ವಿವಾದ ಸೃಷ್ಟಿಸಿದ ಕಾಶ್ಮೀರದ ಬಗ್ಗೆ ಕಮಲ್ ಹಾಸನ್ ಹೇಳಿಕೆ

Update: 2019-02-18 11:43 GMT

ಚೆನ್ನೈ, ಫೆ.18: ಕಾಶ್ಮೀರ ಜನಮತಗಣನೆ ಕುರಿತಂತೆ ಕಮಲ್‍ ಹಾಸನ್ ಅವರು ವ್ಯಕ್ತಪಡಿಸಿದ್ದಾರೆ ಎನ್ನಲಾದ ಅಭಿಪ್ರಾಯವನ್ನು ಸಂಪೂರ್ಣವಾಗಿ ತಿರುಚಲಾಗಿದೆ ಎಂದು ಅವರು ಪಕ್ಷ ಮಕ್ಕಳ್ ನೀಧಿ ಮಯಾಮ್ (ಎಂಎನ್‍ಎಂ) ಸ್ಪಷ್ಟಪಡಿಸಿದೆ.

ವಾರಾಂತ್ಯದಲ್ಲಿ ನಡೆದ ಸಮಾರಂಭವೊಂದರಲ್ಲಿ ಕಮಲ್‍ ಹಾಸನ್ ಮಾತನಾಡಿ, ಪುಲ್ವಾಮದಲ್ಲಿ 40 ಮಂದಿ ಸಿಆರ್‍ ಪಿಎಫ್ ಯೋಧರನ್ನು ಬಲಿ ತೆಗೆದುಕೊಂಡ ಆತ್ಮಹತ್ಯಾ ಬಾಂಬ್‍ ದಾಳಿ ಬಗ್ಗೆ ಮಾತನಾಡಿದ್ದರು. ಘಟನೆಯಲ್ಲಿ ಮೃತಪಟ್ಟ ಇಬ್ಬರು ಸೈನಿಕರ ಕುಟುಂಬಗಳ ಜತೆಗಿನ ಸಂಭಾಷಣೆಯನ್ನು ಅವರು ವಿವರಿಸಿದ್ದರು. ಕಾಶ್ಮೀರದಲ್ಲಿ ಏನು ನಡೆಯಬಹುದು ಎನ್ನುವುದನ್ನು ಊಹಿಸಿದ್ದೆ ಎಂದು ಕಮಲ್‍ ಹಾಸನ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಏಕೆ ಜನಮತಗಣನೆ ನಡೆದಿಲ್ಲ ಎಂದು ಪ್ರಶ್ನಿಸಿದ್ದರು. ಆದರೆ ಟ್ವಿಟರ್‍ನಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಅಶೋಕ್ ಪಂಡಿತ್ ಎಂಬುವವರು, "ನಿಮ್ಮ ಮನೆಯಲ್ಲಿ ಜನಮತಗಣನೆ ನಡೆದರೂ ನೀವು ಸೋಲುತ್ತೀರಿ ಹಾಗೂ ನಿಮ್ಮನ್ನು ಮನೆ ಬಿಡುವಂತೆ ಸೂಚಿಸಲಾಗುತ್ತದೆ. ದಯವಿಟ್ಟು ಬಾಯಿ ಮುಚ್ಚಿಕೊಂಡಿರಿ ಮತ್ತು ಭಯೋತ್ಪಾದನೆ ಸಂತ್ರಸ್ತರನ್ನು ನಿಂದಿಸಬೇಡಿ" ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.

"ವಾಸ್ತವವಾಗಿ ಕಮಲ್‍ ಹಾಸನ್ ಅವರು ಮೂರು ದಶಕದ ಹಿಂದೆ ನಿಯತಕಾಲಿಕದಲ್ಲಿ ಪ್ರಕಟವಾದ ಲೇಖನವನ್ನು ಉಲ್ಲೇಖಿಸಿ, ಇದೂ ಒಂದು ಪರಿಗಣಿಸಬಹುದಾದ ಅಂಶ ಎಂಬ ಅಭಿಪ್ರಾಯ ಆಗ ಇತ್ತು ಎಂದು ಹೇಳಿದ್ದರು.  ಆದರೆ ಅದು ಈಗ ಅಪ್ರಸ್ತುತ. ಇಂದು ಪಕ್ಷದ ನಿಲುವು ಅದಾಗಿಲ್ಲ" ಎಂದು ಎಂಎನ್‍ಎಂ ಸ್ಪಷ್ಟಪಡಿಸಿದೆ.

"ಇಡೀ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ನಮ್ಮ ಸೇನೆ, ಅರೆಮಿಲಿಟರಿ ಪಡೆ ಮತ್ತು ಕೇಂದ್ರೀಯ ಪೊಲೀಸ್ ಪಡೆಗಳ ಬೆಂಬಲಕ್ಕೆ ನಾವಿದ್ದೇವೆ" ಎಂದು ಪ್ರಕಟಣೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News