್ವ ಕಾಣಬಹುದು. ಇದು ನನ್ನ ನೆಲ ಎಂಬ ಅರಿವು ಪ್ರತಿಯೋರ್ವನಲ್ಲಿ ಉಂಟಾದಾಗ ಊರಿನಲ್ಲಿ ಸ್ವಚ್ಛತೆಯನ್ನು ಕಾಣಬಹುದು. ಇಂತಹ ಭಾವನೆಗಳನ್ನು ಜನರ ಮನಸ್ಸಿನಲ್ಲಿ ಬಿತ್ತುತ್ತಿರುವ ರಾಮಕೃಷ್ಣ ಮಿಷನ್ ನಿಜಕ್ಕೂ ಅದ್ಭುತ ಕಾರ್ಯವನ್ನು ಸಾಧಿಸಿದೆ ಎಂದು ಹೇಳಿದರು.

ಅಭಿಯಾನದ ಮಾರ್ಗದರ್ಶಿ ಕ್ಯಾ.ಗಣೇಶ್ ಕಾರ್ಣಿಕ್ ಕಾರ್ಯಕರ್ತರನ್ನು ಮಾತನಾಡಿದರು.ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೊದಲು ಪುಲ್ವಾಮಾದಲ್ಲಿ ಹುತಾತ್ಮರಾದ ಸೈನಿಕರಿಗೆ ಮೌನ ಆಚರಿಸಿ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಈ ಸಂದರ್ಭ ಸುಭದ್ರಾ ಭಟ್, ಸರಿತಾ ಶೆಟ್ಟಿ, ವಸಂತಿ ನಾಯಕ್, ಯಶೋದಾ ರೈ, ರಾಜೇಶ್ವರಿ, ಡಾ. ಸುಭಾಷಚಂದ್ರ ರೈ ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಸ್ ನಿಲ್ದಾಣದ ರೇಲಿಂಗ್-ಕಂಬಗಳಗೆ ಬಣ್ಣ:ಕಳೆದ ರವಿವಾರ ಸರ್ವೀಸ್ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಕಾರ್ಯವನ್ನು ಪೂರ್ತಿಗೊಳಿಸಲಾಗದ್ದರಿಂದ ಇಂದು ಪುನಃ ಮುಂದುವರಿಸಲಾಯಿತು. ಪ್ರಮುಖವಾಗಿ ಬಸ್ ನಿಲ್ದಾಣ ಕಂಬಗಳು ಹಾಗೂ ರೇಲಿಂಗ್‌ಗಳನ್ನು ಶುಚಿಮಾಡಿ ಬಣ್ಣ ಬಳಿದು ಅಂದಗೊಳಿಸಲು ನಿರ್ಧರಿಸಲಾಯಿತು.

ಅದರಂತೆ ಮೊದಲಿಗೆ ಪ್ರತಿ ಕಂಬಕ್ಕೆ ತಲಾ ಇಬ್ಬರು ಸ್ವಯಂ ಸೇವಕರಂತೆ ಒಟ್ಟು 40 ಕಂಬಗಳಿಗೆ ಸ್ವಯಂ ಸೇವಕರನ್ನು ನಿಯೋಜಿಸಲಾಯಿತು. ಅವರು ಕಂಬಗಳನ್ನು ಸ್ವಚ್ಛ ಮಾಡಿ ಬಣ್ಣ ಬಳಿದರು. ಹಿರಿಯರಾದ ವಿಠಲದಾಸ್ ಪ್ರಭು, ಕಮಲಾಕ್ಷ ಪೈ, ಉಷಾ ಅಮೃತ ಕುಮಾರ ಸೇರಿದಂತೆ ಅನೇಕರು ಆಸಕ್ತಿಯಿಂದ ಬಣ್ಣ ಬಳಿಯುತ್ತಿದ್ದುದು ವಿಶೇಷವಾಗಿತ್ತು.

ಬಸ್ ನಿಲ್ದಾಣ ಸ್ವಚ್ಛತೆ: ಸ್ವಾಮಿ ಏಕಗಮ್ಯಾನಂದರು ಪೊರಕೆ ಹಿಡಿದು ಕಾರ್ಯಕರ್ತರೊಂದಿಗೆ ಕಸಗುಡಿಸಿದರು. ಅಲ್ಲಲ್ಲಿ ಬಿದ್ದಿದ್ದ ಕಸವನ್ನು ಹೆಕ್ಕಿ ಬಸ್ ನಿಲ್ದಾಣವನ್ನು ಸ್ವಯಂ ಸೇವಕರು ಸ್ವಚ್ಛಗೊಳಿಸಿದರು. ನಂತರ ಹತ್ತಿರದಲ್ಲಿ ಕಸದ ರಾಶಿಯನ್ನು ತೆಗೆದು ಅಲ್ಲಿ ಹೂಕುಂಡಗಳನ್ನು ಇಡಲಾಯಿತು. ಆ ಜಾಗದಲ್ಲಿ ಮತ್ತೆ ಕಸ ಬೀಳದಂತೆ ನಿಗಾ ವಹಿಸಲು ನಿರ್ಧರಿಸಲಾಯಿತು. ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು, ನಿವೇದಿತಾ ಬಳಗದ ಸದಸ್ಯರು ಬಸ್ ನಿಲ್ದಾಣದ ಸ್ವಚ್ಛತೆಯಲ್ಲಿ ಭಾಗಿಯಾದರು.

