ಹಿರಿಯ ನ್ಯಾಯವಾದಿ ಶಿರ್ತಾಡಿ ವಿಲಿಯಂ ಪಿಂಟೋ ನಿಧನ

Update: 2019-02-17 17:14 GMT

ಉಡುಪಿ, ಫೆ.17: ಹಿರಿಯ ನ್ಯಾಯವಾದಿ ಶಿರ್ತಾಡಿ ವಿಲಿಯಂ ಪಿಂಟೋ ಅಲ್ಪಕಾಲದ ಅಸೌಖ್ಯದಿಂದ ಇಂದು ಅಂಬಾಗಿಲಿನಲ್ಲಿರುವ ಸ್ವಗೃಹದಲ್ಲಿ ನಿಧನ ರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.

 1963ರಲ್ಲಿ ಕಾನೂನು ಅಭ್ಯಾಸ ಆರಂಭಿಸಿದ ಇವರು, ಸಾಮಾಜಿಕ ಕಾರ್ಯ ಕರ್ತರಾಗಿ ದೀನದಲಿತರು, ಬಡವರಿಗೆ ಸಹಾಯಹಸ್ತ ಚಾಚಿದ್ದರು. ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜು, ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದರು. ಐದು ದಶಕಗಳ ಕಾಲ ಕಾನೂನು, ಶೈಕ್ಷಣಿಕ, ರಾಜಕೀಯ, ಸಾಮಾಜಿಕ, ಮಾಧ್ಯಮರಂಗ, ಸಾಹಿತ್ಯ ವಿವಿಧ ಕ್ಷೇತ್ರಗಳಿಗೆ ಕೊಡುಗೆ ನೀಡಿದ್ದರು.

ಇವರು 1974ರಲ್ಲಿ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಜಾರಿಗೆ ತಂದ ಭೂಸುಧಾರಣಾ ಕಾಯ್ದೆಯನ್ನು ಕನ್ನಡ ಮತ್ತು ಕೊಂಕಣಿ ಭಾಷೆಗಳಿಗೆ ಭಾಷಾಂತರ ಮಾಡಿ ಭಾಗಗಳಾಗಿ ಪ್ರಕಟಿಸಿದ್ದರು. 1986ರಲ್ಲಿ ಜಿಲ್ಲಾ ಪರಿಷತ್ ಹಾಗೂ ಮಂಡಲ್ ಪಂಚಾಯತ್ ನಿಯಮಗಳನ್ನು ಪ್ರಚಾರ ಪಡಿಸುವ ಮೂಲಕ ರೈತರಿಗೆ ನೆರವಾಗಿದ್ದರು.

2006ರಲ್ಲಿ ಪ್ರಕಟಗೊಂಡ ಇವರ ಕಾನೂನು ದರ್ಶನ ಕೃತಿಗೆ ಪ್ರಶಸ್ತಿ ಲಭಿ ಸಿದೆ. 1996ರಲ್ಲಿ ಸಂದೇಶ ವಿಶೇಷ ಪ್ರಶಸ್ತಿ, 2003ರಲ್ಲಿ ರಚನಾ ಪ್ರಶಸ್ತಿ, 2004ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ರೆಡ್‌ಕ್ರಾಸ್ ಅವಾರ್ಡ್ ಮತ್ತು 2005ರಲ್ಲಿ ಜೆ.ಪಿ.ಸಮಾಜರತ್ನ ಪ್ರಶಸ್ತಿ, 2007ರಲ್ಲಿ ಜೀವಮಾನ ಸಾಧನೆಗಾಗಿ ಕೊಂಕಣಿ ಸ್ಟಾರ್ ಬಿರುದು, 2007ರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುರಸ್ಕಾರ, 2009ರಲ್ಲಿ ಮಣಿಪಾಲ ಯುನಿರ್ವಸಿಟಿ ಪುರಸ್ಕಾರ, ಮಾತಾ ಅಮೃತಾನಂದಮಯಿ ಪುರಸ್ಕಾರ ಸಹಿತ ಹಲವು ಪ್ರಶಸ್ತಿಗಳು ಲಭಿಸಿವೆ.

ಇವರು ಡಾನ್‌ಬಾಸ್ಕೊ ಕ್ಲಬ್‌ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಕಾರ್ಯದರ್ಶಿಯಾಗಿ, ಜೀವವಿಮಾ ನೌಕರರ ಸಂಘದ ಗೌರವ ಸದಸ್ಯರಾಗಿ , ಕಲ್ಯಾಣಪುರ ಮಿಲಾಗ್ರೀಸ್ ಕಾಲೇಜಿನ ಆಡಳಿತ ಮಂಡಳಿ ಸದಸ್ಯ, ಉಡುಪಿ ಸ್ಕೌಟ್ ಆ್ಯಂಡ್ ಗೈಡ್ಸ್‌ನ ಉಪಾಧ್ಯಕ್ಷರಾಗಿ, ರಾಕ್ಣೋ ಕೊಂಕಣಿ ವಾರ ಪತ್ರಿಕೆಯ ಸಂಪಾದಕೀಯ ಮಂಡಳಿಯ ಸದಸ್ಯರಾಗಿ, ಮಣಿಪಾಲ ಸಿಂಡಿಕೇಟ್ ಬ್ಯಾಂಕಿನ ಕಾನೂನು ಸಲಹೆಗಾರರಾಗಿ, ಉಡುಪಿ ವಕೀಲರ ಸಂಘದ ಉಪಾಧ್ಯಕ್ಷರಾಗಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News