‘ದಲಿತ ಸಂಘಟನೆಗಳು ಸ್ವಾರ್ಥ ರಾಜಕಾರಣಕ್ಕೆ ದುರ್ಬಳಕೆ’

Update: 2019-02-17 17:35 GMT

ಮಂಗಳೂರು, ಫೆ.17: ದೇಶದಲ್ಲಿ ಕಾರ್ಯಾಚರಿಸುತ್ತಿರುವ ಹಲವಾರು ದಲಿತ ಸಂಘಟನೆಗಳು ಸ್ವಾರ್ಥ ರಾಜಕಾರಣಕ್ಕೆ ಬಲಿಯಾಗುತ್ತಿರುವುದು ದುರಂತ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯು.ಬಸವರಾಜು ಬೇಸರ ವ್ಯಕ್ತಪಡಿಸಿದರು.

ದಲಿತ ಹಕ್ಕುಗಳ ಸಮಿತಿ (ಡಿಎಚ್‌ಎಸ್) ಮತ್ತು ನವದಿಲ್ಲಿಯ ದಲಿತ್ ಶೋಷಣ್ ಮುಕ್ತಿ ಮಂಚ್ ಸಂಯುಕ್ತಾಶ್ರಯದಲ್ಲಿ ಮಂಗಳೂರು ನಗರ ಸಮೀಪದ ಕೊಂಚಾಡಿಯ ಶ್ರೀರಾಮಾಶ್ರಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರವಿವಾರ ಹಮ್ಮಿಕೊಳ್ಳಲಾದ ದ.ಕ. ಜಿಲ್ಲಾ ಮಟ್ಟದ ಎರಡು ದಿನಗಳ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಾಸ್ತವದಲ್ಲಿ ದಲಿತ ಸಂಘಟನೆಗಳು ಜಾತಿ ಆಧಾರಿತ ಸಂಘಟನೆಗಳಾಗುತ್ತಿವೆ. ಜೊತೆಗೆ ದಲಿತ ಸಂಘಟನೆಗಳು ಯಾವುದೇ ರಾಜಕೀಯದ ಕೆಳಗೆ ಕೆಲಸ ಮಾಡದೇ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಇಂತಹ ತೀರ್ಮಾನ ಕೈಗೊಂಡು ರಾಜ್ಯದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಡಿಎಚ್‌ಎಸ್‌ನ್ನು ಸ್ಥಾಪಿಸಲಾಗಿದೆ. ಡಿಎಚ್‌ಎಸ್ ಜಾತಿ, ಧರ್ಮದ ಸಂಘಟನೆಯಲ್ಲ. ದಲಿತ ದೌರ್ಜನ್ಯ ವಿಮೋಚನೆ, ದಲಿತರ ಹಕ್ಕುಗಳನ್ನು ಪ್ರಶ್ನಿಸಲು ಈ ಸಂಘಟನೆ ಮುಂದಾಗಲಿದೆ ಎಂದು ವಿವರಿಸಿದರು.

ದ.ಕ. ಜಿಲ್ಲೆಯ ಮೂಲೆ ಮೂಲೆಯಲ್ಲೂ ದಲಿತ ಹಕ್ಕುಗಳನ್ನು ಸಂರಕ್ಷಿಸುವ ‘ಡಿಎಚ್‌ಎಸ್’ ಸಂಘಟನೆ ಕಟ್ಟಲು ಕೆಲಸಗಳು ದೊಡ್ಡ ಪ್ರಮಾಣದಲ್ಲಿ ನಡೆಯಬೇಕು. ಪ್ರಸ್ತುತ ದಿನಮಾನಗಳಲ್ಲಿ ಅದರ ಅಗತ್ಯವೂ ಇದೆ. ಈ ಕುರಿತು ಶಿಬಿರಗಳು, ಸರ್ವ ಸದಸ್ಯರ ಸಭೆ, ಸಾರ್ವಜನಿಕ ಸಭೆ, ಬಹಿರಂಗ ಸಭೆ, ಬೈಟಕ್‌ಗಳು, ಸಂವಾದಗಳುಗಳನ್ನು ಹಮ್ಮಿಕೊಳ್ಳಬೇಕು. ದಲಿತರ ಹಕ್ಕುಗಳ ಪ್ರಶ್ನೆಗಳು ಸಮಾಜದ ಮುನ್ನೆಲೆಗೆ ಬರಬೇಕು. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ನಡೆಯುವ ಅಧ್ಯಯನ ಶಿಬಿರ ತುಂಬಾ ಅರ್ಥಪೂರ್ಣವಾಗಿದೆ ಎಂದರು.

