ಪುತ್ತೂರಿನಲ್ಲಿ ಧರ್ಮಸಭೆ, ಹಿಂದೂ ಚೈತನ್ಯ ಸಮಾವೇಶ

Update: 2019-02-17 18:01 GMT

ಪುತ್ತೂರು, ಫೆ. 17: ಹಿಂದೂ ಜಾಗರಣಾ ವೇದಿಕೆಯ ನೇತೃತ್ವದಲ್ಲಿ ರವಿವಾರ ರಾತ್ರಿ ಪುತ್ತೂರಿನ ಶ್ರಿ ಮಹಾಲಿಂಗೇಶ್ವರ ದೇವಳದ ದೇವಮಾರು ಗದ್ದೆಯಲ್ಲಿ ಹಿಂದೂ ಧರ್ಮಸಭೆ ಹಾಗೂ ಹಿಂದೂ ಚೈತನ್ಯ ಸಮಾವೇಶ ನಡೆಯಿತು. 

ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಸಂಚಾಲಕ ದೊ. ಕೇಶವ ಮೂರ್ತಿ ದೇಶದಲ್ಲಿ ನಡೆಯುತ್ತಿರುವ ಮತಾಂತರ, ಗೋಹತ್ಯೆ, ಭಯೋತ್ಪಾಧನೆ, ಬಾಂಗ್ಲಾ ದೇಶದ ನುಸುಳುವಿಕೆ ತಡೆಯಲು ಹಿಂದೂ ಜಾಗರಣಾ ವೇದಿಕೆಯು ನಿರಂತರ ಕೆಲಸ ಮಾಡುತ್ತಿದೆ. ಕಾಶ್ಮೀರದಲ್ಲಿ ಕಲ್ಲು ಹೊಡೆಯುತ್ತಿದ್ದಾತ ಇದೀಗ ಆತ್ಮಹತ್ಯಾ ಬಾಂಬರ್ ನಮ್ಮ ಸ್ಯೆನಿಕರನ್ನು ಹತ್ಯೆ ಮಾಡಿದ್ದಾನೆ. ಅಂದು ಕಲ್ಲು ಹೊಡೆದ ಸಂದರ್ಭದಲ್ಲಿ ಅವರ ಪರವಾಗಿದ್ದ ಇಲ್ಲಿನ ಬುದ್ದಿ ಜೀವಿಗಳು, ಪತ್ರಕರ್ತರು ಹಾಗೂ ಮಾನವ ಹಕ್ಕುಗಳ ಹೋರಾಟಗಾರರು ಈಗ ಮಾತನಾಡುತ್ತಿಲ್ಲ. ರೈಲಿನಲ್ಲಿ ಗೋಮಾಂಸ ಸಾಗಾಟ ಮಾಡಿದಾಗ ಆತನನ್ನು ತಡೆದಾಗ ಹಾಗೂ ಗೌರಿ ಲಂಕೇಶ್ ಹತ್ಯೆ ಆದಾಗ ಖಂಡಿಸಿದ, ಹೋರಾಟ ನಡೆಸಿದ ಜಾತ್ಯಾತೀತವಾದಿ ಗಳು ಮತ್ತು ಪತ್ರಕರ್ತರು ಕಾಶ್ಮೀರದಲ್ಲಿ ಭಯೋತ್ಪಾದಕರು ಓರ್ವ ಮುಸ್ಲಿಂ ಎಸ್‍ಐಯನ್ನು ಬೆತ್ತಲೆಗೊಳಿಸಿ ಹತ್ಯೆ ನಡೆಸಿದಾಗ ಖಂಡಿಸಿಲ್ಲ. ಇದು ಅವರ ಚಿಂತೆಯನ್ನು ತೋರಿಸುತ್ತದೆ ಎಂದು ಹೇಳಿದರು.

ಒಡಿಯೂರು ಗುರುದೇವದತ್ತ ಸಂಸ್ಥಾನಂನ ಶ್ರೀ ಮಾತಾನಂದ ಮಯಿ ಮಾತನಾಡಿ ದೇಶದಲ್ಲಿ ಹಲವು ಗೊಂದಲ, ದಾಳಿಗಳು ನಡೆಯುತ್ತಿದೆ. ಇದನ್ನು ತಡೆಯಲು ಆಧ್ಯಾತ್ಮಿಕ ಮತ್ತು ಕ್ಷತ್ರೀಯ ಶಕ್ತಿ ಮೇಲೈಸಬೇಕು. ಈಗಾದಲ್ಲಿ ನಾವು ಎಲ್ಲವನ್ನೂ ಎದುರಿಸ ಬಹುದು. ಮಾತೃಶಕ್ತಿ, ಸಂತ ಶಕ್ತಿ ಮತ್ತು ಯುವ ಶಕ್ತಿ ಒಂದುಗೂಡಿದಾಗ ರಾಷ್ಟ್ರೋತ್ಥಾನ ಸಾಧ್ಯ ಎಂದರು. 

ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾಧನೆಗೆ ಕಾರಣವಾದ ಪಾಕಿಸ್ಥಾನವನ್ನು ಭೂಪಟವನ್ನು ಇಲ್ಲವಾಗಿಸಲು ನಾವೆಲ್ಲರೂ ಪ್ರಧಾನಿ ಬೆನ್ನಿಗೆ ನಿಲ್ಲಬೇಕು. ದುಷ್ಟ ಘಟಬಂಧನವನ್ನು ಮಣ್ಣು ಮುಕ್ಕಿಸಿ 56 ಇಂಚು ಎದೆಯ ನರೇಂದ್ರ ಮೋದಿಯನ್ನು ಪ್ರಧಾನಿಯನ್ನಾಗಿಸಬೇಕು. ಭಯೋತ್ಪಾಧಕರು ದೇಶದ ಹೊರಗಿಲ್ಲ. ಇಲ್ಲಿನ ಬುದ್ದಿಜೀವಿಗಳು  ಇನ್ನಿತರ ಪಾಕಿಸ್ಥಾನ ಪರವಾಗಿ ದೇಶ ದ್ರೋಹದ ಕೆಲಸ ಮಾಡುತ್ತಾರೆ. ನವಜ್ಯೋತ್ ಸಿಂಗ್ ಸಿಧು ಪಾಕಿಸ್ಥಾನಕ್ಕೆ ಬೋಪರಾಕ್ ಹೇಳಿದ್ದು, ಅಂತಹ ವ್ಯಕ್ತಿಗಳನ್ನು ಪಾಕಿಸ್ಥಾನಕ್ಕೆ ಓಡಿಸಬೇಕು. ಇಲ್ಲದಿದ್ದಲ್ಲಿ ಹಿಂದೂ ಸಂಸ್ಕೃತಿ ಉಳಿಯಲಾರದು ಎಂದರು. 

ನಾನೋರ್ವ ಸಂತನಾಗಿದ್ದರೂ ನನಗೆ ಅವಕಾಶ ನೀಡಿದರೆ ನೂರು ಭಯೋತ್ಪಾಧಕರನ್ನು ಕೊಂದು ಬಳಿಕ ಸಾಯುತ್ತೇನೆ ಎಂದು ಹೇಳಿದರು. 
ವೇದಮೂರ್ತಿ ಕುಂಟಾರು ರವೀಶ್ ತಂತ್ರಿ ಮಾತನಾಡಿ ಅಧಿಕಾರದ ಕುರ್ಚಿಗಾಗಿ ತಾಯಿ ಭಾರತಿಗೆ ಅವಮಾನ ಮಾಡುತ್ತಿರುವ ಸಂದರ್ಭದಲ್ಲಿ ಮತ್ತೊಬ್ಬ ನೇತಾರ ಭಾರತದಲ್ಲಿ ಘರ್ಜಿಸುತ್ತಿದ್ದಾರೆ. ಅವರ ಘರ್ಜನೆಗೆ ನಾವು ಶಕ್ತಿಯಾಗಬೇಕು. ಹೀಗಾದಲ್ಲಿ ಭವಿಷ್ಯತ್ತಿನಲ್ಲಿ ಹಿಂದೂ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಲು ಸಾಧ್ಯವಿದೆ. ಇದಕ್ಕಾಗಿ ನಮ್ಮನ್ನು ಸಮರ್ಪಿಸಿಕೊಳ್ಳೋಣ ಎಂದು ಹೇಳಿದರು. 

ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ವಾಮನ ಪೈ ಅಧ್ಯಕ್ಷತೆ ವಹಿಸಿದ್ದರು.

ಸಂಚಲನಾ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಪ್ರಾಸ್ತಾವಿಕ ಮಾತುಗಳನ್ನಾಡಿ ಸೈನಿಕರ ಮಾರಣ ಹೋಮ ನಡೆದಾಗ ಪಾಕಿಸ್ಥಾನದ ಪರ ಕೆಲಸ ಮಾಡುವ, ಅವರಿಗೆ ಘೋಷಣೆ ಕೂಗುವ ಮತೀಯವಾದಿಗಳ ತಲೆ ಕತ್ತರಿಸಬೇಕು. ಎಲ್ಲರಿಗೂ ಸ್ವಾತಂತ್ರ್ಯ ನೀಡಿರುವ ಹಿಂದೂ ಧರ್ಮಕ್ಕೆ ಇದೀಗ ಅನ್ಯಾಯವಾಗಿದೆ. ಇದಕ್ಕಾಗಿ ದೇಶದಲ್ಲಿ ನೂರಾರು ವರ್ಷಗಳ ಧರ್ಮಾಧಾರಿತ ಆಡಳಿತ ನಡೆಯಬೇಕು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗ ಬೇಕು ಎಂದರು. ಕಾಶ್ಮೀರದಲ್ಲಿ ನಡೆದ ಹತ್ಯೆಯಲ್ಲಿ ಮೃತರಾದ ಸೈನಿಕರಿಗೆ ಅವರು ನುಡಿ ನಮನ ಸಲ್ಲಿಸಿದರು. 

