ಉಡುಪಿ: ಮತ್ತೆ ನಾಲ್ಕು ಮಂಗಗಳ ಕಳೇಬರ ಪತ್ತೆ
Update: 2019-02-17 22:30 IST
ಉಡುಪಿ, ಫೆ.17: ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಇಂದು ಮತ್ತೆ ನಾಲ್ಕು ಮಂಗಗಳ ಕಳೇಬರ ಪತ್ತೆಯಾಗಿದ್ದು, ಇದರಲ್ಲಿ ಯಾವುದೇ ಮಂಗಗಳ ಅಟಾಪ್ಸಿ ನಡೆಸಿಲ್ಲ ಎಂದು ಮಂಗನ ಕಾಯಿಲೆಯ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಸಿದ್ಧಾಪುರದ ಕೊಡ್ಲಾಡಿ ಹಾಗೂ ಆರ್ಜಿಯಲ್ಲಿ ಎರಡು, ಕರ್ಜೆ ಮತ್ತು ಕುಕ್ಕುಂದೂರಿನಲ್ಲಿ ತಲಾ ಒಂದು ಮಂಗಗಳ ಶವ ದೊರೆತಿದ್ದು, ಇದರಲ್ಲಿ ಸಿದ್ಧಾ ಪುರದಲ್ಲಿನ ಎರಡು ಮಂಗಗಳು ಕೊಳೆತ ಸ್ಥಿತಿಯಲ್ಲಿದ್ದು, ಕರ್ಜೆಯಲ್ಲಿ ರಸ್ತೆ ಅಪಘಾತ ಮತ್ತು ಕುಕ್ಕುಂದೂರಿನಲ್ಲಿ ವಿದ್ಯುತ್ ಆಘಾತದಿಂದ ಮಂಗಗಳು ಮೃತಪಟ್ಟಿರುವುದಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ವಂಡ್ಸೆ ಕೇರಾಡಿಯ ಶಂಕಿತ ಮಂಗನ ಕಾಯಿಲೆ ಪೀಡಿತರೊಬ್ಬರನ್ನು ಪರೀಕ್ಷಿಸಲಾಗಿದ್ದು, ಯಾವುದೇ ಸೊಂಕು ಕಂಡು ಬಂದಿಲ್ಲ. ಈವರೆಗೆ ಜಿಲ್ಲೆಯಲ್ಲಿ ಶಂಕಿತ 40 ಮಂದಿಯ ವರದಿ ಬಂದಿದ್ದು, ಯಾರಲ್ಲಿಯೂ ವೈರಸ್ ಕಂಡುಬಂದಿಲ್ಲ ಎಂದು ಅವರು ತಿಳಿಸಿದರು.