ನವಜೋತ್ ಸಿಧು ವಜಾಕ್ಕೆ ಅಕಾಲಿ ದಳ ಆಗ್ರಹ, ಸದನದಲ್ಲಿ ಕೋಲಾಹಲ

Update: 2019-02-18 12:25 GMT

ಚಂಡೀಗಡ, ಫೆ.18: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ನೀಡಿದ ವಿವಾದಾತ್ಮಕ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ನವಜೋತ್ ಸಿಂಗ್ ಸಿಧುರನ್ನು ಪಂಜಾಬ್ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷವಾಗಿರುವ ಶಿರೋಮಣಿ ಅಕಾಲಿದಳ ಸೋಮವಾರ ಆಗ್ರಹಿಸಿದ ಬಳಿಕ ಸದನದಲ್ಲಿ ಗದ್ದಲದ ಸ್ಥಿತಿ ನೆಲೆಸಿತು.

ಇದೇ ಸಂದರ್ಭ ಅಕಾಲಿ ಮುಖಂಡ ಬಿಕ್ರಮ್‌ಸಿಂಗ್ ಮಜೀಥಿಯಾ ಹಾಗೂ ನವಜೋತ್ ಸಿದು ನಡುವೆ ವಿಧಾನಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು. ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ಮಜೀಥಿಯಾ ನೇತೃತ್ವದಲ್ಲಿ ಅಕಾಲಿದಳ ಮುಖಂಡರು ವಿಧಾನಸಭೆಯ ಹೊರಗಡೆ ಪ್ರತಿಭಟನೆ ನಡೆಸಿ ಸಿಧು ಅವರ ಪ್ರತಿಕೃತಿ ದಹಿಸಿದರು.

ಕಳೆದ ವರ್ಷದ ಆಗಸ್ಟ್ 18ರಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್ ಪದಗ್ರಹಣ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಸಿಧು ಉಪಸ್ಥಿತರಿದ್ದರು. ಅಲ್ಲದೆ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಸೇನಾಪಡೆಯ ಮುಖ್ಯಸ್ಥರನ್ನು ಆಲಿಂಗಿಸಿಕೊಂಡಿದ್ದು ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಪಂಜಾಬ್ ವಿಧಾನಸಭೆಯಲ್ಲಿ ಸೋಮವಾರ ಪುಲ್ವಾಮ ಘಟನೆಯನ್ನು ಖಂಡಿಸಿ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಗಿದೆ. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮಜೀಥಿಯ, ಕಾಂಗ್ರೆಸ್ ಮತ್ತು ಪಂಜಾಬ್ ಸರಕಾರದ ಸ್ಪಷ್ಟ ನಿಲುವೇನೆಂದು ಮೊದಲು ತಿಳಿಯಬೇಕಿದೆ . ಅವರು ಪಾಕ್ ಸೇನಾಪಡೆಯ ಮುಖ್ಯಸ್ಥ ಹಾಗೂ ಪ್ರಧಾನಿಯನ್ನು ಖಂಡಿಸುತ್ತಾರೆಯೇ ಎಂದು ಪ್ರಶ್ನಿಸಿದರು.