ಕನ್ಯಾನ ಬಾಳೆಕೋಡಿ ಮಠದ ಸದ್ಗುರು ಡಾ.ಶಶಿಕಾಂತಮಾಣಿ ಸ್ವಾಮೀಜಿ, ಪುತ್ತೂರಿನ ವೈದ್ಯ ಡಾ. ಸುರೇಶ್ ಪುತ್ತೂರಾಯ, ಹಿಂದೂ ಜಾಗರಣಾ ವೇದಿಕೆಯ ಮುಖಂಡರಾದ ಡಾ. ಎಂ.ಕೆ. ಪ್ರಸಾದ್, ಅಜಿಇತ್ ಹೊಸಮೆನ, ಶಚಿನ್ ಪಾದೆಮಲು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಸ್ವಾಗತ ಸಮಿತಿ ಅಧ್ಯಕ್ಷ ರಾಜಾರಾಮ ಶೆಟ್ಟಿ ಕೋಲ್ಪೆ ಸ್ವಾಗತಿಸಿದರು. ಸಂಚಾಲಕ ಚಿನ್ಮಯ್ ಈಶ್ವರಮಂಗಲ ವಂದಿಸಿದರು.  ಸಭಾ ಕಾರ್ಯಕ್ರಮಕ್ಕೆ ಮೊದಲು ದರ್ಬೆಯಿಂದ ಆರಂಭಗೊಂಡ ಮೆರವಣಿಗೆಯು ಪುತ್ತೂರು ನಗರದ ಮುಖ್ಯ ರಸ್ತೆಯಲ್ಲಿ ಸಂಚರಿಸಿ ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ಸಮಾಪನಗೊಂಡಿತು. ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಡಾ.ಎಂ.ಕೆ.ಪ್ರಸಾದ್ ಮೆರವಣಿಗೆಗೆ ಚಾಲನೆ ನೀಡಿದರು. 

ಹಿಂದೂ ಚೈತನ್ಯ ಸಮಾವೇಶದಲ್ಲಿ ರವಿವಾರ ಬೆಳಿಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತಮಾನದ ತನಕ ಅರ್ಧ ಏಕಾಹ ಭಜನೆ,  ಭಜನಾ ಸಂಕೀರ್ತನೆ ನಡೆಯಿತು. ಸಂಕೀರ್ತನೆಯನ್ನು ರಾಮಕೃಷ್ಣ ಕಾಟುಕುಕ್ಕೆ ಉದ್ಘಾಟಿಸಿದರು. ಪುತ್ತೂರು ಶ್ರಿ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರೇಮಲತಾ ರಾವ್ ಅತಿಥಿಯಾಗಿ ಭಾಗವಹಿಸಿದ್ದರು. 

ಮಹಿಳಾ ಭಜನಾ ಸದಸ್ಯೆಯರಿಂದ ಸಾಮೂಹಿಕ ಹರಿನಾಮ ಸಂಕೀರ್ತನೆ ಹಾಗೂ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆಯಿತು. 

ಬಿಗು ಬಂದೋಬಸ್ತು:

ಚೈತನ್ಯ ಹಿಂದೂ ಸಮಾಜೋತ್ಸವದ ಹಿನ್ನಲೆಯಲ್ಲಿ ಪುತ್ತೂರಿನಲ್ಲಿ ಬಿಗು ಬಂದೋಬಸ್ತು ಮಾಡಲಾಗಿತ್ತು. ಜಿಲ್ಲೆಯ ಪೊಲೀಸರು ಮಾತ್ರವಲ್ಲದೆ ಚಿಕ್ಕಮಗಳೂರು, ಕಾರವಾರ ಮತ್ತು ಉಡುಪಿ ಜಿಲ್ಲೆಗಳಿಂದಲೂ ಪೊಲೀಸರನ್ನು ಕರೆಸಿಕೊಳ್ಳಲಾಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. 2 ಸಿಆರ್‍ಪಿಎಫ್ ತುಕಡಿಗಳನ್ನು ನಿಯೋಜಿಸಲಾಗಿತ್ತು. 

ಮದ್ಯದಂಗಡಿ ಬಂದ್: ಕಾರ್ಯಕ್ರಮದ ಹಿನ್ನಲೆಯಲ್ಲಿ ಪುತ್ತೂರು ಪಟ್ಟಣ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಎಲ್ಲಾ ಮದ್ಯದಂಗಡಿ ಗಳನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಬಂದ್ ಮಾಡಿಸಿದ್ದರು. ಸಂಜೆ ಸುಮಾರು 5.30ಕ್ಕೆ ಮೆರವಣಿಗೆ ನಡೆಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News