ದಲಿತರು ಒಗ್ಗೂಡಲಿ: ಸಾರ್ವಜನಿಕರಲ್ಲಿ ದಲಿತ ಹಕ್ಕುಗಳ ಬಗ್ಗೆ ಜಾಗೃತಿ ಮೂಡಬೇಕು. ದಲಿತ ಹಕ್ಕುಗಳು ಮುನ್ನೆಲೆಗೆ ಬಾರದೇ ದಲಿತ ಸಮಸ್ಯೆಗಳು ಪರಿಹಾರವಾಗಲು ಸಾಧ್ಯವಿಲ್ಲ; ದೇಶಕ್ಕೆ ಬಿಡುಗಡೆಯಿಲ್ಲ. ಈಗಾಗಲೇ ಜಾಗೃತಿಗೊಂಡ ದಲಿತರನ್ನು ಒಂದೇ ವೇದಿಕೆಗೆ ತರಬೇಕು. ಜೊತೆಗೆ ದಲಿತ ಹಕ್ಕುಗಳಿಗಾಗಿ ಕಾರ್ಯಾಚರಿಸುತ್ತಿರುವ ವಿವಿಧ ಸಂಘ-ಸಂಸ್ಥೆಗಳು, ವ್ಯಕ್ತಿಗಳನ್ನು ಒಗ್ಗೂಡಿಸಲು ಪ್ರಯತ್ನ ಮಾಡಬೇಕು. ಅಂತಹ ದಿಕ್ಕಿನ ಕಡೆಗೆ ಹೆಜ್ಜೆ ಇರಬೇಕಾಗಿದೆ ಎಂದು ಜಿಲ್ಲಾ ಡಿಎಚ್‌ಎಸ್ ಘಟಕಕ್ಕೆ ಮನವಿ ಮಾಡಿದರು.

ದಲಿತರನ್ನು ಒಗ್ಗೂಡಿಸದೇ ದಲಿತ ಹಕ್ಕುಗಳನ್ನು ಮುನ್ನೆಲೆಗೆ ತರಲು ಸಾಧ್ಯವಿಲ್ಲ. ಇದಕ್ಕೆ ಬಲವಾದ ಸಂಘಟನೆ, ನ್ಯಾಯಯುತ ಹೋರಾಟ ಅಗತ್ಯವಾಗಿದೆ. ಸ್ವತಂತ್ರ ಸಂಘಟನೆಗಳನ್ನು ಕಟ್ಟುವಾಗ ಎಡ ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳ ಜೊತೆ ದಲಿತ ಸಂಘಟಗಳು ಜೈವಿಕ ಸಂಬಂಧವನ್ನು ಬೆಳೆಸಿಕೊಂಡು ಚಳವಳಿಯನ್ನು ಮುನ್ನೆಲೆಗೆ ಒಯ್ಯುವ ವ್ಯವಸ್ಥೆಯನ್ನು ಕಂಡುಕೊಳ್ಳಬೇಕು. ದಲಿತ ಹಕ್ಕುಗಳ ಚಳವಳಿಯ ಬೆಳವಣಿಗೆಗೆ ಎಲ್ಲರೂ ಅಪೇಕ್ಷೆ ಪಡಬೇಕು. ಇದಕ್ಕೆ ಕರ್ನಾಟಕ ರೈತ ಸಂಘ ಬೆಂಬಲ ನೀಡಲಿದೆ ಎಂದರು.

