ಉಡುಪಿ: ಜಿ.ಶಂಕರ್ ಟ್ರಸ್ಟ್‌ನಿಂದ ಹುತಾತ್ಮ ಯೋಧರ ಕುಟುಂಬಗಳಿಗೆ 25 ಲಕ್ಷ ರೂ. ದೇಣಿಗೆ

Update: 2019-02-18 11:49 GMT

ಉಡುಪಿ, ಫೆ.18: ಕಾಶ್ಮೀರದ ಪುಲ್ವಾಮದಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ 25 ಲಕ್ಷ ರೂ. ದೇಣಿಗೆಯನ್ನು ನೀಡಲಾಯಿತು.

ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ, ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಸಮಾನ ಮನಸ್ಕ ಸಂಘ ಸಂಸ್ಥೆ ಗಳು, ವಿವಿಧ ಶಾಲಾ ಕಾಲೇಜುಗಳ ಸಹಯೋಗದೊಂದಿಗೆ ಅಂಬಲಪಾಡಿ ಶ್ಯಾಮಿಲಿ ಸಭಾಂಗಣ ದಲ್ಲಿ ಸೋಮವಾರ ಆಯೋಜಿಸಲಾದ ಕಾಶ್ಮೀರದ ಪುಲ್ವಾಮದಲ್ಲಿ ಹುತಾತ್ಮ ರಾದ ಯೋಧರಿಗೆ ಅಶ್ರುತರ್ಪಣ ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಅಧ್ಯಕ್ಷ ಜಿ.ಶಂಕರ್, ಉಡುಪಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅವರಿಗೆ 25ಲಕ್ಷ ರೂ. ಮೊತ್ತದ ಚೆಕ್‌ನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿ.ಶಂಕರ್, ಟ್ರಸ್ಟ್‌ನಿಂದ ನೀಡಿರುವ 25 ಲಕ್ಷ ರೂ. ಸಮರ್ಪಕವಾಗಿ ಬಳಕೆ ಆಗಬೇಕು. ಈ ದೇಣಿಗೆಯನ್ನು ಪ್ರಧಾನ ಮಂತ್ರಿ ಅಥವಾ ಮುಖ್ಯಮಂತ್ರಿ ಪರಿಹಾರ ನಿಧಿಗಳಿಗೆ ಕಳುಹಿಸದೆ, ನೇರವಾಗಿ ಸಂತ್ರಸ್ತ ಯೋಧರ ಕುಟುಂಬಕ್ಕೆ ಸಿಗುವಂತೆ ಮಾಡಬೇಕು. ನಾವು ನೀಡಿದ್ದನ್ನು ತೃಪ್ತಿಕರವಾಗಿ ಆ ಕುಟುಂಬಗಳಿಗೆ ಮುಟ್ಟಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕು ಎಂದು ಹೇಳಿದರು.

ನಾವು ಸುಖ ಶಾಂತಿ ನೆಮ್ಮದಿಯಿಂದ ಬದುಕುವಂತೆ ಮಾಡುತ್ತಿರುವ ದೇಶ ಕಾಯುವ ಯೋಧರ ಪರಿಸ್ಥಿತಿ ಮಾತ್ರ ಬಹಳ ಅಪಾಯದಲ್ಲಿದೆ. ಆದುದರಿಂದ ಅವರಿಗೆ ಧೈರ್ಯ ತುಂಬುವ, ಶಕ್ತಿ ನೀಡುವ ಕೆಲಸವನ್ನು ಮಾಡಬೇಕಾಗಿದೆ. ರಾಜಕಾರಣಿಗಳು, ಅತಿ ಗಣ್ಯರಿಗೆ ನೀಡುವಂತೆ ಸೈನಿಕರಿಗೂ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಬೇಕು. ಸೈನಿಕರು ಸಾಗುವ ದಾರಿಯಲ್ಲಿ ಯಾರು ಬಾರದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ರಕ್ಷಣಾ ಇಲಾಖೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.

ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಮಾತನಾಡಿ, ಟ್ರಸ್ಟ್ ನೀಡಿರುವ ದೇಣಿಗೆಯನ್ನು ಹುತಾತ್ಮ ಯೋಧರ ಕುಟುಂಬಗಳಿಗೆ ಸರಕಾರದ ಪರವಾಗಿ ತಲುಪಿಸುವ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ. ಆದುದರಿಂದ ಈ ಹಣ ವನ್ನು ಕುಟುಂಬಗಳಿಗೆ ತಲುಪಿಸುವ ನಿಟ್ಟಿನಲ್ಲಿ ಚೆಕ್‌ನ್ನು ಮುಖ್ಯಮಂತ್ರಿ ಕಚೇರಿಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.

ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ವಿನಯ ಕರ್ಕೇರ, ಮೊಗ ವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಉಡುಪಿ ಡಿವೈಎಸ್ಪಿ ಜೈಶಂಕರ್, ಅಜ್ಜರಕಾಡು ಸರಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಭಾಸ್ಕರ ಶೆಟ್ಟಿ, ಉಪನ್ಯಾಸಕ ಪ್ರೊ.ನಿತ್ಯಾನಂದ ಎನ್., ವಿದ್ಯಾರ್ಥಿನಿ ಸಮೀನಾ, ಸಂವೇದನಾ ಟ್ರಸ್ಟ್‌ನ ಪ್ರಕಾಶ್ ಮಲ್ಪೆ, ಯೋಧರಾದ ತಾರನಾಥ್, ಉಮೇಶ್ ಸುವರ್ಣ, ಸುರೇಶ್ ಬಾರಕೂರು, ಬಾಲರಾಜ್ ಪಿತ್ರೋಡಿ ನುಡಿ ನಮನ ಸಲ್ಲಿಸಿದರು.

ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ವಿಜಯ ಬ್ಯಾಂಕಿನ ಉಪಮಹಾ ಪ್ರಬಂಧಕ ರವಿಚಂದ್ರನ್, ನಿವೃತ್ತ ಯೋಧ ಅರುಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಪ್ರೊ.ಪ್ರಕಾಶ್ ಕ್ರಮಧಾರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ನೆರೆದ ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಕ್ಯಾಂಡಲ್ ಹತ್ತಿಸಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕರಾವಳಿ ಜಿಲ್ಲೆಯವರು ಸೈನ್ಯಕ್ಕೆ ಸೇರುವುದು ಬಹಳ ಕಡಿಮೆ. ಇದಕ್ಕೆ ಕಾರಣ ನಮ್ಮ ಈ ಬಗ್ಗೆ ಯುವಕರಿಗೆ ಯಾವುದೇ ಒತ್ತಡ ಹಾಗೂ ಮಾರ್ಗದರ್ಶನವನ್ನು ನೀಡುವವರಿಲ್ಲ. ಸೈನ್ಯದ ಹಿನ್ನಲೆ ಕೂಡ ನಮ್ಮಲ್ಲಿ ತೀರಾ ಕಡಿಮೆ. ಆದುದರಿಂದ ರಾಷ್ಟ್ರೀಯ ಹಬ್ಬಗಳ ಆಚರಣೆ ಸಂದರ್ಭ ಸೈನಿಕರನ್ನು ಗುರುತಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡ ಬೇಕು.
-ಸುರೇಶ್ ಬಾರಕೂರು, ಯೋಧ

ಕಳೆದ 15 ವರ್ಷಗಳಿಂದ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೈನಸ್ ಡಿಗ್ರಿಯ ಚಳಿಯಲ್ಲೂ ಕೆಲಸ ಮಾಡಿದ್ದೇನೆ ಮತ್ತು ಬೆವರಿನಿಂದ ಸ್ನಾನ ಮಾಡಿಸುವ ರಾಜಸ್ತಾನದಲ್ಲೂ ಕೆಲಸ ಮಾಡಿದ್ದೇನೆ. ಈ ಕೆಲಸದಲ್ಲಿ ಕಷ್ಟದ ಜೊತೆ ಒಂದು ರೀತಿಯ ಥ್ರಿಲ್ ಕೂಡ ಇದೆ. ಪ್ರತಿಯೊಬ್ಬರು ತಮ್ಮ ಮನೆಯ ಮಕ್ಕಳನ್ನು ಸೈನ್ಯಕ್ಕೆ ಸೇರಿಸುವ ಕೆಲಸ ಮಾಡಬೇಕು.
-ತಾರನಾಥ್, ಯೋಧ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News