ಆಸನಗಳ ಅಳವಡಿಕೆ: ಸರ್ವೀಸ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಹಾಕಲಾಗಿದ್ದ ಆಸನಗಳು ಹಳೆಯದಾಗಿ ಮುರಿದುಹೋಗಿದ್ದವು. ಸಾರ್ವಜನಿಕರಿಗೆ ಸೂಕ್ತ ಆಸನಗಳ ವ್ಯವಸ್ಥೆಯಿಲ್ಲದೇ ಹಲವು ಬಾರಿ ಜನರು ನೆಲದ ಮೇಲೆಯೇ ಕುಳಿತುಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಸ್ವಚ್ಛ ಮಂಗಳೂರು ಕಾರ್ಯಕರ್ತರು ಅಲ್ಲಿ ವ್ಯವಸ್ಥಿತವಾಗಿ ಆಸನಗಳನ್ನು ಜೋಡಿಸಿ ಅಳವಡಿಸುವ ಕಾರ್ಯವನ್ನು ಆರಂಭಿಸಿದ್ದರು. ಕಳೆದ ವಾರ 15 ಆಸನಗಳನ್ನು ಅಳವಡಿಸಿದ್ದರು; ಈ ರವಿವಾರ ಮತ್ತೆ 25 ಆಸನಗಳನ್ನು ಅಳವಡಿಸಿದರು. ಡ್ರಿಲ್ ಮೂಲಕ ನೆಲ ಅಗೆದು ವಿಶೇಷ ವಿನ್ಯಾಸದ ಆಸನಗಳನ್ನು ಸಿಮೆಂಟ್ ಕಾಂಕ್ರಿಟ್ ಹಾಕಿ ಅಳವಡಿಸಲಾಯಿತು. ನಂತರ ವಿವಿಧ ಬಣ್ಣಗಳನ್ನು ಹಚ್ಚಿ ಮೆರಗು ನೀಡಲಾಯಿತು. ಅಭಿಯಾನದ ಪ್ರಧಾನ ಸಂಯೋಜಕ ದಿಲ್‌ರಾಜ್ ಆಳ್ವ ನೇತೃತ್ವ ವಹಿಸಿದ್ದರು.

ಕಲಾಕೃತಿಗಳ ರಚನೆ: ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಕೆನರಾ ಕಾಲೇಜಿನ ಆವರಣ ಗೋಡೆಗಳ ಮೇಲೆ ಈ ಹಿಂದೆ ಅನೇಕರು ಅನಧಿಕೃತ ಭಿತ್ತಿ ಚಿತ್ರಗಳನ್ನು ಹಚ್ಚಿ ಗೋಡೆಯ ಹಾಗೂ ನಗರದ ಅಂದಗೆಡಿಸುತ್ತಿದ್ದರು. ಹಲವಾರು ಸಲ ತೆಗೆದು ಹಾಕಿದರೂ ಅದು ಮುಂದು ವರೆಯುತ್ತಿತ್ತು. ಆದರೆ ಕಳೆದ ವರ್ಷ ಆ ಗೋಡೆಯನ್ನು ಸ್ವಚ್ಛಗೊಳಿಸಿ ಬಣ್ಣ ಬಳಿಯಲಾಯಿತು.

ನಂತರ ಚಿತ್ರಕಲಾವಿದರಿಂದ ಸಾಮಾಜಿಕ ಜಾಗೃತಿಯನ್ನುಂಟುಮಾಡುವ ಚಿತ್ರ ಕಲಾಕೃತಿಗಳನ್ನು ರಚಿಸಲಾಯಿತು. ಕಳೆದ ಬಾರಿ ಉಳಿದ ಅದೇ ಗೋಡೆಯ ಮತ್ತೊಂದು ಪಾರ್ಶ್ವದ ಭಾಗವನ್ನು ಇಂದು ಸುಂದರ ಚಿತ್ರಗಳನ್ನು ಬರೆದು ಅಂದಗೊಳಿಸಲಾಗಿದೆ. ತುಳುನಾಡಿನ ವೈಭವವನ್ನು ನೆನಪಿಸುವ ಯಕ್ಷಗಾನ, ದೈವಾರಾಧನೆ, ಕಂಬಳ, ಕೆಹುಲಿಕುಣಿತ ಮತ್ತಿತರ ಬೃಹತ್ ಚಿತ್ರಗಳನ್ನು ಅಲ್ಲಿ ಕಾಣಬಹುದಾಗಿದೆ. ಆದಿತತ್ವ ಆರ್ಟ್ಸ್ ಕಲಾವಿದರಾದ ವಿಕ್ರಮ ಶೆಟ್ಟಿ, ಸಂದೀಪ, ಶಿವರಂಜನ್ ಕಲಾಸೇವೆ ನೀಡಿದರು.

ಸುಭೋದಯ ಆಳ್ವ, ಅಕ್ಷಿತ ಅತ್ತಾವರ, ಶಿಶಿರ ಅಮೀನ್, ಪುನೀತ್ ಪೂಜಾರಿ, ಮನಪಾ ಸ್ಥಳೀಯ ಸ್ವಚ್ಛತಾ ಮೇಲ್ವಿಚಾರಕ ದಿನೇಶ್, ಲೋಕೇಶ್ ಕೊಟ್ಟಾರಿ, ಮಸಾ ಹಿರೊ, ಜಗನ್ ಕೋಡಿಕಲ್, ಆನಂದ ಅಡ್ಯಾರ್ ಸೇರಿದಂತೆ ಅನೇಕರು ಶ್ರಮದಾನದಲ್ಲಿ ಪಾಲ್ಗೊಂಡರು. ಈ ಸ್ವಚ್ಛತಾ ಕಾರ್ಯಕ್ರಮಕ್ಕೆ ಎಂಆರ್‌ಪಿಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News