ಪುಲ್ವಾಮ ದಾಳಿಯ ಬಳಿಕವೂ ಸಿಧು, ಕೆಲವು ವ್ಯಕ್ತಿಗಳು ಮಾಡಿದ ಕೃತ್ಯಕ್ಕೆ ಇಡೀ ರಾಷ್ಟ್ರವನ್ನು ದೂರುವುದು ಸರಿಯಲ್ಲ ಎನ್ನುತ್ತಿದ್ದಾರೆ. ಇಂತಹ ಹೇಳಿಕೆ ನೀಡಿರುವುದಕ್ಕಾಗಿ ಅವರನ್ನು ಸಚಿವ ಸಂಪುಟದಿಂದ ಉಚ್ಛಾಟಿಸಬೇಕು ಎಂದು ಆಗ್ರಹಿಸಿದರು. ಬಳಿಕ ಸದನದಲ್ಲಿ ಪ್ರಶ್ನೋತ್ತರ ಅವಧಿ ಆರಂಭವಾಗುತ್ತಿದ್ದಂತೆಯೇ ಕಪ್ಪು ಬಣ್ಣದ ಬ್ಯಾಜ್ ಧರಿಸಿದ್ದ ಅಕಾಲಿದಳ ಮತ್ತು ಬಿಜೆಪಿ ಶಾಸಕರು ಎದ್ದುನಿಂತು ಸಿದು ವಿರುದ್ಧ ಘೋಷಣೆ ಕೂಗತೊಡಗಿದರು. ಇದಕ್ಕೆ ಸಿದು ಉತ್ತರಿಸಲು ಮುಂದಾದಾಗ ಸಿದು ಮತ್ತು ಮಜೀಥಿಯಾ ಮಧ್ಯೆ ಏರುದನಿಯಲ್ಲಿ ಮಾತಿನ ಚಕಮಕಿ ನಡೆಯಿತು. ಸಿಧು ಪಾಕಿಸ್ತಾನದ ಭೇಟಿ ಸಂದರ್ಭ ಪಾಕ್ ಸೇನಾಧಿಕಾರಿಯನ್ನು ಆಲಿಂಗಿಸಿಕೊಂಡ ಸುದ್ದಿ ಮತ್ತು ಫೋಟೋವನ್ನು ಸದನದಲ್ಲಿ ಪ್ರದರ್ಶಿಸಿದ ಮಜೀಥಿಯಾ, ಅದನ್ನು ಹರಿದುಹಾಕಿದರಲ್ಲದೆ ಸಿದುರವರ ಪಾಕಿಸ್ತಾನ ಪ್ರೇಮಕ್ಕೆ ಮುರ್ದಾಬಾದ್ ಎಂದು ಘೋಷಣೆ ಕೂಗಿದರು.

ಈ ಸಂದರ್ಭ ತಾಳ್ಮೆ ಕಳೆದುಕೊಂಡ ಸಿದು ಎದ್ದುನಿಂತು ಮಜೀಥಿಯಾರನ್ನು ಉದ್ದೇಶಿಸಿ ನೀನು ಕಳ್ಳ, ಡಕಾಯಿತ ಎಂದು ಏರುಧ್ವನಿಯಲ್ಲಿ ಹೇಳಿದರು. ಇಬ್ಬರು ನಾಯಕರೊಳಗೆ ಸುಮಾರು 10 ನಿಮಿಷ ಮಾತಿನ ಚಕಮಕಿ ನಡೆಯಿತು. ಸಮಾಧಾನ ಪಡಿಸಲು ಸ್ಪೀಕರ್ ಕೈಗೊಂಡ ಕ್ರಮ ವಿಫಲವಾಯಿತು. ಸಿದು ಉಚ್ಛಾಟನೆಗೆ ಆಗ್ರಹ ಮುಂದುವರಿಸಿದ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಗದ್ದಲ ಜೋರಾದ ಕಾರಣ ಪಂಜಾಬ್ ವಿತ್ತ ಸಚಿವ ಮನ್‌ಪ್ರೀತ್ ಬಾದಲ್ ಬಜೆಟ್ ಮಂಡಿಸಲು ಅಡ್ಡಿಯಾಯಿತು. ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದ ಸದಸ್ಯರನ್ನು ಹೊರಗೆ ಕಳುಹಿಸಲು ಸ್ಪೀಕರ್ ಆದೇಶಿಸಿ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ಮಧ್ಯಾಹ್ನದ ಬಳಿಕ ಕಲಾಪ ಆರಂಭವಾಯಿತು ಮತ್ತು ಗದ್ದಲದ ಮಧ್ಯೆಯೇ ಬಾದಲ್ ಬಜೆಟ್ ಭಾಷಣ ಆರಂಭಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News