ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಸದನದಲ್ಲೇ ಅತ್ತ ಶಾಸಕ: ಕಾರಣವೇನು ಗೊತ್ತಾ?

Update: 2019-02-18 11:45 GMT

ಲಕ್ನೋ, ಫೆ.18: ಉತ್ತರ ಪ್ರದೇಶ ವಿಧಾನಸಭೆ ಸೋಮವಾರ ಅಪರೂಪದ ಘಟನೆಗೆ ಸಾಕ್ಷಿಯಾಯಿತು. ವಿರೋಧ ಪಕ್ಷವಾದ ಸಮಾಜವಾದಿ ಪಕ್ಷದ ಶಾಸಕ ಸದನದಲ್ಲಿ ಅಕ್ಷರಶಃ ಕಣ್ಣೀರಿಟ್ಟರು. "ನನ್ನ 10 ಲಕ್ಷ ರೂಪಾಯಿ ಕಳ್ಳತನವಾಗಿದೆ. ಇದನ್ನು ಪತ್ತೆ ಮಾಡದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ" ಎಂದು ಶಾಸಕ ಕಲ್ಪನಾಥ್ ಪಾಸ್ವಾನ್ ಗೋಳಿಟ್ಟರು. ಈ ಸಂಬಂಧ ಎಫ್‍ಐಆರ್ ಇನ್ನೂ ದಾಖಲಾಗಿಲ್ಲ ಅಝಂಗಡ ಜಿಲ್ಲೆಯ ಮೆಹ್‍ ನಗರದ ಶಾಸಕ ಸ್ಪಷ್ಟಪಡಿಸಿದರು.

"ಈ ಸದನದಲ್ಲಿ ನಾನು ಕೈಮುಗಿದು ಬೇಡಿಕೊಳ್ಳುತ್ತಿದ್ದೇನೆ. ಇಲ್ಲೂ ನನಗೆ ನ್ಯಾಯ ಸಿಗದಿದ್ದರೆ ನಾನು ಎಲ್ಲಿಹೋಗಬೇಕು?, ನಾನು ಸಾಯುತ್ತೇನೆ. ನಾನು ಬಡ ವ್ಯಕ್ತಿ. ನನ್ನ ಹಣವನ್ನು ಮರಳಿ ಕೊಡಿಸದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ" ಎಂದು ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಪಾಸ್ವಾನ್ ಹೇಳಿದರು.

ಅಝಂಗಡ ಹೋಟೆಲ್‍ನಲ್ಲಿ ಈ ಕಳ್ಳತನ ನಡೆದಿದ್ದು, ಇದುವರೆಗೂ ಎಫ್‍ಐಆರ್ ದಾಖಲಿಸಿಕೊಂಡಿಲ್ಲ ಎಂದು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಸುರೇಶ್ ಕುಮಾರ್, ಈ ಬಗ್ಗೆ ವರದಿ ತರಿಸಿಕೊಂಡು ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು. ತಕ್ಷಣ ಎಫ್‍ಐಆರ್ ದಾಖಲಿಸಿಕೊಳ್ಳಲು ಸೂಚನೆ ನೀಡುವುದಾಗಿಯೂ ಅವರು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News