ಮಸೂದ್ ಅಝರ್ ನನ್ನು 1999ರಲ್ಲಿ ಬಿಟ್ಟವರು ಯಾರು: ಸಿಧು ಪ್ರಶ್ನೆ

Update: 2019-02-18 11:55 GMT

ಹೊಸದಿಲ್ಲಿ, ಫೆ.18: ಪುಲ್ವಾಮ ಉಗ್ರರ ದಾಳಿ ಘಟನೆಗೆ ಸಂಬಂಧಿಸಿದ ಹೇಳಿಕೆಯಿಂದ ಆಕ್ರೋಶಕ್ಕೆ ಗುರಿಯಾಗಿರುವ ಪಂಜಾಬ್ ಸಚಿವ ನವಜ್ಯೋತ್ ಸಿಂಗ್ ಸಿಧು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

"ಜೆಇಎಂ ಮುಖ್ಯಸ್ಥ ಮಸೂದ್ ಅಝರ್ ‍ನನ್ನು 1999ರಲ್ಲಿ ಕಂದಹಾರ್ ‍ನಲ್ಲಿ ಬಿಡುಗಡೆ ಮಾಡಿದವರು ಯಾರು ಎಂದು ನಾನು ತಿಳಿಯಬಯಸುತ್ತೇನೆ" ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

1999ರಲ್ಲಿ ಐಸಿ 814 ವಿಮಾನ ಅಪಹರಣದ ಸಂದರ್ಭದಲ್ಲಿ ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಭಾರತೀಯ ಜೈಲಿನಲ್ಲಿದ್ದ ಮೂವರು ಉಗ್ರರನ್ನು ಬಿಡುಗಡೆ ಮಾಡಿದ್ದನ್ನು ಸಿಧು ಉಲ್ಲೇಖಿಸಿದರು. ಅಪಹೃತ ವಿಮಾನದಲ್ಲಿದ್ದ 180 ಪ್ರಯಾಣಿಕರ ಮತ್ತು ಸಿಬ್ಬಂದಿ ಜೀವ ಉಳಿಸುವ ಸಲುವಾಗಿ ಇವರನ್ನು ಬಿಡುಗಡೆ ಮಾಡಲಾಗಿತ್ತು.

ಹೀಗೆ ಬಿಡುಗಡೆಯಾದ ಉಗ್ರರ ಪೈಕಿ ಮಸೂದ್ ಅಝರ್ ಒಬ್ಬ. ಈತ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯಾದ ಜೈಶ್ ಗೆ ಸೇರಿದ್ದು, ಇದೇ ಸಂಘಟನೆ ಫೆಬ್ರವರಿ 14ರ ಪುಲ್ವಾಮಾ ದಾಳಿ ನಡೆಸಿದೆ.

ದಾಳಿ ನಡೆದ ತಕ್ಷಣ ಪ್ರತಿಕ್ರಿಯಿಸಿದ ಸಿಧು, ಕೆಲವರು ಮಾಡಿದ ದಾಳಿಗೆ ಇಡೀ ದೇಶವನ್ನು ದೂಷಿಸಬೇಕೇ ಎಂದು ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News