ದಲಿತರ ಮೇಲಿನ ದೌರ್ಜನ್ಯ ಹೆಚ್ಚಳ: ಭಾರತಕ್ಕೆ ಸ್ವಾತಂತ್ರ ದೊರೆತು, ಸಂವಿಧಾನ ಜಾರಿಗೊಂಡು ಏಳು ದಶಕಗಳು ಸಂದರೂ ಮಾನವ ಅಭ್ಯುದಯ ಸೂಚ್ಯಂಕದ ಎಲ್ಲ ವಿಭಾಗಗಳಲ್ಲಿ ದಲಿತ ಸಮುದಾಯವು ತೀವ್ರ ಹಿನ್ನಡೆ ಸಾಧಿಸಿದೆ. ದಲಿತರು ಎಲ್ಲ ರೀತಿಯ ಹಕ್ಕುಗಳಿಂದ ವಂಚಿತರಾಗಿ ಅಮಾನವೀಯ ರೀತಿಯಲ್ಲಿ ಬದುಕುತ್ತಿದ್ದಾರೆ. ಜಾತಿ ತಾರತಮ್ಯ, ಶಿಕ್ಷಣ, ವಸತಿ, ಉದ್ಯೋಗ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ದಲಿತರ ಮೇಲೆ ನಿತಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದು, ದೌರ್ಜನ್ಯದ ಪ್ರಮಾಣ ಹೆಚ್ಚುತ್ತಲೇ ನಡೆದಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ದಲಿತ ಸಮುದಾಯದ ನರಳಾಟ: ಬುದ್ಧ, ಬಸವ, ಅಂಬೇಡ್ಕರ್ ಅವರ ಸಾಮಾಜಿಕ ಬದಲಾವಣೆಯ ಚಳವಳಿಗಳು ಸಾಮಾಜಿಕ ಸಂಚಲನ ನಿರ್ಮಿಸಿದೆಯಾದರೂ ಆಮೂಲಾಗ್ರ ಬದಲಾವಣೆ ಹೊಂದಲು ಸಾಧ್ಯವಾಗಿಲ್ಲ. ದೇಶದ ಜನಸಂಖ್ಯೆಯಲ್ಲಿ ನಾಲ್ಕನೇ ಒಂದು ಭಾಗಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ದಲಿತ ಸಮುದಾಯವರಿದ್ದಾರೆ. ಜಾತಿ ಆಧಾರಿತ ಸಾಮಾಜಿಕ ವ್ಯವಸ್ಥೆಯಲ್ಲಿ ದಲಿತ ಸಮುದಾಯವು ಸಾಮಾಜಿಕ, ಆರ್ಥಿಕ ಶೋಷಣೆಗೆ ಬಲಿಯಾಗಿ ನರಳುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದಲಿತ ಚಿಂತಕ ಸೀತಾರಾಮ ಎಸ್., ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಎಲ್ಲ ಪೋಷಕರು ತಮ್ಮ ಮಕ್ಕಳಿಗೆ ಪ್ರಥಮ ಆದ್ಯತೆಯಾಗಿ ಶಿಕ್ಷಣವನ್ನು ನೀಡಬೇಕು. ಇಂದಿನ ದಿನಮಾನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಾತ್ಮಕ ಸನ್ನೀವೇಶವಿದೆ. ಕನಿಷ್ಠ ಪಕ್ಷ ಪದವಿಯರೆಗೂ ಶಿಕ್ಷಣವನ್ನು ನೀಡಬೇಕು. ಬಳಿಕ ದಲಿತರ ಅಭಿವೃದ್ಧಿಗಾಗಿ ಬಲಾಢ್ಯ ಸಂಘಟನೆ ಕಟ್ಟಬೇಕು. ಸಂಘಟನೆಯಲ್ಲಿ ಭಿನ್ನಾಭಿಪ್ರಾಯ ಮೂಡದಂತೆ ಕಾರ್ಯ ನಿರ್ವಹಣೆ ಮಾಡಬೇಕು. ಜೊತೆಗೆ ನ್ಯಾಯಯುತ ಹೋರಾಟ ಕೈಗೊಂಡಲ್ಲಿ ದಲಿತರ ಏಳಿಗೆ ಶತಸಿದ್ಧ ಎಂದು ತಿಳಿಸಿದರು.

ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಮಿತಿಯ ಸಂಚಾಲಕ ಗೋಪಾಲಕೃಷ್ಣ ಅರಳಹಳ್ಳಿ ದಲಿತರ ಹಕ್ಕುಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಅಧ್ಯಕ್ಷ ತಿಮ್ಮಯ್ಯ ಕೆ. ವಹಿಸಿದ್ದರು.

ವೇದಿಕೆಯಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮಿತಿಯ ಅಧ್ಯಕ್ಷ ಭಾಸ್ಕರ್ ನಂತೂರು, ಗಿರಿಯಾ ಮೂಡುಬಿದಿರೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಸಮತಿಯ ಪ್ರಧಾನ ಕಾರ್ಯದರ್ಶಿ ಯಾದವ ಶೆಟ್ಟಿ, ವಸಂತ ಆಚಾರಿ, ಬಾಲಕೃಷ್ಣ ಶೆಟ್ಟಿ, ಡಿಎಚ್‌ಎಸ್‌ನ ರಾಜ್ಯ ಮುಖಂಡ ನಾಗರಾಜ, ಎಂ.ಸುಂದರ್ ಸಾಲ್ಯಾನ್ ಬಳ್ಳಾಲ್‌ಭಾಗ್, ಪದ್ಮನಾಭ ಕೊಂಚಾಡಿ, ದಯಾಂದ ಶೆಟ್ಟಿಗಾರ್, ನಾರಾಯಣ ಕೊಂಚಾಡಿ, ಸುನಂದ ಕೆ., ಮೋನಪ್ಪ ದೇವಾಡಿಗ ಯೆಯ್ಯಿಡಿ, ಚಂದ್ರಹಾಸ ಕೊಂಚಾಡಿ, ಪಾಂಡುರಂಗ ಕೊಂಚಾಡಿ, ವೆಂಕಟೇಶ್ ಕೊಂಚಾಡಿ ಮತ್ತಿತರರಿದ್ದರು.

ಕಾರ್ಯಕ್ರಮದಲ್ಲಿ ಯಮುನಾ ಪಚ್ಚನಾಡಿ ಪ್ರಾರ್ಥಿಸಿದರು. ಡಿಎಚ್‌ಎಸ್‌ನ ಗೌರವಾಧ್ಯಕ್ಷ ಡಾ.ಕೃಷ್ಣಪ್ಪ ಕೊಂಚಾಡಿ ಸ್ವಾಗತಿಸಿದರು. ನವೀನ್ ಬೊಲ್ಪುಗುಡ್ಡೆ ನಿರೂಪಿಸಿದರು. ಶಶಿಧರ್ ಗುಂಡಳಿಕೆ ವಂದಿಸಿದರು. ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News