ಕಾಂಗ್ರೆಸ್ ಆಡಳಿತದಲ್ಲಿ ಪ್ರಗತಿ ಸಾಧಿಸಿದ ಪಾಲಿಕೆ: ಸಚಿವ ಖಾದರ್

Update: 2019-02-17 17:25 GMT

ಮಂಗಳೂರು, ಫೆ.17: ನಗರದ ಜನವಸತಿ ಪ್ರದೇಶದಲ್ಲಿ ನೀರು, ಮಾರುಕಟ್ಟೆ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದು, ಕಾಂಗ್ರೆಸ್ ಆಡಳಿತದಲ್ಲಿ ಪಾಲಿಕೆ ಕ್ಷಿಪ್ರಗತಿಯಲ್ಲಿ ಪ್ರಗತಿಯನ್ನು ಕಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.

ಕಾವೂರಿನಲ್ಲಿ ಮಂಗಳೂರು ಮಹಾನಗರ ಪಾಲಿಕೆಯ 4.85 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಂಡ ಕಾವೂರು ಮಾರುಕಟ್ಟೆ ಸಂಕೀರ್ಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶೀಘ್ರದಲ್ಲಿ ಕದ್ರಿ ಮಾರುಕಟ್ಟೆ ಶಂಕು ಸ್ಥಾಪಿಸಲಾಗುವುದು. ಕಂಕನಾಡಿ ಮಾರ್ಕಟ್‌ಗೆ ಅನುದಾನ ಮಂಜೂರಾಗಿದ್ದು, ಇನ್ನೂ ಇತರ 1,090 ಕೋಟಿ ರೂ. ಯೋಜನೆ ಕಾಮಗಾರಿ ಶೀಘ್ರ ಅನುಷ್ಠಾನಗೊಳ್ಳಲಿದೆ ಎಂದರು.

ರಾಜ್ಯ ಸರಕಾರದಿಂದ ಮಂಗಳೂರು ಮಹಾನಗರ ಪಾಲಿಕೆಗೆ ಮಂಜೂರಾದ ಅನುದಾನಗಳ ಬಗ್ಗೆ ಮಾತನಾಡಿ, ರಾಜಕಾಲುವೆ ಸಮಸ್ಯೆಗಳಿಗೆ ಸ್ಟ್ರಾಂಗ್ ವಾಟರ್ ಡ್ರೈನ್ ಹಾಗೂ 450 ಕೋಟಿ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಯೋಜನೆಗೂ ಶಂಕು ಸ್ಥಾಪನೆ ನೆರವೇರಿಸಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೇಯರ್ ಭಾಸ್ಕರ ಕೆ. ವಹಿಸಿದ್ದರು. ರಾಜ್ಯ ಸರಕಾರದ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ಉಪ ಮೇಯರ್ ಕೆ.ಮುಹಮ್ಮದ್, ಪಟ್ಟಣ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ನವೀನ್ ಆರ್. ಡಿಸೋಜ, ಪಾಲಿಕೆ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಪಾಲಿಕೆ ಆಯುಕ್ತ ನಜೀರ್, ಉಪಆಯುಕ್ತ ರಂಗನಾಥ್ ನಾಯಕ್, ಕಾರ್ಪೊರೇಟರ್‌ಗಳಾದ ದೀಪಕ್ ಪೂಜಾರಿ ಕಾವೂರು, ಲತಾ, ಪ್ರೇಮಾನಂದ ಶೆಟ್ಟಿ, ಹರಿನಾಥ್, ಮಧುಕಿರಣ್, ಸಬಿತಾ ಮಿಸ್ಕಿತ್, ನಾಗವೇಣಿ, ದಯಾನಂದ, ಅಖಿಲಾ ಆಳ್ವಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News