ಕಡಿದುಕೊಂಡ ಪ್ರಾಕೃತಿಕ ಸಂಬಂಧದಿಂದ ಸಂಘರ್ಷ: ಗುರುರಾಜ್ ಸನಿಲ್

Update: 2019-02-17 16:15 GMT

ಉಡುಪಿ, ಫೆ.17: ಪರಿಸರದಲ್ಲಿರುವ ಜೀವಿಗಳು ಮತ್ತು ಮಾನವನ ನಡುವಿನ ಸಂಬಂಧ ಇಂದು ದೂರವಾಗಿದೆ. ಈ ಸಂಬಂಧವನ್ನು ನಾವು ಅರ್ಥ ಮಾಡಿ ಕೊಂಡರೆ ನಮ್ಮ ನಡುವೆ ಯಾವುದೇ ಸಂಘರ್ಷ ನಡೆಯಲು ಸಾಧ್ಯವಿಲ್ಲ ಎಂದು ಉರಗ ತಜ್ಞ ಗುರುರಾಜ್ ಸನಿಲ್ ಹೇಳಿದ್ದಾರೆ.

ಉಡುಪಿಯ ಬೀಯಿಂಗ್ ಸೋಶಿಯಲ್, ನಮ್ಮ ಮನೆ ನಮ್ಮ ಮರ ತಂಡ, ಉಡುಪಿ ಎಂಜಿಎಂ ಕಾಲೇಜಿನ ಸಹಯೋಗದೊಂದಿಗೆ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ಆಯೋಜಿಸಲಾದ ಕೂತು ಮಾತನಾಡುವ ‘ಹಾವು ಮತ್ತು ಹೂವು’ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಹಾವಿಗೆ ಸಂಬಂಧಿಸಿ ಮನುಷ್ಯರಲ್ಲಿ ಗರುಡ ರೇಖೆ ಎಂಬುದು ಇರುವುದಿಲ್ಲ. ಹಾವಿಗೆ ತೋರಿಸುವ ಪ್ರೀತಿ ಹಾಗೂ ಅದನ್ನು ಹಿಡಿ ಯಲು ಇರುವ ಧೈರ್ಯವೇ ಗರುಡ ರೇಖೆಯಾಗಿದೆ. ಹೂವುಗಳನ್ನು ಸ್ಪರ್ಶ ಮಾಡುವ ರೀತಿಯಲ್ಲಿ ಹಾವನ್ನು ಹಿಡಿದರೆ ಅದರಿಂದ ಯಾವುದೇ ಅಪಾಯ ಹಾಗೂ ಅಡ್ಡ ಪರಿಣಾಮ ಇಲ್ಲ ಎಂದು ಅವರು ತಿಳಿಸಿದರು.

ಹಾವುಗಳ ಬಗ್ಗೆ ಭಯ, ಹಲವು ನಂಬಿಕೆ ಸೃಷ್ಠಿಯಾಗಲು ನಮ್ಮ ಪೂರ್ವಜರು ಅದರ ಬಗ್ಗೆ ಸರಿಯಾದ ಜ್ಞಾನ ನೀಡದಿರುವುದೇ ಕಾರಣವಾಗಿದೆ. ಇದರಿಂದ ಹಾವಿನ ಕುರಿತು ಹಲವು ಕಟ್ಟುಕಥೆಗಳು ಸೃಷ್ಟಿಯಾಗಿದೆ ಎಂದ ಅವರು, ನಾವು ತೋರಿಸುವ ಪ್ರೀತಿ, ಕೋಪವನ್ನು ಹಾವುಗಳು ಗ್ರಹಿಸುತ್ತವೆ. ಅಂತಹ ಗುಣ ಸ್ವಭಾವ ಅವುಗಳಿವೆ ಎಂದರು.

