ಶಾಂತಿಕದಡುವವರ ವಿರುದ್ಧ ಕಟ್ಟೆಚ್ಚರ ವಹಿಸಿ: ದಿಲ್ಲಿ ಪೊಲೀಸರಿಗೆ ಅಲ್ಪಸಂಖ್ಯಾತ ಆಯೋಗ ಆಗ್ರಹ

Update: 2019-02-17 17:22 GMT

ಹೊಸದಿಲ್ಲಿ, ಫೆ.17: ಪುಲ್ವಾಮ ಭಯೋತ್ಪಾದಕ ದಾಳಿಯ ಬಳಿಕ ರಾಜಧಾನಿಯಲ್ಲಿ ಶಾಂತಿಯ ವಾತಾವರಣವನ್ನು ಕದಡುವ ಶಕ್ತಿಗಳ ವಿರುದ್ಧ ಕಟ್ಟೆಚ್ಚರ ವಹಿಸುವಂತೆ ದಿಲ್ಲಿಯ ಅಲ್ಪಸಂಖ್ಯಾತ ಆಯೋಗವು ಶನಿವಾರ ದಿಲ್ಲಿ ಪೊಲೀಸರನ್ನು ಆಗ್ರಹಿಸಿದೆ.

ದೇಶದ ವಿವಿಧೆಡೆ ಶ್ರೀಸಾಮಾನ್ಯ ಕಾಶ್ಮೀರಿ ಮುಸ್ಲಿಮರ ಮೇಲೆ ದಾಳಿ ನಡೆಯುತ್ತಿದ್ದರೆ, ರಾಜಧಾನಿಯಲ್ಲೂ ಸೌಹಾರ್ದದ ವಾತಾವರಣವನ್ನು ಕದಡುವ ಹಾಗೂ ಗಲಭೆಗಳನ್ನು ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ದಿಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಝಫರುಲ್ ಇಸ್ಲಾಮ್ ಖಾನ್ ಅವರು ದಿಲ್ಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಮುಸ್ಲಿಮರ ಬಾಹುಳ್ಯವಿರುವ ಪ್ರದೇಶಗಳಲ್ಲಿ ಹಾಗೂ ವಿವಿಧ ಸಮುದಾಯಗಳ ಸಮ್ಮಿಶ್ರ ಜನಸಂಖ್ಯೆಯಿರುವ ಪ್ರದೇಶಗಳಲ್ಲಿನ ಮುಸ್ಲಿಮರ ಮನೆಗಳ ಮುಂದೆ ಮೆರವಣಿಗೆಗಳನ್ನು ನಡೆಸಲಾಗುತ್ತದೆ ಹಾಗೂ ಪ್ರಚೋದನಕಾರಿ ಘೋಷಣೆಗಳನ್ನು ಕೂಗಲಾಗುತ್ತಿದೆ ಎಂದು ಝಫರುಲ್ ಆಪಾದಿಸಿದ್ದಾರೆ. ದಿಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿ, ಕಾರ್ಯಪ್ರವೃತ್ತರಾಗದೆ ಇದ್ದಲ್ಲಿ ಜಮ್ಮು ನಗರದಲ್ಲಾದಂತೆ ರಾಜಧಾನಿಯಲ್ಲೂ ಗಲಭೆಗಳು ಭುಗಿಲೇಳಲಿದೆ’’ ಎಂದು ಅವರು ಹೇಳಿದ್ದಾರೆ. ದಿಲ್ಲಿಯ ಎಲ್ಲಾ ಪೊಲೀಸ್ ಠಾಣೆಗಳು ಕಟ್ಟೆಚ್ಚರ ವಹಿಸಿ, ಕಾರ್ಯಾಚರಿಸುವ ಮೂಲಕ ಎಷ್ಟೇ ಬೆಲೆತೆತ್ತಾದರೂ, ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡಬೇಕು’’ ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News