ಉಳ್ಳಾಲ: ಪ್ರಚೋದನಕಾರಿ ಫ್ಲೆಕ್ಸ್ ತೆರವುಗೊಳಿಸಿದ ಪೊಲೀಸರು

Update: 2019-02-18 13:23 GMT

ಮಂಗಳೂರು, ಫೆ.18: ಉಳ್ಳಾಲದ ಜನನಿಬಿಡ ಪ್ರದೇಶವಾದ ಉಳ್ಳಾಲ ಬೈಲ್‌ನಲ್ಲಿ ಸಂಘಪರಿವಾರದ ಸಂಘಟನೆಯೊಂದು ಅಳವಡಿಸಿದ ಫ್ಲೆಕ್ಸ್ ನ್ನು ಉಳ್ಳಾಲ ಪೊಲೀಸರು ರವಿವಾರ ರಾತ್ರಿ ತೆರವುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ದೇಶದ ಗಡಿಕಾಯುವ ಸೈನಿಕರ ಮೇಲೆ ದಾಳಿ ನಡೆಸಿ ಹತೈಗೈದ ಕೃತ್ಯಕ್ಕೆ ಸಂಬಂಧಿಸಿ ‘ವಿಶ್ವಹಿಂದೂ ಪರಿಷತ್ ಬಜರಂಗ ದಳ’ ಎಂಬ ಹೆಸರಿನಲ್ಲಿ ಉಳ್ಳಾಲ ಬೈಲ್‌ನ ಶ್ರೀ ವೈದ್ಯನಾಥ ಛತ್ರಪತಿ ಶಾಖೆಯ ವತಿಯಿಂದ ಉಳ್ಳಾಲ ಬೈಲ್‌ನಲ್ಲಿ ಪ್ರಚೋದನಕಾರಿ ಫ್ಲೆಕ್ಸ್ ಅಳವಡಿಸಿತ್ತು. ಅಂದರೆ ‘ದೇಶದ ಯೋಧರ ಸಾವಲ್ಲೂ ಅಲ್ಪಸಂಖ್ಯಾತರ ನಗು, ಶತ್ರುಗಳು ದೇಶದ ಹೊರಗಿಲ್ಲ- ದೇಶದ ಒಳಗಡನೇ ಇದ್ದಾರೆ’ ಎಂದು ಬರೆಯಲಾಗಿತ್ತು. ಅಲ್ಲದೆ ‘ಮ್ಯಾಂಗಳೂರ್ ಮುಸ್ಲಿಂ ಫೇಸ್ ಬುಕ್ ಪೇಜ್‌ನ ಕೆಲವು ತುಣುಕುಗಳನ್ನೂ ಕೂಡ ಫ್ಲೆಕ್ಸ್‌ನಲ್ಲಿ ಅಳವಡಿಸಿತ್ತು.

ಅಲ್ಪಸಂಖ್ಯಾತ ಸಮುದಾಯವನ್ನು ಸಂಶಯದ ದೃಷ್ಟಿಯಿಂದ ನೋಡುವ ಷಡ್ಯಂತ್ರದ ಭಾಗ ಇದಾಗಿದೆ. ಇದು ಪರಿಸರದಲ್ಲಿ ಅಶಾಂತಿಗೆ ಕಾರಣವಾಗಬಹುದು ಎಂದು ಸ್ಥಳೀಯ ಸಂಘಟನೆಗಳ ಪ್ರಮುಖರು ತಕ್ಷಣ ಉಳ್ಳಾಲ ಪೊಲೀಸರ ಗಮನ ಸೆಳೆದರು. ಅದರಂತೆ ಉಳ್ಳಾಲ ಠಾಣೆಯ ಪೊಲೀಸ್ ಅಧಿಕಾರಿಗಳು ಸಂಬಂಧಪಟ್ಟ ಶಾಖೆಯ ಪ್ರಮುಖರನ್ನು ಕರೆಯಿಸಿ ಫ್ಲೆಕ್ಸ್ ತೆರವುಗೊಳಿಸಿದರು ಎಂದು ಮೂಲಗಳು ತಿಳಿಸಿವೆ.

ಈ ಹಿಂದೆಯೂ ಮ್ಯಾಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್‌ನಲ್ಲಿ ಉಲ್ಲೇಖಿಸಲ್ಪಟ್ಟ ವಿಚಾರಗಳು ಚರ್ಚೆಗೆ ಗ್ರಾಸ ಒದಗಿಸಿತ್ತು. ಅಲ್ಲದೆ ಈ ಫೇಸ್ ಬುಕ್ ಪೇಜ್‌ನ ಹಿಂದೆ ಇರುವವರು ಯಾರು? ಎಂದು ತನಿಖೆ ನಡೆಸಿ ಅವರ ವಿರುದ್ಧ ಕಠಿಣ ಕ್ರಮಕ್ಕೂ ಮುಸ್ಲಿಂ ಸಂಘಟನೆಗಳು ಒತ್ತಾಯಿಹಿಸಿದ್ದವು. ಆದರೆ ಪೊಲೀಸ್ ಇಲಾಖೆಯ ಸೈಬರ್ ವಿಂಗ್‌ಗೆ ಇನ್ನೂ ಈ ಪೇಜ್‌ನ ಮೂಲ ಹುಡುಕಲು ಸಾಧ್ಯವಾಗದಿರುವ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News