ಭಾರತದಲ್ಲಿ ವರ್ಷದಲ್ಲಿ ರಸ್ತೆ ಅಪಘಾತದಲ್ಲಿ ಸಾಯುವವರ ಶೇ.1ರಷ್ಟು ಕೂಡ ಹಾವು ಕಡಿತದಿಂದ ಸಾಯುವುದಿಲ್ಲ. ಆದರೂ ಜನರು ಹಾವಿಗೆ ಭಯ ಪಡುತ್ತಾರೆಯೇ ಹೊರತು ಅಪಘಾತಗಳ ಬಗ್ಗೆ ಯಾವುದೇ ಜಾಗೃತೆ ವಹಿಸು ವುದಿಲ್ಲ. ಆದುದರಿಂದ ಮೊದಲು ನಾವು ಹಾವಿನ ಕುರಿತ ಭಯದ ದೂರ ಮಾಡಿದಾಗ ಎಲ್ಲವೂ ನಮಗೆ ಸರಿಯಾಗಿ ಅರ್ಥವಾಗುತ್ತದೆ ಎಂದು ಅವರು ಹೇಳಿದರು.

ನೈಸರ್ಗಿಕ ನಾಗಬನಗಳನ್ನು ನಾವು ನಮ್ಮ ಸುರಕ್ಷತೆ, ನಂಬಿಕೆ ಹಾಗೂ ವ್ಯಾಪಾರ ಕ್ಕಾಗಿ ಕಾಂಕ್ರೀಟಿಕರಣಗೊಳಿಸಿದ್ದೇವೆ. ವೈವಿಧ್ಯಮಯ ಜೀವಿಗಳಿಗೆ ಆವಾಸ ಪ್ರದೇಶವಾಗಿರುವ ನಾಗಬನಗಳಿಂದ ಶುದ್ಧ ಗಾಳಿ ಹಾಗೂ ನೀರು ಸಮೃದ್ಧವಾಗಿ ದೊರೆಯುತ್ತದೆ. ಆದುದರಿಂದ ನೈಸರ್ಗಿಕ ನಾಗಬನಗಳನ್ನು ಉಳಿಸುವ ಕೆಲಸ ಆಗಬೇಕು ಎಂದರು.

ಈ ಸಂದರ್ಭದಲ್ಲಿ ಗುರುರಾಜ್ ಸನಿಲ್ ಅವರ ಉರಗ ಸಂರಕ್ಷಣೆಯ ವಿಡಿಯೋ ಪ್ರದರ್ಶನ ಮತ್ತು ಎಂ.ಎಸ್.ಸತ್ಯು ನಿರ್ದೇಶನದ ಇಜ್ಜೋಡು ಚಲನ ಚಿತ್ರ ಪ್ರದರ್ಶನ ನಡೆಯಿತು. ಬೀಯಿಂಗ್ ಸೋಶಿಯಲ್‌ನ ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

ಹೆಬ್ಬಾವುಗಳನ್ನು ಕುತ್ತಿಗೆಗೆ ಹಾಕಿಕೊಳ್ಳಬೇಡಿ

ಯುವಕರು ಹೆಬ್ಬಾವುಗಳನ್ನು ಹಿಡಿದು ಪ್ರದರ್ಶಿಸುವುದು ಇಂದು ಒಂದು ರೀತಿಯ ಹುಚ್ಚಾಟವಾಗುತ್ತಿದೆ. ಆದರೆ ಯುವಕರು ಹಿಡಿದ ಹೆಬ್ಬಾವುಗಳನ್ನು ಕುತ್ತಿಗೆ ಹಾಕಿಕೊಳ್ಳುವ ದುಸ್ಸಹಾಸಕ್ಕೆ ಹೋಗಬಾರದು. ಹೆಬ್ಬಾವಿಗೆ ತೀರ ಹಿಂಸೆ ಯಾದಾಗ ಅದು ನಮ್ಮ ಕುತ್ತಿಗೆಯನ್ನು ಬಿಗಿದು ಉಸಿರು ಗಟ್ಟಿಸಿ ಸಾಯಿಸುವ ಅಪಾಯ ಇರುತ್ತದೆ. ಇಂತಹ ಘಟನೆಗಳು ಉತ್ತರ ಭಾರತದಲ್ಲಿ ಹಲವು ಕಡೆಗಳಲ್ಲಿ ಸಂಭವಿಸಿರುವುದು ವರದಿಯಾಗಿದೆ ಎಂದು ಗುರುರಾಜ್ ಸನಿಲ್ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News